More

    ಕಡಲ ವನ್ಯಧಾಮದ ಕರಡು ಸಿದ್ಧ


    ಸುಭಾಸ ಧೂಪದಹೊಂಡ ಕಾರವಾರ
    ರಾಜ್ಯದ ಮೊದಲ ಕಡಲ ಧಾಮ ನಿರ್ವಣಕ್ಕೆ ಕರಡು ಸಿದ್ಧವಾಗಿದ್ದು, ಕೇಂದ್ರ ಸರ್ಕಾರದ ಇಲಾಖೆಗಳ ಅನುಮೋದನೆಯ ಬಳಿಕ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ.
    ರಾಜ್ಯದ ಮೊದಲ ಮರೈನ್ ಇಕೊ ಪಾರ್ಕ್ ಅನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣ ಮಾಡುವುದಾಗಿ 2020 ರ ಮಾರ್ಚ್ 5 ರಂದು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್​ನಲ್ಲಿ ಘೋಷಣೆ ಮಾಡಿದ್ದರು. ಅದಕ್ಕಾಗಿ 1 ಕೋಟಿ ರೂ. ಮೀಸಲಿಟ್ಟಿದ್ದರು. ಅದೇ ತಿಂಗಳಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ 13 ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಕಡಲ ಧಾಮ ನಿರ್ವಣಕ್ಕೆ ಅನುಮೋದನೆಯನ್ನೂ ನೀಡಲಾಗಿತ್ತು. ಈಗ ರಾಜ್ಯ ಅರಣ್ಯ ಇಲಾಖೆ ಸರ್ವೆ ನಡೆಸಿ ಕಡಲ ಧಾಮಕ್ಕೆ ಸ್ಥಳ ಗುರುತಿಸಿ ಅದರ ಕರಡನ್ನು ತಿಂಗಳ ಹಿಂದೆ ಸಿದ್ಧ ಮಾಡಿದೆ. ಅಂತಿಮ ಘೋಷಣೆಗೂ ಪೂರ್ವದಲ್ಲಿ ದೆಹರಾಡೂನ್​ನಲ್ಲಿರುವ ಚೀಫ್ ಹೈಡ್ರೋಗ್ರಾಫರ್ ಹಾಗೂ ಇತರ ಕೆಲ ಕೇಂದ್ರ ಸರ್ಕಾರದ ಇಲಾಖೆಗಳ ಅನುಮತಿ ಅಗತ್ಯವಾಗಿದೆ. ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಅನುಮತಿಗಾಗಿ ಪತ್ರ ಬರೆಯಲಾಗಿದೆ ಎಂಬ ಮಾಹಿತಿ ವಿಜಯವಾಣಿಗೆ ಲಭಿಸಿದೆ.

    ಕರಡಿನಲ್ಲಿ ಏನಿದೆ?

    ಅಪ್ಸರಕೊಂಡ ಬೀಚ್​ನಿಂದ ಮಡಿ ಬೀಚ್​ವರೆಗೆ ಸುಮಾರು 6 ಕೀಮೀ ಉದ್ದದ ಗುಡ್ಡದಿಂದ ಕೂಡಿರುವ ತೀರವನ್ನು ವನ್ಯಜೀವಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗುತ್ತದೆ. ಈ ಧಾಮವು ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಅದರಲ್ಲಿ 3500 ಹೆಕ್ಟೇರ್ ನಷ್ಟು ಸಮುದ್ರವಾಗಿದ್ದರೆ, 1500 ಹೆಕ್ಟೇರ್ ಲ್ಯಾಟರೈಟ್(ಕೆಂಪು) ಕಲ್ಲುಗಳಿಂದ ಕೂಡಿದ ಬೆಟ್ಟ ಪ್ರದೇಶವಾಗಿದೆ. ತೀರದಿಂದ ಸುಮಾರು 6 ಕಿಮೀ ದೂರದವರೆಗಿನ ಸಮುದ್ರವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗುತ್ತದೆ. ಒಮ್ಮೆ ಕಡಲ ಧಾಮ ಎಂದು ಅಧಿಸೂಚನೆಯಾದ ನಂತರ ಭೂ ಪ್ರದೇಶಕ್ಕೆ ಪೆನ್ಸಿಂಗ್ ತೀರದಲ್ಲಿ ಗುರುತು ಹಾಕುವ ಕಾರ್ಯ ಮಾಡಲಾಗುತ್ತದೆ.

    ಇಲ್ಲೇ ಏಕೆ?

    ಆಲಿವ್ ರೆಡ್ಲಿ ಎಂಬ ಕಡಲಾಮೆಗಳು ಮೊಟ್ಟೆ ಇಡುವ ಅಪರೂಪದ ತೀರ ಹೊನ್ನಾವರದಲ್ಲಿದೆ. ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೆಷನ್ ಆಫ್ ನೇಚರ್(ಐಸಿಯುಎನ್) ಅಳಿವಿನಂಚಿನ ಪಟ್ಟಿಯಲ್ಲಿರುವ ಸುಮಾರು 34 ಜೀವಿಗಳು ಈ ಭಾಗದಲ್ಲಿವೆ. ಹವಳದ ಬಂಡೆಗಳೂ ಇವೆ. ಇನ್ನು ಇಲ್ಲಿ ಸಾಮಾನ್ಯ ಮರಳಿನ ತೀರವಾಗಿರದೇ ಗುಡ್ಡದಿಂದ ಕೂಡಿದ್ದು, ಸಾರ್ವಜನಿಕ ಸಂಪರ್ಕದಿಂದ ದೂರವಿದೆ. ಇದರಿಂದ ಹೊನ್ನಾವರದ ಈ ಸ್ಥಳ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

    ವನ್ಯಧಾಮದ ವ್ಯಾಪ್ತಿಯ ನಡುವೆ ಇರುವ ಸ್ವಲ್ಪ ಖಾಸಗಿ ಜಮೀನನ್ನು ಸಂರಕ್ಷಿತ ವ್ಯಾಪ್ತಿಯಿಂದ ಕೈಬಿಡಲಾಗಿದೆ. ತೀರದಿಂದ 6 ಕಿಮೀವರೆಗೆ ಯಾಂತ್ರೀಕೃತ ಮೀನುಗಾರಿಕೆಗೆ ಈಗಾಗಲೇ ನಿರ್ಬಂಧವಿದೆ. ಇದರಿಂದ ವನ್ಯಧಾಮ ಘೋಷಣೆಯ ನಂತರ ಮೀನುಗಾರಿಕೆಗೆ ವಿಶೇಷ ನಿರ್ಬಂಧವೇನೂ ಇರದು. ಇನ್ನು ಅಧಿಸೂಚನೆಗೂ ಪೂರ್ವದಲ್ಲಿ ಸ್ಥಳೀಯ ಸಾರ್ವಜನಿಕರ ಅಹವಾಲು ಪಡೆಯಲಾಗುವುದು.
    -ಕೆ.ಗಣಪತಿ
    ಡಿಎಫ್​ಒ ಹೊನ್ನಾವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts