More

    ಆಯ್ದ ದೇಗುಲಗಳಲ್ಲಿ ಸಪ್ತಪದಿ

    ಧಾರವಾಡ: ಜಿಲ್ಲೆಯಲ್ಲಿ ಎ ಹಾಗೂ ಬಿ ದರ್ಜೆ ದೇವಸ್ಥಾನಗಳಿಲ್ಲದ ಕಾರಣಕ್ಕೆ ಆಯ್ದ ದೇವಸ್ಥಾನಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾ ಗುವುದು ಎಂದು ಮುಜರಾಯಿ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮುಜರಾಯಿ ಹಾಗೂ ಮೀನುಗಾರಿಕೆ ಇಲಾಖೆ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹೆಚ್ಚಿನ ಆದಾಯ ಹೊಂದಿರದ ಸಿ ದರ್ಜೆಯ 930 ದೇವಸ್ಥಾನಗಳಿವೆ. ಇವುಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಪ್ರಮುಖ ದೇವಸ್ಥಾನಗಳನ್ನು ಆಯ್ದು ಸಪ್ತಪದಿ ಸಾಮೂಹಿಕ ವಿವಾಹ ಆಯೋಜಿಸಿ, ಇಲಾಖೆಯಿಂದ ನೇರವಾಗಿ ಯೋಜನೆಗೆ ಹಣ ಬಿಡುಗಡೆ ಮಾಡಲಾಗುವುದು. ಆರ್ಥಿಕ ಸೂಚ್ಯಂಕ ಕಡಿಮೆ ಇರುವ ಜಿಲ್ಲೆಗಳಲ್ಲಿ ಜನರು ಸಾಮೂಹಿಕ ವಿವಾಹದಲ್ಲಿ ಮದುವೆ ಆಗಲು ಇಚ್ಛಿಸುತ್ತಾರೆ. ಸರಳ ಹಾಗೂ ಆದರ್ಶ ವಿವಾಹವನ್ನು ಪ್ರೋತ್ಸಾಹಿಸಲು ಸರ್ಕಾರ ಯೋಜನೆ ಜಾರಿಗೊಳಿಸಿದೆ ಎಂದರು.

    ಪ್ರತಿ ಜೋಡಿಗೆ ಇಲಾಖೆಯಿಂದ 55 ಸಾವಿರ ರೂ. ಮೀಸಲಿಡಲಾಗಿದೆ. ಇದರಲ್ಲಿ 8 ಗ್ರಾಂ. ಚಿನ್ನದ ತಾಳಿ, ವಧುವಿನ ಧಾರೆ ಸೀರೆ, ವರನ ಬಟ್ಟೆ, ಶಲ್ಯ ಹಾಗೂ ಪಂಚೆ ನೀಡಲಾಗುತ್ತಿದೆ. ಇದರ ಜೊತೆಗೆ 10 ಸಾವಿರ ರೂ. ಆದರ್ಶ ವಿವಾಹ ಬಾಂಡ್ ನೀಡಲಾಗುವುದು. ಸಮಾಜ ಕಲ್ಯಾಣ ಇಲಾಖೆಯಿಂದ ಎಸ್​ಸಿ, ಎಸ್​ಟಿ ಸಮುದಾಯದವರಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದರು. ಏ. 26ರಂದು ಮೊದಲ ಹಂತದ ಸಾಮೂಹಿಕ ವಿವಾಹ ಆಯೋಜಿಸಲಾಗುವುದು. ಇದಕ್ಕೆ ಅರ್ಜಿ ಸಲ್ಲಿಸಲು ಮಾ. 27 ಕೊನೆ ದಿನ. ಮೇ 24ರಂದು 2ನೇ ಹಂತದಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗುವುದು. ಈ ಕುರಿತು ವ್ಯಾಪಕ ಪ್ರಚಾರ ನೀಡಿ, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಿ, ಜಿಲ್ಲೆಯ ಸಪ್ತಪದಿ ವಿವಾಹದ ಮೇಲ್ವಿಚಾರಣೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಯೋಜನೆ ಕುರಿತು ಪ್ರಚಾರ ನೀಡಲು ಮಾ. 7ರಂದು ವಿಚಾರ ಸಂಕಿರಣ ಏರ್ಪಡಿಸಲಾಗುವುದು ಎಂದರು. ಶಾಸಕ ಸಿ.ಎಂ. ನಿಂಬಣ್ಣವರ, ವಿಧಾನ ಪರಿಷತ್ ಸದಸ್ಯರಾದ

    ಬಸವರಾಜ ಹೊರಟ್ಟಿ, ಎಸ್.ವಿ. ಸಂಕನೂರು, ಡಿಸಿ ದೀಪಾ ಚೋಳನ್, ಶಿವಾನಂದ ಕರಾಳೆ, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪಠಾಣ, ಮುಜರಾಯಿ ಇಲಾಖೆ ಶಿರಸ್ತೇದಾರ್ ದಶರಥ ಜಾಧವ, ಎಲ್ಲ ತಾಲೂಕು ತಹಸೀಲ್ದಾರರು ಇದ್ದರು.

    ಮೀನು ಉತ್ಪಾದನೆ ಹೆಚ್ಚಳಕ್ಕೆ ಕ್ರಮ: ಜಿಲ್ಲೆಯ ಮೀನು ಉತ್ಪಾದನೆ ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಇಲಾಖೆಗೆ ಅಗತ್ಯವಿರುವ ಸಿಬ್ಬಂದಿ ನೇಮಿಸಿ ಹೆಚ್ಚು ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಲಾಗುವುದು. ಇಲಾಖೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿ, ಜಲಾಶಯಗಳಲ್ಲಿ ಹೆಚ್ಚಿನ ಮೀನು ಮರಿಗಳನ್ನು ಬಿಡಲು ಕ್ರಮ ಕೈಗೊಳ್ಳಲಾಗುವುದು. ನೆರೆಯಿಂದಾಗಿ ಮೀನು ಸಾಕಣಿಕೆಯಲ್ಲಿ ನಷ್ಟಕ್ಕೀಡಾದವರಿಗೆ ಜಿಲ್ಲಾಡಳಿತದಿಂದ ಪರಿಹಾರ ನೀಡಲಾಗಿದೆ ಎಂದು ಸಚಿವ ಪೂಜಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts