More

    ಮಾರುಕಟ್ಟೆಗೆ ಬಂದ ಮಾವಿನ ಹಣ್ಣು

    ರಾಣೆಬೆನ್ನೂರ: ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನಹಣ್ಣು ಸ್ಥಳೀಯ ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರಿಂದ ಖರೀದಿಯೂ ಜೋರಾಗಿಯೇ ನಡೆದಿದೆ.

    ನಗರದ ಎಂ.ಜಿ. ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ನೆಹರು ಮಾರುಕಟ್ಟೆಗಳು ಮಾವಿನ ಹಣ್ಣಿನ ಪರಿಮಳದಿಂದ ಗಮಗಮಿಸುತ್ತಿವೆ. ಕಲ್ಮಿ, ಆಪೂಸ್, ಮಲ್ಲಿಕಾ, ಕೇಸರ್, ಸಿಂಧೂಲ, ಬದಾಮಿ, ವೆನಿಷಾ, ರಸಪುರಿ ಸೇರಿ ವಿವಿಧ ಬಗೆಯ ಮಾವಿನ ಹಣ್ಣುಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಗ್ರಾಹಕರು ಸಹ ತಮಗೆ ಇಷ್ಟವಾದ ತಳಿಯ ಹಣ್ಣುಗಳನ್ನು ಖರೀದಿಸಲು ಮುಂದಾಗುತ್ತಿದ್ದು, ಒಂದೆಡೆ ವ್ಯಾಪಾರಸ್ಥರಲ್ಲಿ ಸಂತಸ ಮೂಡಿಸಿದ್ದರೆ, ಮತ್ತೊಂದೆಡೆ ಮಾವು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ.

    ಏಪ್ರಿಲ್ ಆರಂಭದಿಂದಲೇ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಮಾವಿನ ಹಣ್ಣುಗಳು ಗ್ರಾಹಕರ ಗಮನ ಸೆಳೆಯಬೇಕಿತ್ತು. ಆದರೆ, ಈ ಬಾರಿ ಸ್ಥಳೀಯ ಮಾವು ಬೆಳೆಗಾರರ ಫಸಲು ಉತ್ತಮವಾಗಿ ಬಾರದಿರುವ ಕಾರಣ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳು ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಬಂದಿತ್ತು. ಆದರೀಗ ಹಾನಗಲ್ಲ, ದಾವಣಗೆರೆ, ಶಿವಮೊಗ್ಗ, ಧಾರವಾಡ ಭಾಗದಿಂದ ಮಾವಿನ ಹಣ್ಣುಗಳು ಬರುತ್ತಿವೆ. ಮುಂದಿನ 15 ದಿನಗಳ ಅಂತರದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾವು ಬರುವ ನಿರೀಕ್ಷೆಯಿದೆ.

    ಗುಣಮಟ್ಟಕ್ಕೆ ತಕ್ಕಂತೆ ಬೆಲೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಣ್ಣಿನ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿದೆ. ಕಳೆದ ಬಾರಿ ಕಲ್ಮಿ ಮಾವಿನ ಹಣ್ಣು 100ರಿಂದ 120 ರೂಪಾಯಿಗೆ ಕೆಜಿಯಿದ್ದರೆ, ಈ ಬಾರಿ 200 ರೂಪಾಯಿ ವರೆಗೂ ಬೆಲೆಯಿದೆ. ಆಪೂಸ್ ಕಳೆದ ಬಾರಿ 150ರಿಂದ 200 ರೂಪಾಯಿ ವರೆಗಿತ್ತು. ಈ ಬಾರಿ 250 ರೂಪಾಯಿಯಿಂದ 300 ರೂಪಾಯಿಗೆ ವರೆಗಿದೆ. ರಸಪುರಿ 120ರಿಂದ 150 ರೂಪಾಯಿ, ಬಾದಾಮಿ 150ರಿಂದ 180 ರೂಪಾಯಿಗೆ, ವೆನಿಷಾ 120ರಿಂದ 180 ರೂಪಾಯಿ ವರೆಗೂ ಮಾರಾಟವಾಗುತ್ತಿವೆ. ಸಿಂಧೂಲ 100ರಿಂದ 150 ರೂಪಾಯಿಗೆ ಕೆ.ಜಿ.ಯಂತೆ ದೊರೆಯುತ್ತಿವೆ.

    ಸ್ಥಳೀಯ ಮಾವು ಕುಂಠಿತ: ಸ್ಥಳೀಯವಾಗಿ ಆರಂಭದಲ್ಲಿ ಮಾವಿನ ಗಿಡಗಳು ಅಧಿಕ ಪ್ರಮಾಣದಲ್ಲಿ ಹೂ ಬಿಟ್ಟಿದ್ದವು. ರೈತರಲ್ಲೂ ಉತ್ತಮ ಫಸಲಿನ ಭರವಸೆ ಮೂಡಿತ್ತು. ಆದರೆ, ಅತಿಯಾದ ಬಿಸಿಲಿನ ಪ್ರಖರತೆ ಮತ್ತು ಆಗಾಗ ಭಾರಿ ಗಾಳಿ ಸಮೇತವಾಗಿ ಸುರಿದ ಮಳೆಯಿಂದಾಗಿ ಮಾವಿನ ಹೂಗಳು ಕಾಯಿ ಕಟ್ಟುವ ಮೊದಲೇ ನೆಲಕಚ್ಚಿದ್ದವು. ಇದರಿಂದಾಗಿ ಸ್ಥಳೀಯವಾಗಿ ಮಾವು ಬೆಳೆಯಲ್ಲಿ ಕುಂಠಿತವಾಗಿದೆ. ಆದ್ದರಿಂದ ಬೆಳೆಗಾರರು ಈ ಬಾರಿ ನಷ್ಟ ಅನುಭವಿಸುವಂತಾಗಿದೆ.

    ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಉತ್ತಮ ಹಾಗೂ ವಿವಿಧ ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ಮಳೆ ಉತ್ತಮವಾಗಿರುವ ಕಾರಣ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ಕೂಡ ಹೆಚ್ಚು ಕಡಿಮೆ ಇದೆ. ಮಾರುಕಟ್ಟೆಗೆ ಇನ್ನೂ ಹೆಚ್ಚಿನ ಮಾವು ಬರುವ ನಿರೀಕ್ಷೆಯಿದೆ. ಸದ್ಯ ಮಾವುಗಳ ಮಾರಾಟವೂ ಉತ್ತಮವಾಗಿದೆ.

    | ಚಂದ್ರಪ್ಪ ಕಡೇಮನಿ, ಮಾವು ವ್ಯಾಪಾರಸ್ಥರು

    ಈ ಬಾರಿ ಮಾವು ಉತ್ತಮ ಇಳುವರಿ ಬಂದಿದೆ. ಸದ್ಯ ಬಂದ ಮಳೆಯಿಂದ ಬೆಳೆಗೆ ಹಾನಿಯಾಗಲ್ಲ. ನೀರು ತುಂಬಿ ತೂಕ ಹೆಚ್ಚಿಗೆ ಬರುತ್ತದೆ. ಆದರೆ, ಆಲಿಕಲ್ಲಿನಂಥ ಮಳೆಯಾದರೆ ಕಷ್ಟವಾಗಲಿದೆ. ಬಿಸಿಲಿಗೆ ಬೆಳವಣಿಗೆಯೂ ಚೆನ್ನಾಗಿ ಆಗಿದೆ. ಆದ್ದರಿಂದ ರೈತರು ಈಗಾಗಲೇ ಮಾವು ಕಟಾವು ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ.

    | ವಿಜಯಲಕ್ಷ್ಮೀ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts