More

    ರೈತ ನಾಯಕ ಸುಂದರೇಶ್ ಸ್ಮರಣಾರ್ಥ ಹುತಾತ್ಮ ದಿನಾಚರಣೆ

    ಶಿವಮೊಗ್ಗ: ರೈತ ನಾಯಕ ಎನ್.ಡಿ.ಸುಂದರೇಶ್ ಅವರ 31ನೇ ಸ್ಮರಣೆ ಹಾಗೂ ಹುತಾತ್ಮ ದಿನಾಚರಣೆಯನ್ನು ಡಿ.21ರ ಬೆಳಗ್ಗೆ 10.30ಕ್ಕೆ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಶಾಖೆ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ ತಿಳಿಸಿದರು.

    ರಾಜ್ಯದಲ್ಲಿ ಬರದ ಕರಾಳ ಛಾಯೆಯಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ 216 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಿದೆ. ಇನ್ನೂ ರೈತರಿಗೆ ಬರ ಪರಿಹಾರ ನೀಡಿಲ್ಲ. ಇದು ಜನ ವಿರೋಧಿ ಸರ್ಕಾರವಾಗಿದೆ. ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಲು ಈ ಕಾರ್ಯಕ್ರಮದಲ್ಲಿ ರೈತರ ಹಕ್ಕುಗಳ ಮಂಡಿಸಿ ವಿಚಾರಗೋಷ್ಠಿಗಳನ್ನು ನಡೆಸಿ, ಸಂಘದ ಮುಂದಿನ ನಡೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ರಾಜ್ಯದ ರೈತರಿಗೆ ಕೇಂದ್ರ ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯನ್ನು ಶೀಘ್ರವಾಗಿ ಬಿಡುಗಡೆಗೊಳಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರೈತರ ಸಾಲ ವಸೂಲಾತಿ ಕ್ರಮಗಳನ್ನು ಜರುಗಿಸುವುದನ್ನು ನಿಲ್ಲಿಸುವ ಕ್ರಮ ಕೈಗೊಳ್ಳಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ರೈತ ವಿರೋಧಿ ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬುದು ಪ್ರಮುಖ ಹಕ್ಕೊತ್ತಾಯಗಳಾಗಿವೆ ಎಂದು ಹೇಳಿದರು.
    ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರನ್ನು ತುಂಬಿಸುವ ಯೋಜನೆಯನ್ನು ಆದಷ್ಟು ತ್ವರಿತವಾಗಿ ಮುಗಿಸಬೇಕು. ಪ್ರಸಕ್ತ ವರ್ಷ ಬರವಿರುವುದರಿಂದ ನಿರುದ್ಯೋಗ ಸಮಸ್ಯೆ ನೀಗಿಸಲು, ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗ ಕಲ್ಪಿಸಿ ಕಾರ್ಮಿಕರ ಜೀವನವನ್ನು ಸುಗಮಗೊಳಿಸಬೇಕು ಹಾಗೂ ರೈತರ ಇತರೆ ವಿಚಾರಗಳನ್ನು ಕಾರ್ಯಕ್ರಮದಲ್ಲಿ ಚರ್ಚೆ ಮಾಡಲಾಗುವುದು ಎಂದರು.
    ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಂಜುನಾಥೇಶ್ವರ ಮಾತನಾಡಿ, ಶಿವಮೊಗ್ಗದ ಯಾವುದಾದರೊಂದು ರೈಲ್ವೆ ಸೇತುವೆಗೆ ಎನ್.ಡಿ.ಸುಂದರೇಶ್ ಹೆಸರಿಡಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಜಿ.ಆರ್.ಸಣ್ಣರಂಗಪ್ಪ, ಕೆ.ಆರ್.ಮಂಜಣ್ಣ, ಜಗದೀಶ್ ನಾಯ್ಕ, ಸಿ.ಎಚ್.ಮಂಜಣ್ಣ, ಮಂಜಣ್ಣ ಹಾರೋಬೆನವಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts