ಸಿನಿಮಾ

ಮಾರುಕಟ್ಟೆಗೆ ಬಾರದ ಹಣ್ಣುಗಳ ರಾಜ ಮಾವು

ಟಿ.ಶ್ರೀನಿವಾಸ್ ಹೊನ್ನಾಳಿ
ಹಸಿದು ಹಲಸು ತಿನ್ನು.ಉಂಡು ಮಾವು ತಿನ್ನು ಎಂದು ಬಲ್ಲವರು ಹೇಳುತ್ತಾರೆ. ಆದರೆ, ಈ ಬಾರಿ ಉಂಡು ರುಚಿರುಚಿಯಾದ ಹಣ್ಣು ಸವಿಯಲು ಮಾರುಕಟ್ಟೆಗೆ ಸಮರ್ಪಕವಾಗಿ ಮಾವಿನ ಹಣ್ಣು ಬಂದೇ ಇಲ್ಲ.

ಹೌದು..ಅಕಾಲಿಕ ಮಳೆಯಿಂದಾಗಿ ಮಾವಿನ ಹಣ್ಣಿನ ಇಳುವರಿ ಕಡಿಮೆಯಾಗಿದೆ. ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವಿನಹಣ್ಣಿನ ಸೀಸನ್ ಈ ಬಾರಿ ಸಂಪೂರ್ಣ ಸೊರಗಿದಂತಿದೆ.

ತೋಟಗಳಲ್ಲಿ ಇಳುವರಿ ಕಡಿಮೆ ಇದ್ದು ಬೆಲೆ ಮಾತ್ರ ಹೆಚ್ಚಾಗಿ ಮಾವಿನಹಣ್ಣು ಕೊಳ್ಳುವವರ ಸಂಖ್ಯೆ ಇಳಿಕೆ ಕಂಡಿದೆ. ಕಳೆದ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಗಾಳಿ, ಮಳೆಯಿಂದ ಹೂ ಉದುರಿತ್ತು. ಇದು ಇಳುವರಿ ಕಡಿಮೆಯಾಗಲು ಪ್ರಮುಖ ಕಾರಣ ಎನ್ನಲಾಗಿದೆ.

ಪ್ರಸ್ತುತ ಮಾರುಕಟ್ಟೆಗೆ ರಸಪುರಿ, ತೋತಾಪುರಿ, ಸಿಂಧೂರ, ಬಾದಾಮ, ಮಲ್ಲಿಕಾ ಹಣ್ಣುಗಳು ಬಂದಿವೆ.

ಮುಂಗಾರು ಮಳೆ

ಮುಂಗಾರು ಮಳೆ ಇನ್ನೇನು ಆರಂಭವಾಗಲಿದ್ದು, ಮಳೆ ಜತೆ ಆಲಿಕಲ್ಲು ಬಿದ್ದರೆ ಮಾವಿನ ಹಣ್ಣುಗಳಲ್ಲಿ ಹುಳು ಶುರುವಾಗಿ ವ್ಯಾಪಾರಕ್ಕೆ ಮತ್ತಷ್ಟು ಹೊಡೆತ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಮಾವು ವ್ಯಾಪಾರಿಗಳು.

25 ಎಕರೆ ಮಾವಿನ ತೋಟವನ್ನು 12 ಲಕ್ಷ ರೂ.ಗಳಿಗೆ 6 ತಿಂಗಳು ಮೊದಲೆ ಗುತ್ತಿಗೆ ಹಿಡಿದು ವ್ಯವಸ್ಥೆ ಮಾಡಿಕೊಂಡಿದ್ದೆವು.

ಆದರೆ, ಅಕಾಲಿಕ ಮಳೆಯಿಂದ ಹೂ ಬಿದ್ದು ನಷ್ಟದ ಹಂತಕ್ಕೆ ತಲುಪಿದ್ದೇವೆ ಎನ್ನುತ್ತಾರೆ ಪಟ್ಟಣದ ಮಾವಿನ ಹಣ್ಣಿನ ವ್ಯಾಪಾರಿ ಮಹಮದ್ ಇರ್ಫಾನ್.

ಮಾವಿನ ಹಣ್ಣು ಖರೀದಿಗೆ ಹಿಂದೇಟು

ಏಪ್ರಿಲ್ ತಿಂಗಳಲ್ಲಿ ಮಾವು ಬೇಗ ಹಣ್ಣಾಗಲಿ ಎಂದು ಕೆಲ ವ್ಯಾಪಾರಿಗಳು ರಾಸಾಯನಿಕ ಬೆರೆಸುತ್ತಾರೆ ಎನ್ನುವ ಅನುಮಾನದಿಂದ ಮಾವಿನ ಹಣ್ಣು ಖರೀದಿಗೆ ಕೆಲ ಗ್ರಾಹಕರು ಹಿಂದೇಟು ಹಾಕುತ್ತಾರೆ. ಅದರ ನಷ್ಟ ವ್ಯಾಪಾರಿಗಳ ಮೇಲೆ ಬೀಳುತ್ತದೆ.

ಮೇ ಮತ್ತು ಜೂನ್ ತಿಂಗಳಲ್ಲಿ ಮಾವಿನ ಹಣ್ಣುಗಳ ವ್ಯಾಪಾರ ಹೆಚ್ಚಾಗಬಹುದು ಎಂದು ವ್ಯಾಪಾರಿಗಳು ಭರವಸೆಯ ನಿರೀಕ್ಷೆಯಲ್ಲಿದ್ದಾರೆ.


Latest Posts

ಲೈಫ್‌ಸ್ಟೈಲ್