More

    ಮಾರುಕಟ್ಟೆಗೆ ಜೀವಕಳೆಯಿತ್ತ ದೀಪದ ಹಬ್ಬ

    ಬೆಳಗಾವಿ: ಕರೊನಾ ಸೋಂಕಿನ ಆತಂಕ ಮತ್ತು ಬೆಲೆ ಏರಿಕೆ ಬಿಸಿ ನಡುವೆಯೂ ಬೆಳಕಿನ ಹಬ್ಬ ದೀಪಾವಳಿ ಇನ್ನೂ ಎರಡ್ಮೂರು ದಿನ ಇರುವಾಗಲೇ ನಗರದ ಮಾರುಕಟ್ಟೆಯಲ್ಲಿ ಗುರುವಾರ ವ್ಯಾಪಾರ-ವಹಿವಾಟು ಜೋರಾಗಿತ್ತು.

    ಸಡಗರದಿಂದ ಹಬ್ಬಆಚರಿಸಲು ಜನರು ಸಿದ್ಧತೆ ನಡೆಸಿದ್ದು ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತುಗಳು, ರಂಗೋಲಿ, ಹಣತೆ ಖರೀದಿಸುತ್ತಿರುವುದು ಕಂಡುಬರುತ್ತಿದೆ. ದೀಪಾವಳಿ ವ್ಯಾಪಾರಿಗಳ ಪಾಲಿಗೆ ಅತ್ಯಂತ ಪ್ರಮುಖ ಹಬ್ಬ. ಇದರಿಂದಾಗಿ ಹಬ್ಬದ ಸಂಭ್ರಮ ಇಮ್ಮಡಿಸುತ್ತಿದ್ದು, ಬೆಳಗಾವಿ ಮಾರುಕಟ್ಟೆಗೆ ಜೀವಕಳೆ ಬಂದಿದೆ.

    ಅಗತ್ಯ ವಸ್ತು ಖರೀದಿ: ಜನರು ಕುಟುಂಬ ಸಮೇತರಾಗಿ ಮಾರುಕಟ್ಟೆಗೆ ಆಗಮಿಸಿ ಬಟ್ಟೆ, ಬಂಗಾರ ಹಾಗೂ ಹಬ್ಬದ ಆಚರಣೆಗೆ ಬೇಕಾದ ಅಗತ್ಯ ವಸ್ತು ಖರೀದಿಯಲ್ಲಿ ನಿರತರಾಗಿದ್ದಾರೆ. ಅಲಂಕಾರಿಕ ಇಲೆಕ್ಟ್ರಾನಿಕ್ ವಸ್ತುಗಳು ಹಾಗೂ ಆಕಾಶ ಬುಟ್ಟಿ ಖರೀದಿಯಲ್ಲಿ ತೊಡಗಿದ್ದಾರೆ. ಕಾರು ಹಾಗೂ ಬೈಕ್ ಶೋ ರೂಂಗಳು ಗ್ರಾಹಕರಿಂದ ತುಂಬಿಕೊಂಡಿವೆ. ಕಿರಾಣಿ ಅಂಗಡಿ, ಗ್ಯಾರೇಜ್, ಬೇಕರಿ, ರಸಗೊಬ್ಬರ ಅಂಗಡಿ, ಬಟ್ಟೆ ವ್ಯಾಪಾರಿಗಳು, ಚಿನ್ನಾಭರಣ ಹಾಗೂ ವಾಹನ ಮಾರಾಟ ಮಳಿಗೆಗಳು ಕಂಗೊಳಿಸುತ್ತಿವೆ.

    ಟ್ರಾಫಿಕ್ ಜಾಮ್: ಸರ್ಕಾರ ಪಟಾಕಿ ನಿಷೇಧಿಸಿದ್ದರಿಂದ ನಿರಾಸೆಗೊಂಡ ಮಕ್ಕಳು ಪಾಲಕರ ಜತೆ ಹಠ ಮಾಡುತ್ತಿರುವುದು ಸಾಮಾನ್ಯವಾಗಿತ್ತು. ದೀಪಾವಳಿ ಹಬ್ಬಕ್ಕೆ ಲಕ್ಷ್ಮೀದೇವಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸುವ ಮಹಿಳೆಯರು ಪೂಜಾ ಸಾಮಗ್ರಿ ಹಾಗೂ ಅಲಂಕಾರಿಕ ವಸ್ತುಗಳನ್ನು ನಗರದ ಗಣಪತಿ ಗಲ್ಲಿ, ಪಾಂಗೂಳ್ ಗಲ್ಲಿ, ಮಾರುತಿ ಗಲ್ಲಿ, ಬಾಪಟ್ ಗಲ್ಲಿಯ ನಾವೆಲ್ಟೀಸ್ ಮಳಿಗೆಗಳಿಗೆ ತೆರಳಿ ಖರೀದಿ ಮಾಡುತ್ತಿದ್ದಾರೆ.ಮಾರುಕಟ್ಟೆಯಲ್ಲಿ ವಾಹನದಟ್ಟಣೆ ಹೆಚ್ಚಾಗಿದ್ದರಿಂದ ಸಂಚಾರ ವ್ಯವಸ್ಥೆ ಸುಗಮಗೊಳಿಸುವಲ್ಲಿ ಪೊಲೀಸರು ಹರಸಾಹಸಪಟ್ಟರು.

    ಗ್ರಾಹಕರ ಅಸಡ್ಡೆ: ಕರೊನಾ ಸೋಂಕು ಜಿಲ್ಲೆಯಲ್ಲಿ ಈಗಾಗಲೇ ನಿಯಂತ್ರಣಕ್ಕೆ ಬಂದಿದ್ದು, ಹಬ್ಬದ ನಿಮಿತ್ತ ವಸ್ತುಗಳ ಖರೀದಿ ಹುಮ್ಮಸ್ಸಿನಲ್ಲಿ ಜನತೆ ಮಾರುಕಟ್ಟೆಯಲ್ಲಿ ಮುಂಜಾಗ್ರತೆ ವಹಿಸದೆ ಅಸಡ್ಡೆ ತೋರುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಆತಂಕ ಎದುರಾಗಿದೆ. ವ್ಯಾಪಾರಸ್ಥರು ಪೈಪೋಟಿಗೆ ಬಿದ್ದಂತೆ ಗ್ರಾಹಕರಿಗೆ ಒಂದು ಖರೀದಿಸಿದರೆ ಮತ್ತೊಂದು ಉಚಿತ, ಶೇ. 20ರಿಂದ ಶೇ. 30ರಷ್ಟು ರಿಯಾಯಿತಿ ಕೊಡುಗೆ ನೀಡುತ್ತಿದ್ದರೆ ಇತ್ತ ಗ್ರಾಹಕರು ದೈಹಿಕ ಅಂತರ ಮರೆತು, ಮಾಸ್ಕ್ ಸರಿಯಾಗಿ ಧರಿಸದೆ ಖರೀದಿಗೆ ಮುಗಿಬೀಳುತ್ತಿದ್ದಾರೆ.

    ಮೊದಲಿನಂತಿಲ್ಲ ಚಿನ್ನಾಭರಣ ಖರೀದಿ ಭರಾಟೆ: ದೀಪಾವಳಿ ಹಬ್ಬಕ್ಕೆ ಚಿನ್ನದ ಆಭರಣ ಕೊಂಡುಕೊಳ್ಳವವರಿಗೆ ಚಿನ್ನದ ಬೆಲೆ ಏರಿಕೆ ಕೊಂಚ ಬಿಸಿ ತಟ್ಟಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಚಿನ್ನಾಭರಣ ವ್ಯಾಪಾರ ಕಡಿಮೆಯಾಗಿದೆ. ಕಳೆದ ಬಾರಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 35,590 ರೂ. ಇದ್ದ ದರ ಈ ಬಾರಿ 47,300 ರೂ. ಇದೆ. ಇನ್ನು 37,700 ರೂ.ಇದ್ದ 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,670 ರಷ್ಟು ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಯ ನಡುವೆಯೂ ಆಭರಣ ಪ್ರಿಯರು ಗಣಪತಿ ಗಲ್ಲಿ, ಖಡೇಬಜಾರ್ ಹಾಗೂ ಶಹಾಪುರದ ಮಾರುಕಟ್ಟೆಯಲ್ಲಿನ ಜ್ಯುವೆಲರ್ಸ್‌ಗಳಲ್ಲಿ ಚಿನ್ನಾಭರಣ ಖರೀದಿ ನಡೆಸುತ್ತಿದ್ದಾರೆ. ನರಕ ಚತುರ್ಥಿ ಹಾಗೂ ಪಾಡ್ಯದಂದು ಬಂಗಾರ ಖರೀದಿಗೆ ಶುಭ ದಿನವಾಗಿರುವುದರಿಂದ ಬಂಗಾರದ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಲಿದೆ ಎಂಬ ನಿರೀಕ್ಷೆಯಲ್ಲಿ ಚಿನ್ನಾಭರಣಗಳ ವ್ಯಾಪಾರಸ್ಥರು ಇದ್ದಾರೆ.

    ಮಾರುಕಟ್ಟೆಗೆ ಮಕ್ಕಳನ್ನು ಕರೆತಂದರೆ ಕರೊನಾ ಮುನ್ನೆಚ್ಚರಿಕೆ ಪಾಲಿಸುವುದು ಕಷ್ಟವಾಗುತ್ತಿದೆ. ಪಾಲಕರು ಮಕ್ಕಳನ್ನು ಮನೆಯಲ್ಲೇ ಬಿಟ್ಟು, ಮಾಸ್ಕ್ ಧರಿಸಿ ಮಾರುಕಟ್ಟೆಗೆ ಬರುವುದು ಒಳ್ಳೆಯದು. ಸರ್ಕಾರವೇ ಪಟಾಕಿ ನಿಷೇಧಿಸಿರುವುದು ಉತ್ತಮ ಬೆಳವಣಿಗೆ. ಈಗಾಗಲೇ ಬಟ್ಟೆ ಹಾಗೂ ಪೂಜಾ ಸಾಮಗ್ರಿ ಖರೀದಿಸಿದ್ದೇವೆ. ಶನಿವಾರ ಹೂವು-ಹಣ್ಣು ಖರೀದಿಸುತ್ತೇವೆ.
    | ಮನೋಜ ಅನಗೋಳಕರ್ ಗ್ರಾಹಕ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts