More

    ಮರೀನಾ ಸ್ಥಾಪನೆಗೆ ವಿರೋಧ, ಅನ್ನ ಕೊಟ್ಟ ಮಣ್ಣಿಗೆ ಪ್ರಾಣ ಕೊಡಲೂ ಸಿದ್ಧ ಎಂದ ಪಡುಕೆರೆ ನಿವಾಸಿಗಳು

    ಉಡುಪಿ: ಜಿಲ್ಲೆಯಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳು ಘೋಷಿಸಿದ್ದ ಮಹತ್ವದ ಯೋಜನೆಗೆ ಸಾರ್ವಜನಿಕರ ವಿರೋಧ ಉಂಟಾಗಿದೆ. ಪಡುಕೆರೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಮರೀನಾ (ವಿದೇಶಿ ಪ್ರವಾಸಿ ಹಡಗುಗಳ ತಂಗುದಾಣ) ಯೋಜನೆ ಅನುಷ್ಠಾನ ವಿರುದ್ಧ ಪಡುಕೆರೆ ನಿವಾಸಿಗಳು ತಿರುಗಿಬಿದ್ದಿದ್ದು, ಅನ್ನ ಕೊಟ್ಟ ಮಣ್ಣಿನ ರಕ್ಷಣೆಗೆ ಪ್ರಾಣ ಕೊಡಲೂ ಸಿದ್ಧ ಎಂದು ಘೋಷಿಸಿದ್ದಾರೆ.

    ಇತ್ತೀಚೆಗೆ ಜಿಲ್ಲಾಧಿಕಾರಿ, ಶಾಸಕ ಕೆ.ರಘುಪತಿ ಭಟ್ ಪಡುಕೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮರೀನಾ ಸ್ಥಾಪನೆಗೆ ಯೋಜನೆ ರೂಪಿಸಲಾಗುವುದು ಎಂದು ಘೋಷಣೆ ಮಾಡಿದ್ದರು. ಅದಕ್ಕಾಗಿ ಡಿಪಿಆರ್‌ಗೂ ಸಿದ್ಧತೆ ಆರಂಭಗೊಂಡಿತ್ತು.
    ಪಡುಕರೆಯ ಬಾಲಾಂಜನೇಯ ಪೂಜಾ ಮಂದಿರದ ವಠಾರದಲ್ಲಿ ಶುಕ್ರವಾರ ನಡೆದ ಸರ್ವ ಸಂಘಗಳ ಒಕ್ಕೂಟ ಸಭೆಯಲ್ಲಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಜನಾರ್ದನ ತಿಂಗಳಾಯ ಮಾತನಾಡಿ, ಮರೀನಾ ಯೋಜನೆಯಿಂದಾಗಿ ಮಲ್ಪೆಯ ಮೀನುಗಾರರಿಗೆ ತೊಂದರೆ ಉಂಟಾಗಲಿದೆ. ಈ ಹಿಂದೆ ಮಲ್ಪೆಗೆ ಟೆಬ್ಮಾ ಕಂಪನಿ ಬಂದಾಗಲೂ ಸ್ಥಳೀಯರಿಗೆ ಉದ್ಯೋಗಾವಕಾಶ ಸಹಿತ ಹಲವಾರು ರೀತಿಯ ಆಮಿಷ ಒಡ್ಡಲಾಗಿತ್ತು. ಯಾವುದನ್ನೂ ಈಡೇರಿಸಿಲ್ಲ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

    ರಾಜಕಾರಣಿಗಳನ್ನು ಮುಂದಿಟ್ಟುಕೊಂಡು ಉದ್ಯಮಿಗಳು ದುಡ್ಡು ಮಾಡುವ ಯೋಜನೆ ಇದಾಗಿದೆ, ಈ ಮೂಲಕ ಜನರನ್ನು ಎತ್ತಂಗಡಿ ಮಾಡುವ ಷಡ್ಯಂತ್ರ ನಡೆಯುವ ಸಾಧ್ಯತೆಯೂ ಇದೆ. ಪಡುಕೆರೆಯ ಅನ್ನ ತಿನ್ನುವವರು ಊರು ಉಳಿಸಲು, ಪ್ರಾಣ ನೀಡಲೂ ಸಿದ್ಧ. ಜಿಲ್ಲಾಧಿಕಾರಿ ಮೀನುಗಾರರ ವಿರೋಧವನ್ನು ಅರ್ಥಮಾಡಿಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
    ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ಮಾತನಾಡಿ, ಶಾಸಕರು ಯೋಜನೆಯಿಂದ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಸಾಧಕ-ಬಾಧಕ ಚರ್ಚಿಸಿ ಜಿಲ್ಲೆಗೆ ಹಾಗೂ ಮೀನುಗಾರರರಿಗೆ ಕೆಡುಕಾಗುವ ಯೋಜನೆಯನ್ನು ವಿರೋಧಿಸಲಾಗುವುದು ಎಂದರು. ಈ ಬಗ್ಗೆ ಜ.18ರಂದು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

    ಸ್ಥಳೀಯ ಪ್ರಮುಖರಾದ ಶಿವರಾಮ ಪುತ್ರನ್, ಪ್ರಕಾಶ್ ಮಲ್ಪೆ, ದೇವದಾಸ್ ಕೋಟ್ಯಾನ್, ಸುಮಿತ್ರಾ ಕುಂದರ್, ದಯಾಕರ ವಿ.ಸುವರ್ಣ ಉಪಸ್ಥಿತರಿದ್ದರು. ವಾದಿರಾಜ ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮರೀನಾ ಯೋಜನೆ ಬಗೆಗಿನ ಸಾಧಕ-ಬಾಧಕ ಕುರಿತಾಗಿನ 10 ನಿಮಿಷಗಳ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಸ್ಥಳೀಯ ನೂರಾರು ಮಂದಿ ಪಾಲ್ಗೊಂಡಿದ್ದರು.

    ಐಷಾರಾಮಿ, ವಿಲಾಸಿ ಯೋಜನೆ: ಈ ಮರೀನಾ ಯೋಜನೆ ಹೊರದೇಶದ ಪ್ರವಾಸಿಗರಿಗೆ ಮೀಸಲಾದ ಯೋಜನೆಯಾಗಿದೆ ಎಂದು ಪಡುಕೆರೆ ಗ್ರಾಮದ ಹಿರಿಯ ಮೀನುಗಾರರಾದ ರಾಮ ಕಾಂಚನ್ ಹೇಳಿದರು. ವಿದೇಶಗಳಲ್ಲಿರುವ ಕೋಟ್ಯಂತರ ಜನರ ಐಷಾರಾಮಿ, ವಿಲಾಸಿ ಜೀವನಕ್ಕಾಗಿ ಇದನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಸರ್ಕಾರ ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts