More

    ವಿಜೃಂಭಣೆಯ ಹೊಸಲು ಮಾರಮ್ಮದೇವಿ ಜಾತ್ರೆ

    ಹುಣಸೂರು: ತಾಲೂಕಿನ ಬಿಳಿಕೆರೆಯ ಹೊಸಲು ಮಾರಮ್ಮದೇವಿಯ ಜಾತ್ರಾ ಮಹೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.


    ಬಿಳಿಕೆರೆ ಹೋಬಳಿ ವ್ಯಾಪ್ತಿಯ 7 ಗ್ರಾಮಗಳಾದ ಮಲ್ಲಿನಾಥಪುರ, ಬೋಳನಹಳ್ಳಿ, ರಂಗಯ್ಯನಕೊಪ್ಪಲು, ಎಮ್ಮೆಕೊಪ್ಪಲು, ಬಿಳಿಕೆರೆ, ಮೈದನಹಳ್ಳಿ, ರಾಮೇನಹಳ್ಳಿ ಗ್ರಾಮದ ಜನರು ಒಂದಾಗಿ ಆಚರಿಸುವ ಈ ಜಾತ್ರಾ ಮಹೋತ್ಸವವನ್ನು ಸಂಪ್ರದಾಯದಂತೆ ದೇವಿಯ ಉತ್ಸವ ಮೂರ್ತಿಯನ್ನು ಮಲ್ಲಿನಾಥಪುರದಿಂದ ಮೆರವಣಿಗೆಯ ಮೂಲಕ ಹೊತ್ತು ತಂದರು. ದಾರಿಯುದ್ದಕ್ಕೂ ಹರಕೆ ಹೊತ್ತವರು ತೆಂಗಿನಕಾಯಿ ಒಡೆದರು, ಮೆರವಣಿಗೆಯಲ್ಲಿ ಕಳಸ ಹೊತ್ತ ಮಹಿಳೆಯರು ಸಾಗಿಬಂದರು.


    ದೇವಾಲಯದ ಆವರಣದಲ್ಲಿ ಉತ್ಸವ ಮೂರ್ತಿಯನ್ನು ಸ್ವಸ್ಥಾನಕ್ಕೆ ಸೇರಿಸಿದ ನಂತರ ಹರಕೆ ಹೊತ್ತ ಭಕ್ತರು ಜೀವಂತ ಕೋಳಿಗಳನ್ನು ದೇವಾಲಯದ ಛಾವಣಿ ಮೇಲೆ ಎಸೆದು ಹರಕೆ ತೀರಿಸಿದರು.


    ಜಾತ್ರೆಯ ಅಂಗವಾಗಿ ಜಾತ್ರಾಮಾಳದಲ್ಲಿ ಅಳವಡಿಸಿದ್ದ ಸಿಹಿ ಅಂಗಡಿಗಳು, ಮಕ್ಕಳ ಆಟಿಕೆ ಅಂಗಡಿಗಳಿಗೆ ಮಹಿಳೆಯರು ಮಕ್ಕಳು ಮುಗಿಬಿದ್ದಿದ್ದರು. ಅಲ್ಲದೇ ಬಿರು ಬೇಸಿಗೆಯ ಧಗೆಯನ್ನು ತಣಿಸಲು ಅಲ್ಲಲ್ಲಿ ಮಜ್ಜಿಗೆ, ಪಾನಕವನ್ನು ಭಕ್ತರಿಗೆ ಯುವಕರ ಸಂಘಗಳು, ದೇವಿಯ ಭಕ್ತರು ವಿತರಿಸಿದರು.
    ಸಂಜೆ 6ರ ನಂತರ ನರಪಿಳ್ಳೆಯೂ ಇರುವಂತಿಲ್ಲ;


    ಈ ಉತ್ಸವದ ಮತ್ತೊಂದು ವಿಶೇಷವೆಂದರೆ ಸಂಜೆ 6ರ ನಂತರ ದೇವಾಲಯದ ಸುತ್ತ ಯಾರೊಬ್ಬರೂ ಇರುವಂತಿಲ್ಲ. ಜಾತ್ರೆಗಾಗಿ ಅಂಗಡಿ ಮುಂಗಟ್ಟುಗಳನ್ನು ಕಟ್ಟಿಕೊಂಡವರು ಹಾಗೂ ಜಾತ್ರೆಗೆ ಬಂದವರೂ ಜಾಗ ಖಾಲಿ ಮಾಡುತ್ತಾರೆ. ಸಂಜೆಯ ನಂತರ ಅಮ್ಮನವರು ತನ್ನನ್ನು ನಂಬಿಕೊಂಡಿರುವ ಭಂಟರಿಗೆ ಊಟ ಬಡಿಸುತ್ತಾಳೆನ್ನುವುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಯಾರೊಬ್ಬರೂ ಅಲ್ಲಿರುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts