ಕಟಕೋಳ: ಭಕ್ತರು, ರೈತರು ಜಾತ್ರೆಯಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನ ಮಾದರಿಗಳನ್ನು ನೋಡಿಕೊಂಡು ವಿವಿಧ ಇಲಾಖೆಯಡಿ ಸಿಗುವ ಸೌಲಭ್ಯಗಳ ಮಾಹಿತಿ ಪಡೆದುಕೊಂಡರೆ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದು ಶಾಸಕ ಅಶೋಕ ಪಟ್ಟಣ ಕರೆ ನೀಡಿದರು.
ಕಟಕೋಳ ಸಮೀಪದ ಸುಕ್ಷೇತ್ರ ಗೊಡಚಿಯ ವೀರ ಭದ್ರೇಶ್ವರ ಜಾತ್ರೆ ಪ್ರಯುಕ್ತ ಜಿಪಂ, ತಾಪಂ ಹಾಗೂ ಗ್ರಾಪಂ ಸಂಯುಕ್ತ ಆಶ್ರಯ ದಲ್ಲಿ ಮಂಗಳವಾರ ಏರ್ಪಡಿಸಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮಸ್ಥರು ಶಾಶ್ವತ ಮಳಿಗೆಗಳ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು, ಮುಂಬರುವ ವರ್ಷದ ಜಾತ್ರೆಯೊಳಗಾಗಿ ಕಟ್ಟಡ ನಿರ್ಮಿಸಲಾಗುವುದು ಎಂದರು.
ಹಿರಿಯ ಮುಖಂಡ ಪತ್ರೆಪ್ಪ ಮಲ್ಲಾಪುರ ಮಾತನಾಡಿ, ಶಾಸಕರು ನನೆಗುದಿಗೆ ಬಿದ್ದಿರುವ ವೀರಭದ್ರೇಶ್ವರ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಕಿಲ್ಲಾ ತೊರಗಲ್ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ರಾಮದುರ್ಗ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ವೈಶಾಲಿ ಅಕ್ಕ ಮಾತನಾಡಿದರು.
ವೀರಭದ್ರೇಶ್ವರರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ವಿವಿಧೆಡೆಯಿಂದ ಆಗಮಿಸಿದ ಭಕ್ತರು ರಥೋತ್ಸವಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿ ದೇವರ ದರ್ಶನ ಪಡೆದರು. ಗ್ರಾಪಂ ಅಧ್ಯಕ್ಷೆ ಲಕ್ಕವ್ವ ವಗ್ಗರ ಅಧ್ಯಕ್ಷತೆ ವಹಿಸಿದ್ದರು. ಮುಪ್ಪಯ್ಯ ಶಾಸಿ ಹಿರೇಮಠ, ವೀರೇಶ ಹಿರೇಮಠ ತಾಪಂ ಇಒ ಪ್ರವೀಣಕುಮಾರ ಸಾಲಿ, ಧರ್ಮಾಧಿಕಾರಿ ಶ್ರೀಮಂತ ಎಸ್.ಪಿ, ಶಿಂಧೆ ಮಹಾರಾಜರು, ಗ್ರಾಪಂ ಉಪಾಧ್ಯಕ್ಷ ಶಿವಲಿಂಗಯ್ಯ ಪೂಜೇರ, ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಹೆಸ್ಕಾಂ ಅಧಿಕಾರಿ ಕಿರಣ ಸಣ್ಣಕ್ಕಿ, ಅಧಿಕಾರಿಗಳಾದ ಸಂಗೀತಾ ಕುರೇರ, ಶ್ರೀನಿವಾಸ ವಿಶ್ವಕರ್ಮ, ಎನ್.ಕೆ ನಿಜಗುಲಿ, ಶಿವಪ್ರಕಾಶ ಕರಡಿ, ಪಿಡಿಒ ಸಿ.ಕೆ. ಕೊಪ್ಪದ, ಮುಖಂಡರಾದ ರಾಯಪ್ಪ ಕತ್ತಿ, ಜಿ.ಬಿ. ರಂಗನಗೌಡ್ರ, ಬಾಳನಗೌಡ ಪಾಟೀಲ, ಬಸನಗೌಡ ದ್ಯಾಮನಗೌಡ್ರ, ನಾಗನಗೌಡ ಜಾಮದಾರ, ಸಂಜು ಹಳ್ಳಿ, ಈರನಗೌಡ ಪಾಟೀಲ ಇತರರಿದ್ದರು.