More

    ನಕಲಿ ಎಸ್‌ಟಿ ಪ್ರಮಾಣ ಪತ್ರ ವಿತರಣೆ ಖಂಡಿಸಿ ವಾಲ್ಮೀಕಿ ಸಮಾಜದಿಂದ ಬೃಹತ್ ಪ್ರತಿಭಟನೆ

    ವಿಜಯಪುರ: ಹಿಂದುಳಿದ ಜಾತಿಗೆ ಸೇರಿರುವ ಅಂಬಿಗ, ಕಬ್ಬಲಿಗ ತಳವಾರರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುತ್ತಿರುವುದನ್ನು ಖಂಡಿಸಿ ವಾಲ್ಮೀಕಿ ಸಮಾಜದ ಮುಖಂಡರು ಸೋಮವಾರ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಽಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ನಡೆಸಿದರು.

    ಈ ವೇಳೆ ಮಾತನಾಡಿದ ರಾಜ್ಯ ಎಸ್‌ಸಿ, ಎಸ್‌ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಸಮಿತಿ ಪ್ರಧಾನ ಕಾರ್ಯದರ್ಶಿ ಮಾರೆಪ್ಪ ನಾಯಕ ಮಗ್ದಂಪೂರ, ಜಿಲ್ಲೆಯಲ್ಲಿ ತಳವಾರ ಜಾತಿ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುತ್ತಿದ್ದು, ನಕಲಿ ತಳವಾರ ಜಾತಿ ಪ್ರಮಾಣ ಪತ್ರವನ್ನು ಸಾವಿರಾರು ಜನರು ಪಡೆದುಕೊಂಡಿದ್ದಾರೆ. ಅದರಿಂದ ನಿಜವಾಗಿಯೂ ನಾಯಕ, ಬೇಡ, ಬೇಡರ, ವಾಲ್ಮೀಕಿ ಸಮುದಾಯದ ಜನರಿಗೆ ಅನ್ಯಾಯವಾಗುತ್ತಿದೆ. ನಾಯಕ ಜಾತಿಗೆ ಸೇರಿದವರಿಗೆ ಮಾತ್ರ ಪಪಂ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿದರು.

    ತಳವಾರ ಮತ್ತು ಪರಿವಾರ ಹೆಸರಿನಲ್ಲಿ ಪ್ರವರ್ಗ-೧ರ ಹಿಂದುಳಿದ ಪಟ್ಟಿಯಲ್ಲಿ ಬರುವ ಅಂಬಿಗ, ಕಬ್ಬಲಿಗ, ಕೋಲಿ ಜನಾಂಗದವರು ತಳವಾರ ಜಾತಿಯ ಎಸ್‌ಟಿ ಪ್ರಮಾಣ ಪ್ರತ್ರಕ್ಕಾಗಿ ಅರ್ಜಿ ಸಲ್ಲಿಸಿದರೇ ಕೂಡಲೇ ತಿರಸ್ಕರಿಸುವಂತೆ ಜಿಲ್ಲೆಯ ಎಲ್ಲ ತಹಸೀಲ್ದಾರ್ ಅವರಿಗೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

    ಭಾರತ ಸಂವಿಧಾನರ ಅಡಿಯಲ್ಲಿ ಅನುಚ್ಛೇದ ೩೪೧ ಮತ್ತು ೩೪೨ರ ಪ್ರಕಾರ ಸಾಮಾಜಿಕವಾಗಿ, ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಬೇಡ ಜನಾಂಗಕ್ಕೆ ಸಮಾನತೆ ನೀಡುವ ಸಲುವಾಗಿ ಮೀಸಲಾತಿ ನೀಡಲಾಗಿದೆ. ದೇಶಕ್ಕೆ ಸ್ವಾತಂತ್ರ‍್ಯ ಬಂದು ಏಳು ದಶಕ ಕಳೆದರೂ ಶೋಷಣೆ, ದಬ್ಬಾಳಿಕೆ, ದೌರ್ಜನ್ಯ ಹಾಗೂ ಮೀಸಲಾತಿ ವಂಚನೆ ಪ್ರಕರಣಗಳು ದಿನನಿತ್ಯ ಹೆಚ್ಚಾಗುತ್ತಿದೆ ಎಂದು ಖಂಡಿಸಿದರು.

    ಸಂವಿಧಾನದನ್ವಯ ಪರಿಶಿಷ್ಟ ಪಂಗಡದ ಕ್ರಮ ಸಂಖ್ಯೆ ೩೮ರಲ್ಲಿ ನಾಯ್ಕಡ, ನಾಯಕ, ಚೋಳ ನಾಯಕ, ಕಪಾಡಿಯಾ ನಾಯಕ, ಮೋಟ ನಾಯಕ, ನಾನಾ ನಾಯಕ, ಬೇಡ, ಬೇಡರ ಮತ್ತು ವಾಲ್ಮೀಕಿ ಜಾತಿಗಳ ಪರ್ಯಾಯ ಪದವಾದ ಪರಿವಾರ ಮತ್ತು ತಳವಾರ ಜಾತಿಗೆ ಪರಿಶಿಷ್ಟ ಪಂಗಡದ ಸೌಲಭ್ಯ ವಿಸ್ತರಿಸಬಹುದಾಗಿದೆ ಎಂದು ಕುಲಶಾಸ್ತ್ರಿಯ ಅಧ್ಯಯನ ಮುಖಾಂತರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ ಪ್ರವರ್ಗ-೧ರಲ್ಲಿ ಬರುವ ಹಿಂದುಳಿದ ಪಟ್ಟಿಗಳ ಕ್ರಮ ಸಂಖ್ಯೆ ೮೮ ಎಚ್ ತಳವಾರ ಜನಾಂಗದವರಾದ ಅಂಬಿಗ, ಗಂಗಾಮತಸ್ಥ, ಕಬ್ಬಲಿಗೆ ಜಾತಿಗೆ ಸೇರಿದವರನ್ನು ಎಸ್‌ಟಿ ಪ್ರಮಾಣ ಪತ್ರ ನೀಡಲು ಆದೇಶ ಮಾಡಿರವುದು ನಾಚೀಗೇಡಿನ ಸಂಗತಿ. ಇದು ಸಂವಿಧಾನದ ಉಲ್ಲಂಘನೆ ಆಗಿದೆ. ಅವರಿಗೆ ಪಪಂ ಜಾತಿ ಪ್ರಮಾಣ ಪತ್ರ ನೀಡಬಾರದು ಎಂದು ಒತ್ತಾಯಿಸಿದರು.

    ಈಗಾಗಲೇ ಪ್ರವರ್ಗ-೧ರಲ್ಲಿ ಬರುವ ಅಂಬಿಗ, ಕಬ್ಬಲಿಗ ತಳವಾರರಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡಿರುವುದನ್ನು ರದ್ದು ಪಡಿಸಬೇಕು. ನಕಲಿ ಶಾಲೆ ದಾಖಲೆಗಳನ್ನು ಸೃಷ್ಠಿಸಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಅದಕ್ಕೆ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಬೇಕು. ಜಾತಿ ಪ್ರಮಾಣ ಪತ್ರ ಪಡೆದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಜಾತ್ರಿ ಪ್ರಮಾಣ ಪತ್ರ ನೀಡಿದ ತಹಸೀಲ್ದಾರ್ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

    ವಾಲ್ಮೀಕಿ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ, ಮಂಜುನಾಥ ನಾಯ್ಕೋಡಿ, ಶರಣಗೌಡ ಪಾಟೀಲ, ಸದಾಶಿವ ಕಡ್ಲೇವಾಡ, ರವಿ ಬಿಸನಾಳ, ಮಲ್ಲಪ್ಪ ಕೌಲಗಿ, ಬಿ.ಎಸ್.ಗಸ್ತಿ, ವಿಜಯ ಮಲಕಟ್ಟಿ, ಅಶೋಕ ಅಸ್ಕಿ, ಅರ್ಜುನ ನಾಯ್ಕೋಡಿ ಹಾಗೂ ಸಮಾಜದ ನೂರಾರು ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts