More

    ಮರಲಗೊಂಡನಹಳ್ಳಿಗಿಲ್ಲ ಅಂಗನವಾಡಿ: ಪುಟ್ಟ ಕೋಣೆಯಲ್ಲಿಯೇ 42 ಮಕ್ಕಳಿಗೆ ಅಕ್ಷರ

    ಮಾಗಡಿ: ಪ್ರತಿ ಮಗುವಿಗೂ ಕಡ್ಡಾಯ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡು ಪ್ರತಿವರ್ಷ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಸೌಲಭ್ಯಗಳು ಮಾತ್ರ ಗ್ರಾಮಗಳಿಗೆ ತಲುಪುತ್ತಿಲ್ಲ.

    ತಾಲೂಕಿನ ಮರಲಗೊಂಡನಹಳ್ಳಿಯಲ್ಲಿ ಅಂಗನವಾಡಿ ಸೌಲಭ್ಯವೇ ಇಲ್ಲದೆ, ಗ್ರಾಮದ ಯುವಕ ಮಂಡಳಿ ನಿರ್ಮಿಸಿಕೊಟ್ಟಿರುವ ಚಿಕ್ಕ ಕೋಣೆಯಲ್ಲಿಯೇ 26 ವರ್ಷಗಳಿಂದ ಅಕ್ಷರ ಹೇಳಿಕೊಡಲಾಗುತ್ತಿದೆ. ಸದ್ಯ 42 ಮಕ್ಕಳಿದ್ದು, ಇಕ್ಕಟ್ಟಿನಲ್ಲಿಯೇ ಪಾಠ ಕೇಳಬೇಕಾದ ಅನಿವಾರ್ಯತೆ ಇದೆ. ಅಲ್ಲದೆ, ಚಿಕ್ಕ ಕೋಣೆಯಲ್ಲಿಯೇ ಅಕ್ಕಿ, ಬೇಳೆ, ಕಡಲೆಕಾಯಿ ಎಣ್ಣೆ, ಹಾಲಿನ ಪೌಡರ್ ಸಂಗ್ರಹಿಸಲಾಗಿದೆ.

    ಮಕ್ಕಳ ಕಲಿಕೆಗೆ ಬೇಕಾದ ಕೊಠಡಿ ವ್ಯವಸ್ಥೆ ಇಲ್ಲದೆ ಕೋಣೆಯಲ್ಲೇ ಶಿಕ್ಷಣ ನೀಡುವಂತಾಗಿದೆ. ಚುನಾವಣೆ, ಸಮಾರಂಭ ಇದ್ದಾಗ ಮಾತ್ರ ರಾಜಕಾರಣಿಗಳು ಮತ್ತು ಅಧಿಕಾರಿಗಳು ಗ್ರಾಮಕ್ಕೆ ಬರುತ್ತಾರೆ. ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಿ ಎನ್ನುತ್ತಾರೆ. ಆದರೆ ಸೂಕ್ತ ಸೌಲಭ್ಯ ಮಾತ್ರ ಕಲ್ಪಿಸುವುದಿಲ್ಲ ಎಂಬುದು ಗ್ರಾಮಸ್ಥರಾದ ದೇವರಾಜು, ರಾಮಣ್ಣ ಮತ್ತಿತರರ ಆರೋಪವಾಗಿದೆ.

    ಅಂಗನವಾಡಿ ನಿವೇಶನಕ್ಕಾಗಿ 6 ತಿಂಗಳಿಗೊಮ್ಮೆ ನಡೆಯುವ ಗ್ರಾಮಸಭೆಯಲ್ಲಿ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಅಂಗನವಾಡಿ ಶಿಕ್ಷಕಿ ಯಶೋದಾ ಬೇಸರ ವ್ಯಕ್ತಪಡಿಸಿದ್ದಾರೆ.

    ಅಂಗನವಾಡಿ ಕಟ್ಟಡಕ್ಕೆ ನಿವೇಶನ ನೀಡುವಂತೆ ಗ್ರಾಮಸ್ಥರ ಮನವೊಲಿಸಿ ನರೇಗಾ, ಸಂಸದರ, ಜಿಪಂ, ತಾಪಂ ಸದಸ್ಯರ ಹಾಗೂ ನನ್ನ ಅನುದಾನದಡಿ ಸುಸಜ್ಜಿತ ಅಂಗನವಾಡಿ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ.
    ಧನಂಜಯ ನಾಯ್ಕ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ

    ಅಂಗನವಾಡಿ ಕಟ್ಟಡ ನಿರ್ಮಿಸಲು ಅನುದಾನ ಸಾಕಷ್ಟಿದೆ. ಆದರೆ ನಿವೇಶನ ಇಲ್ಲ. ಗ್ರಾಮದ ಮುಖಂಡರು ಮತ್ತು ಜನಪ್ರತಿನಿಧಿಗಳು ನಿವೇಶನ ನೀಡಿದರೆ ಶೀಘ್ರವೇ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.
    ಬಿ.ಎಲ್.ಸುರೇಂದ್ರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts