More

    ಚುನಾವಣಾ ಅಖಾಡದಲ್ಲಿ ಮಸ್ಕಿಯಲ್ಲಿ ಅಳಿಯಗೆ ಶರಣಾಗಿದ್ದ ಮಾವ

    ಮಸ್ಕಿ: ಚುನಾವಣಾ ಅಖಾಡದಲ್ಲಿ ಸಂಬಂಧಿಗಳ ನಡುವೆ ನಡೆಯುವ ಸ್ಪರ್ಧೆ ಸಹಜವಾಗಿಯೇ ಕುತೂಹಲ ಮೂಡಿಸುತ್ತದೆ. ಮಸ್ಕಿ ಕ್ಷೇತ್ರದಲ್ಲಿ 2013ರಲ್ಲಿ ಸಂಬಂಧಿಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಮಾವ ಹಾಗೂ ಅಳಿಯನ ನಡುವೆ ಸ್ಪರ್ಧೆಯಲ್ಲಿ ಅಳಿಯ ಜಯಭೇರಿ ಬಾರಿಸಿದ್ದರು.

    ಪ್ರಥಮ ಯತ್ನದಲ್ಲೇ ವಿಧಾನಸಭೆ ಪ್ರವೇಶ

    ಮಸ್ಕಿ ಕ್ಷೇತ್ರದಲ್ಲಿ 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ, ಕಾಂಗ್ರೆಸ್ ಹುರಿಯಾಳು ತಿಮ್ಮಯ್ಯ ನಾಯಕ ಅವರನ್ನು ಸೋಲಿಸಿ ಪ್ರಥಮ ಯತ್ನದಲ್ಲೇ ವಿಧಾನಸಭೆ ಪ್ರವೇಶಿಸಿದ್ದರು. 2013ರ ಚುನಾವಣೆಯಲ್ಲಿ ಪ್ರತಾಪಗೌಡಗೆ ಎದುರಾಗಿದ್ದು ಅವರ ಮಾವ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್. ಪ್ರತಾಪಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರೆ ಮಹಾದೇವಪ್ಪಗೌಡ ಕೆಜೆಪಿಯಿಂದ ಕಣಕ್ಕಿಳಿದಿದ್ದರು.

    ಇದನ್ನೂ ಓದಿ: ಚುನಾವಣೆ ಇನ್ನೇನು ಶುರು; ಮತದಾನ ಹೆಚ್ಚಳಕ್ಕೆ ಚುನಾವಣಾ ಆಯೋಗದ ತೀವ್ರ ಕಸರತ್ತು

    ಮಸ್ಕಿಯಲ್ಲಿ ಪ್ರತಾಪಗೌಡ ಪಾಟೀಲರ ತಂದೆ ನರಸನಗೌಡ, ಆ ಬಳಿಕ ಪ್ರತಾಪಗೌಡ ಪಾಟೀಲರ ಮಾವ (ಅಕ್ಕನ ಗಂಡ) ಮಹಾದೇವಪ್ಪಗೌಡ ಪೊಲೀಸ್ ಪಾಟೀಲ ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದರು. ಪ್ರತಾಪಗೌಡ ಪಾಟೀಲ ಹಣಕಾಸು ಸಂಸ್ಥೆಯೊಂದರ ಮುಖ್ಯಸ್ಥರಾಗಿ, ಗ್ರಾ.ಪಂ. ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರತಾಪಗೌಡ ಪಾಟೀಲಗೆ ಮಹಾದೇವಪ್ಪಗೌಡ ಪಾಟೀಲ ನೆರಳಿನಂತೆ ಇದ್ದರು.

    ಬಿಜೆಪಿ ತೊರೆದು ಕಾಂಗ್ರೆಸ್

    ಆದರೆ, 2008ರಲ್ಲಿ ಮಸ್ಕಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾದಾಗ ಪ್ರತಾಪಗೌಡ ಪಾಟೀಲಗೆ ಬಿಜೆಪಿ ಟಿಕೆಟ್ ನಿರಾಯಾಸವಾಗಿ ದೊರೆತಿತ್ತು. 2013 ರ ಚುನಾವಣೆಯಲ್ಲಿ ಅಳಿಯ ಪ್ರತಾಪಗೌಡ ಪಾಟೀಲ ಮತ್ತು ಮಾವ ಮಹಾದೇವಪ್ಪಗೌಡ ಪಾಟೀಲ ಪ್ರತಿಸ್ಪರ್ಧಿಗಳಾಗಿದ್ದರು. ಪ್ರತಾಪಗೌಡ ಪಾಟೀಲ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರೆ, ಬಿ.ಎಸ್.ಯಡಿಯೂರಪ್ಪ ಮಹಾದೇವಪ್ಪಗೌಡ ಪೊಲೀಸ್ ಪಾಟೀಲರನ್ನು ಕೆಜೆಪಿಗೆ ಕರೆತಂದು ಪ್ರತಾಪಗೌಡ ಪಾಟೀಲ ವಿರುದ್ಧ ಕಣಕ್ಕಿಳಿಸಿದ್ದರು.

    ಪ್ರತಾಪಗೌಡ ಪಾಟೀಲ ಹಾಗೂ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ ಬಿಜೆಪಿ ತೊರೆದಿದ್ದರಿಂದ ಕ್ಷೇತ್ರದಲ್ಲಿ ಕಮಲ ಪಾಳಯಕ್ಕೆ ನಾಯಕತ್ವ ಇಲ್ಲದಂತಾಗಿತ್ತು. ಇದರಿಂದಾಗಿ 2013 ರ ಚುನಾವಣೆ ಪಕ್ಷಕ್ಕಿಂತ ವ್ಯಕ್ತಿ ಕೇಂದ್ರಿತವಾಗಿ ಪರಿವರ್ತನೆಯಾಗಿತ್ತು.

    ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಮತ್ತು ಕೆಜೆಪಿಯ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ ನಡುವೆ ಹಣಾಹಣಿ ಏರ್ಪಟ್ಟಿತ್ತು. ಪ್ರತಾಪಗೌಡ ಪಾಟೀಲ ವಿಜಯದ ಪತಾಕೆ ಹಾರಿಸಿದ್ದರು. ಮಹಾದೇವಪ್ಪಗೌಡ ಪೊಲೀಸ್ ಪಾಟೀಲ ಎರಡನೇ ಸ್ಥಾನ ಪಡೆದಿದ್ದರು. 2018 ರ ಚುನಾವಣೆಯಲ್ಲಿ ಮಾವ ಮತ್ತು ಅಳಿಯ ಒಂದಾಗಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಗೆಲ್ಲುವ ಮೂಲಕ ಪ್ರತಾಪಗೌಡ ಪಾಟೀಲ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts