More

    ಶರಣ ವಿಜಯೋತ್ಸವ, ನಾಡಹಬ್ಬಕ್ಕೆ ಭರದ ಸಿದ್ಧತೆ

    ಬಸವಕಲ್ಯಾಣ: ಸರ್ವರ ಏಳಿಗೆಗಾಗಿ ವಿಶ್ವವಿನೂತನ ಕ್ರಾಂತಿ ನಡೆದ ಪವಿತ್ರ ನೆಲ ಕಲ್ಯಾಣ. ಸಮಾನತೆ ಹುತಾತ್ಮರಾದ ಶರಣರ ಸ್ಮರಣೆಗಾಗಿ ಹುತಾತ್ಮ ದಿನಾಚರಣೆ, ಶರಣ ವಿಜಯೋತ್ಸವ ಅ.೧೫ರಿಂದ ೨೪ರವರೆಗೆ ಇಲ್ಲಿನ ಹರಳಯ್ಯನವರ ಗವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ತಿಳಿಸಿದರು.

    ಒಂಬತ್ತು ದಿನದ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅ.೧೫ರಂದು ಬೆಳಗ್ಗೆ ೮ಕ್ಕೆ ಆರಂಭೋತ್ಸವ. ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಕಲ ವೈಭವದೊಂದಿಗೆ ಪರುಷಕಟ್ಟೆವರೆಗೆ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ, ಸಂಜೆ ೬ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ, ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ನೇತೃತ್ವದಲ್ಲಿ ಬೈಲೂರು ಶ್ರೀ ನಿಜಗುಣಾನಂದ ಸ್ವಾಮೀಜಿ ಅನುಭಾವ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು ಎಂದರು.

    ೧೬ರಂದು ಬೆಳಗ್ಗೆ ೧೧ಕ್ಕೆ ರೈತ ಸಂಘದ ಸಹಯೋಗದಲ್ಲಿ ಕೃಷಿ ವಿಚಾರ ಸಂಕಿರಣವನ್ನು ಕಲಬುರಗಿ ಆಕಾಶವಾಣಿ ಕೇಂದ್ರದ ಸೋಮಶೇಖರ ರೂಳಿ ಉದ್ಘಾಟಿಸುವರು. ನಿವೃತ್ತ ಡೀನ್ ಸುರೇಶ ಪಾಟೀಲ್, ಮಲ್ಲಿಕಾರ್ಜುನ ಬುಕ್ಕಾ, ದೇವೇಂದ್ರ ಪಾಟೀಲ್ ವಿಷಯ ಮಂಡಿಸುವರು. ಸಂಜೆ ೬ಕ್ಕೆ ಜೀವನ ಹಿತ ಸಿದ್ಧಾಂತ ಷಟಸ್ಥಲ ಗೋಷ್ಠಿಯಲ್ಲಿ ಶ್ರೀ ವಿ.ಸಿದ್ದರಾಮಣ್ಣ ಸಾನ್ನಿಧ್ಯ ವಹಿಸಲಿದ್ದು, ಶ್ರೀ ಸಿದ್ದರಾಮ ಶರಣರು ಬೆಲ್ದಾಳ ಅನುಭಾವ ನೀಡುವರು. ತಾಪಂ ಇಒ ಮಹಾದೇವ ಬಾಬಳಗಿ ಗೋಷ್ಠಿ ಉದ್ಘಾಟಿಸುವರು.

    ೧೭ರಂದು ಬೆಳಗ್ಗೆ ೧೧ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಬಹುಭಾಷೆ ಕವಿಗೋಷ್ಠಿಯನ್ನು ಶಾಸಕ ಶರಣು ಸಲಗರ ಉದ್ಘಾಟಿಸುವರು. ಡಾ.ಕೆ.ಷರೀಫಾ, ಬಿಕೆಡಿಬಿ ಆಯುಕ್ತ ರಮೇಶ ಕೋಲಾರ, ಭಾರತಿ ವಸ್ತ್ರದ ಮುಖ್ಯ ಅತಿಥಿಗಳಾಗಿರುವರು. ಕಸಾಪ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ ಅಧ್ಯಕ್ಷತೆ ವಹಿಸುವರು. ಸಂಜೆ ೬ಕ್ಕೆ ಮಹಾಶಕ್ತಿ ಕೂಟಗಳ ಸಮಾವೇಶವನ್ನು ಬಸವ ಧರ್ಮ ಪೀಠದ ಪೂಜ್ಯ ಡಾ.ಗಂಗಾ ಮಾತಾಜಿ ಸಾನ್ನಿಧ್ಯದಲ್ಲಿ ಡಾ.ತೇಜಸ್ವಿನಿ ಅನಂತಕುಮಾರ ಉದ್ಘಾಟಿಸುವರು.

    ೧೮ರಂದು ಬೆಳಗ್ಗೆ ಮಹಿಳಾ ಕದಳಿ ವೇದಿಕೆ ಸಹಯೋಗದಲ್ಲಿ ವಚನ ಓದು ಕಾರ್ಯಕ್ರಮ ನಡೆಯಲಿದೆ. ಸಂಜೆ ೮ಕ್ಕೆ ಅಂಧಶ್ರದ್ಧೆ ನಿವಾರಣೆಗಾಗಿ ವಚನದ ನೆಲೆಗಳು ಗೋಷ್ಠಿ ಇದ್ದು, ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಎಸಿ ಪ್ರಕಾಶ ಕುದರಿ ಉದ್ಘಾಟಿಸುವರು. ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ ಅನುಭಾವ ನೀಡುವರು.

    ೧೯ರಂದು ಬೆಳಗ್ಗೆ ೧೧ಕ್ಕೆ ಹಿರಿಯ ನಾಗರಿಕರ ಕೂಟವನ್ನು ಅಮರನಾಥ ಸೋಲಪುರೆ ಉದ್ಘಾಟಿಸುವರು. ಸಂಜೆ ೬ಕ್ಕೆ ಮಹಾರಾಷ್ಟçದಲ್ಲಿ ಶರಣ ಸಂಸ್ಕೃತಿ ಗೋಷ್ಠಿ ಡಿವೈಎಸ್‌ಪಿ ನ್ಯಾಮೇಗೌಡರ ಉದ್ಘಾಟಿಸುವರು. ಪ್ರಾಧ್ಯಾಪಕ ಡಾ. ಭೀಮರಾವ ಪಾಟೀಲ್ ಅನುಭಾವ ನೀಡುವರು. ೨೦ರಂದು ಸಂಜೆ ೬ಕ್ಕೆ ಪ್ರಸಾದ ಕಾಯವ ಕೇಡಿಸಲಾಗದು ಗೋಷ್ಠಿಯನ್ನು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಬಿಕೆಡಿಬಿ ಆಯುಕ್ತ ರಮೇಶ ಕೋಲಾರ ಉದ್ಘಾಟಿಸುವರು. ಪಾರಂಪರಿಕ ವೈದ್ಯ ಹಣಮಂತರಾವ ಮಳಲಿ ಗದಗ ಅನುಭಾವ ನೀಡುವರು. ೨೧ರಂದು ಸಂಜೆ ೬ಕ್ಕೆ ಶ್ರೀ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದ ಗೋಷ್ಠಿಯಲ್ಲಿ ವೀರೇಶ ಗ.ಪಾಟೀಲ್ ಅನುಭಾವ ನೀಡುವರು. ೨೨ರಂದು ಸಂಜೆ ೬ಕ್ಕೆ ಜಗತ್ತಿನ ಪ್ರಜಾಪ್ರಭುತ್ವದ ಸಂಸತ್ತು ಅನುಭವ ಮಂಟಪ ಗೋಷ್ಠಿ ಡಾ.ಬಸವರಾಜ ಪಾಟೀಲ್ ಸೇಡಂ ಉದ್ಘಾಟಿಸಲಿದ್ದು, ಪೂಜ್ಯ ದೊಡ್ಡಪ್ಪ ಅಪ್ಪ ಬಿಇಡಿ ಕಾಲೇಜಿನ ಮಕ್ಕಳಿಂದ ಮಕ್ಕಳ ಸಂಸತ್ತು ರೂಪಕ ಪ್ರದರ್ಶನಗೊಳ್ಳಲಿದ ಎಂದು ವಿವರಿಸಿದರು.

    ೨೦ರಿಂದ ೨೨ರವರೆಗೆ ಮಕ್ಕಳಿಗಾಗಿ ಮಕ್ಕಳ ಕೂಟ, ಒಂಬತ್ತು ದಿನ ವಚನ ಸಂಗೀತ, ವಚನ ನೃತ್ಯ, ರೂಪಕ, ಕೋಲಾಟ, ಭಜನೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

    ಬಿಇಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ನಗರಸಭೆ ಸದಸ್ಯೆ ನಿರ್ಮಲಾ ಶಿವಣಕರ, ಪ್ರಮುಖರಾದ ಪ್ರೊ.ಸಿ.ಬಿ. ಪರ್ತಾಪುರೆ, ಕಸಾಪ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ, ಪ್ರಮುಖರಾದ ಶಿವಕುಮಾರ ಬಿರಾದಾರ, ಸಂಜು ಜಾಧವ್, ಸುಭಾಷ ರಗಟೆ, ಸಂಗಮೇಶ ಅವಸೆ, ಮಲ್ಲಿಕಾರ್ಜುನ ಅಗ್ರೆ, ವಿದ್ಯಾವತಿ ಸೇರಿಕಾರ, ಸೋನಾಲಿ ನೀಲಕಂಠೆ, ಪ್ರವೀಣ ಮಹಾಜನ್, ದತ್ತಾತ್ರಿ ರಾಘೋ ಇತರರಿದ್ದರು.

    ವಚನ ಸಾಹಿತ್ಯದ ಮೆರವಣಿಗೆ ಆ.೨೩ಕ್ಕೆ: ೨೩ರಂದು ಬೆಳಗೆ ೮ಕ್ಕೆ ಸಾಮೂಹಿಕ ಇಷ್ಟಲಿಂಗಾರ್ಚನೆ, ೧೦.೩೦ಕ್ಕೆ ಹುತಾತ್ಮ ದಿನಾಚರಣೆ ನಡೆಯಲಿದೆ. ಪೂಜ್ಯ ಬಸವಯೋಗಿ ಪ್ರಭುಸ್ವಾಮಿ ಸಾನ್ನಿಧ್ಯದಲ್ಲಿ ಶರಣಬಸವ ದೇವರು ಅನುಭಾವ ನೀಡುವರು. ಮಧ್ಯಾಹ್ನ ೩ಕ್ಕೆ ಹುತಾತ್ಮ ಶರಣ ಎಳೆಹೂಟೆ ಮೆರವಣಿಗೆ ಕೋಟೆಯಿಂದ ಹರಳಯ್ಯ ಗವಿವರೆಗೆ ನಡೆಯಲಿದೆ. ತಲೆ ಮೇಲೆ ವಚನ ಸಾಹಿತ್ಯ, ಎತ್ತಿನ ಬಂಡಿಯಲ್ಲಿ ಶರಣರ ಸ್ತಬ್ಧ ಚಿತ್ರಗಳು, ಕುದುರೆ ಒಂಟೆ ಮೇಲೆ ಶರಣ ವೇಷಧಾರಿಗಳು, ಭಜನಾ ತಂಡಗಳು, ಡೊಳ್ಳು, ವಚನ ವಡಪು, ಜಾನಪದ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ. ಸಂಜೆ ೬ಕ್ಕೆ ಕಲ್ಯಾಣ ಕ್ರಾಂತಿ ಗೋಷ್ಠಿ ಜರುಗಲಿದೆ. ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಅಧ್ಯಕ್ಷ ಡಾ. ಎಸ್.ಜಿ. ಸುಶೀಲಮ್ಮ ಅವರಿಗೆ ಶರಣ ವಿಜಯ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts