More

    ಅಡಕೆ ಕೊಯ್ಲಿಗೆ ಮಳೆ ಅಡ್ಡಿ, ಮರದಲ್ಲಿಯೇ ಕೊಳೆಯುತ್ತಿವೆ ಅಡಕೆ ಕಾಯಿಗಳು

    ಶೃಂಗೇರಿ: ಮಲೆನಾಡಲ್ಲಿ ಅತಿವೃಷ್ಟಿಯಿಂದ ಅರ್ಧ ಫಸಲು ಕಳೆದುಕೊಂಡಿರುವ ಅಡಕೆ ಬೆಳೆಗಾರರಿಗೆ ನವೆಂಬರ್ ಬಂದರೂ ಅಳಿದುಳಿದ ಫಸಲು ಕಟಾವಿಗೆ ಮೋಡಕವಿದ ವಾತಾವರಣ, ಜಿಟಿಜಿಟಿ ಮಳೆ ಅಡ್ಡಿ ಉಂಟುಮಾಡುತ್ತಿದೆ.

    ಮಾರುಕಟ್ಟೆಯಲ್ಲಿ ಹೊಸ ಅಡಕೆಗೆ ಉತ್ತಮ ದರವಿದ್ದರೂ ಕೊಯ್ಲು ಮಾಡಿ ಮಾರುಕಟ್ಟೆಗೆ ಬಿಡಲಾಗದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಈ ವರ್ಷ ಆಶ್ಲೇಷ ಮಳೆ ಆರ್ಭಟ ತಾಲೂಕಿನಲ್ಲಿ ಜೊರಾಗಿತ್ತು. ಮಳೆಯಿಂದ ಪ್ರವಾಹ ಉಂಟಾಗಿ ಇಳಿಕೆಯಾಗದೆ 4-5ದಿನ ಹಾಗೆಯೇ ಮುಂದುವರಿದಿತ್ತು. ನಂತರ ಬಂದ ಉತ್ತರ ಮಳೆಯೂ ಜೋರಾಗಿದ್ದರಿಂದ ಮತ್ತೆ ಪ್ರವಾಹ ಸ್ಥಿತಿ ನಿರ್ವಣವಾಗಿತ್ತು. ಈಗ ಚಂಡಮಾರುತದ ಪರಿಣಾಮ ತುಂತುರು ಮಳೆಯಾಗುತ್ತಿದೆ.

    ತಾಲೂಕಿನಲ್ಲಿ ಸುಮಾರು 2,242 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಪ್ರತಿ ವರ್ಷ ಹಳದಿ ಎಲೆ ರೋಗ, ಕೊಳೆ ರೋಗದಿಂದ ಹೈರಾಣಾಗಿದ್ದ ಅಡಕೆ ಬೆಳೆಗಾರರು ಈ ಬಾರಿ ಹವಾಮಾನ ವೈಪರೀತ್ಯದಿಂದ ಕಂಗೆಟ್ಟಿದ್ದಾರೆ. ಈಗಾಗಲೇ ಅಡಕೆ ತೋಟದಲ್ಲಿ ಅಡಕೆ ಕಾಯಿಗಳು ಕಟಾವಿನ ಹಂತಕ್ಕೆ ಬಂದಿದೆ. ಆದರೆ ಸಕಾಲಕ್ಕೆ ಅಡಕೆ ಕೊಯ್ಲು ಮಾಡಲಾಗಿದೆ ಕಾಯಿಗಳು ಮರದಲ್ಲೇ ಕಳೆತು ಉದುರುತ್ತಿವೆ. ಕೊಯ್ಲು ಮಾಡಿದರೆ ಒಣಗಿಸಲು ಬಿಸಿಲೇ ಇಲ್ಲದಂತಾಗಿ ತೊಂದರೆಗೀಡಾಗಿದ್ದಾರೆ. ಆರ್ಥಿಕವಾಗಿ ಸದೃಢವಾಗಿರುವ ರೈತರು ಡ್ರೖೆಯರ್​ಗಳಲ್ಲಿ ಒಣಗಿಸುತ್ತಿದ್ದಾರೆ. ಇನ್ನೂ ಕೆಲವರು ಹೊಗೆಹಟ್ಟಿಗಳ ಮೊರೆಹೋಗಿದ್ದಾರೆ.

    ಬಿಸಿಲಿಗೆ ಕಾಯುತ್ತಿರುವ ರೈತರು: ತಂತುರು ಮಳೆ ನಡುವೆಯೂ ತಾಲೂಕಿನ ಕೆಲವೆಡೆ ಅಡಕೆ ಕೊಯ್ಲು ಪ್ರಾರಂಭವಾಗಿದೆ. ಕೊಯ್ಲು ಮಾಡಿ ಬೇಯಿಸಿದ ಅಡಕೆ ಒಣಗಿಸಲಾಗದೆ ಮನೆಯೊಳಗೆ ಹರಡಿಕೊಂಡು ಬಿಸಿಲಿನ ನಿರೀಕ್ಷೆಯಲ್ಲಿದ್ದಾರೆ. ಚಪ್ಪರದಲ್ಲಿ ಅಡಕೆ ರಾಶಿ ಹಾಕಿ ಟಾರ್ಪಲ್ ಮುಚ್ಚಿ ಕುಳಿತ್ತಿದ್ದಾರೆ. ಇದೇ ವಾತಾವರಣ ಮುಂದುವರಿದರೆ ಸಂಸ್ಕರಿತ ಅಡಕೆ ಶಿಲೀಂದ್ರ ಬಾಧೆಗೆ ಒಳಗಾಗಿ ಹೂವಾಗುವ ಆತಂಕ ಎದುರಾಗಿದೆ. ಹೊಗೆಹಟ್ಟಿ, ಡ್ರೖೆಯರ್​ಗಳಲ್ಲಿ ಒಣಗಿಸಬಹುದಾದರೂ ಇಂತಹ ಅಡಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗದಿರುವುದರಿಂದ ರೈತರು ಮರುಗುವಂತಾಗಿದೆ.

    ಕೊಳೆ ರೋಗದ ಭೀತಿ: ಅಡಕೆ ಕೊಯ್ಲು ಮಾಡುವುದು ವಿಳಂಬವಾದಂತೆ ಅಡಕೆ ಹಣ್ಣಾಗುವ ಜತೆಗೆ ಬಲಿತ ಅಡಕೆ ಕಾಯಿಗೆ ಕೊಳೆರೋಗ ಬರುವ ಸಾಧ್ಯತೆ ಇದೆ. ತಾಲೂಕಿನಲ್ಲಿ ಕೆಲವೆಡೆ ಈಗಾಗಲೇ ಎರಡ್ಮೂರು ಬಾರಿ ಬೋಡೋ ದ್ರಾವಣ ಸಿಂಪಡಿಸಲಾಗಿದೆ. ಇದೇ ರೀತಿ ಬಿಸಿಲು-ಮಳೆ ವಾತಾವರಣ ಮುಂದುವರಿದರೆ ಅಡಕೆಗೆ ಕೊಳೆರೋಗ ತಗುಲುವುದು ನಿಶ್ಚಿತ. ಈಗಾಗಲೇ ಹಳದಿ ಎಲೆ ರೋಗದಿಂದ ಹೈರಾಣಾಗಿರುವ ರೈತರಿಗೆ ಮಳೆ ಮತ್ತೊಂದು ಸಂಕಷ್ಟ ತಂದಿದೆ.

    ಧಾರಣೆ ಇದೆ, ಅಡಕೆ ಇಲ್ಲ: ಮಲೆನಾಡು ಭಾಗದ ಅಡಕೆಗೆ ಈಗ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದೆ. ಆದರೆ ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಗೆ ಅಡಕೆ ಬರುತ್ತಿಲ್ಲ. ಬದಲಾದ ಹವಾಮಾನ ಒಂದೆಡೆಯಾದರೆ, ಇನ್ನೊಂದೆಡೆ ಕಾರ್ವಿುಕರ ಕೊರತೆಯಿಂದಾಗಿ ಕೊಯ್ಲು ವಿಳಂಬವಾಗುತ್ತಿದೆ. ಇನ್ನು ಕೊಯ್ಲು ಮಾಡಿದ ಅಡಕೆಯನ್ನು ಬೇಯಿಸಿ ಒಣಗಿಸಲು ಬಿಸಿಲು ಬರುತ್ತಿಲ್ಲ. ಸಾಧ್ಯವಾದಷ್ಟು ಡ್ರೖೆಯರ್​ಗಳು, ಹೊಗೆಹಟ್ಟಿಗಳಲ್ಲಿ ಅಡಕೆ ಒಣಗಿಸಿ ಮಾರುಕಟ್ಟೆಗೆ ತಂದರೂ ಗುಣಮಟ್ಟದ ಕಾರಣ ನೀಡಿ ಅಡಕೆಗೆ ಉತ್ತಮ ಬೆಲೆ ನಿಗದಿಯಾಗುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts