More

    ಖಾತೆ ಹಂಚಿಕೆ ಸಮಯದಲ್ಲಿ ಅಸಮಾಧಾನ ಸಹಜ : ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

    ತುಮಕೂರು : ಖಾತೆ ಹಂಚಿಕೆ ಸಂದರ್ಭದಲ್ಲಿ ಅಸಮಾಧಾನದ ಹೊಗೆಯೇಳುವುದು ಸಹಜ. ಎಲ್ಲ ಸರ್ಕಾರದಲ್ಲಿ ಇದ್ದದ್ದೇ. ಸಿಎಂ ಬಸವರಾಜ ಬೊಮ್ಮಯಿ ಚಾಣಾಕ್ಷರಿದ್ದಾರೆ. ಅವರು ಈ ಗೊಂದಲ ನಿಭಾಯಿಸುತ್ತಾರೆ ಎಂದು ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

    ನಾನೂ ಕೂಡ ಯಾವುದೇ ಖಾತೆ ಬೇಕು ಎಂದು ಬೇಡಿಕೆ ಇಟ್ಟಿರಲಿಲ್ಲ. ನನ್ನ ಮೇಲೆ ಭರವಸೆ ಇಟ್ಟು ಹಿರಿಯವರು ಗೃಹ ಖಾತೆ ಕೊಟ್ಟಿದ್ದಾರೆ. ಸಂಘಟನೆ, ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿಗಳು ಎಲ್ಲರೂ ಸೇರಿ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುವ ಭರವಸೆ ನನ್ನದು ಎಂದು ಸಿದ್ಧಗಂಗಾಮಠದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

    ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಬಳಿಕ ಮಾತನಾಡಿದ ಆರಗ ಜ್ಞಾನೇಂದ್ರ, ಸೋಮವಾರ ಗೃಹ ಇಲಾಖೆ ಅಧಿಕಾರಿಗಳ ಜತೆ ಮೊದಲ ಸಭೆ ನಡೆಸಲಿದ್ದೇನೆ. ಆ ಮೂಲಕ ಅಧಿಕೃತವಾಗಿ ಅಧಿಕಾರವಹಿಸಿಕೊಳ್ಳಲಿದ್ದೇನೆ. ಅದಕ್ಕೂ ಮುಂಚೆ ಸಿದ್ಧಗಂಗಾ ಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದೇನೆ. ಪೊಲೀಸ್ ಇಲಾಖೆ ಸಶಕ್ತವಾಗಿ ಕೆಲಸ ಮಾಡುವ ಹಾಗೆ ಶಕ್ತಿ ತುಂಬಬೇಕೆಂಬ ಚಿಂತನೆ ನನ್ನದು ಎಂದರು.

    ಹಿರಿಯ ಅಧಿಕಾರಿಗಳ ಜತೆ ಚರ್ಚೆ ಮಾಡಿ ಇಲಾಖೆಯಲ್ಲಿ ಇಷ್ಟು ವರ್ಷ ತರಲಾಗದೇ ಇದ್ದ ಏನಾದರೊಂದು ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಔರಾದ್ಕರ್ ವರದಿ ಅಧ್ಯಯನ ಮಾಡಿ ಪೊಲೀಸರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹೆಜ್ಜೆ ಇಡುವೆ ಎಂದು ತಿಳಿಸಿದರು.

    ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡುಶಿವಣ್ಣ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಶಿವಪ್ರಸಾದ್, ಕೊಪ್ಪಲ್ ನಾಗರಾಜ್, ಬ್ಯಾಟರಂಗೇಗೌಡ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts