More

    ಬೀದಿಬದಿ ವ್ಯಾಪಾರಿಗಳ ಕ್ಷೇಮಕ್ಕಾಗಿ ಅನೇಕ ಯೋಜನೆ

    ಭದ್ರಾವತಿ: ಬೀದಿಬದಿ ವ್ಯಾಪಾರಿಗಳೂ ಸ್ವಾವಲಂಬಿಗಳಾಗಿ ಬದುಕು ಸಾಗಿಸಬೇಕೆನ್ನುವ ಉದ್ದೇಶದಿಂದ ಸರ್ಕಾರ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ವ್ಯಾಪಾರಿಯೂ ಪಡೆದುಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ ಹೇಳಿದರು.

    ಹಳೇ ನಗರದ ಮಾಚಿದೇವ ಕಲ್ಯಾಣ ಮಂಟಪದಲ್ಲಿ ನಗರಸಭೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರ ಬೀದಿಬದಿ ವ್ಯಾಪಾರಿಗಳ ಕ್ಷೇಮಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ದಿನನಿತ್ಯದ ವ್ಯಾಪಾರ ನಡೆಸಲು ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.
    ಎಸ್‌ಬಿಐ ಬ್ಯಾಂಕ್ ಡೆಪ್ಯುಟಿ ಮ್ಯಾನೇಜರ್ ಪ್ರಶಾಂತ್ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯ ಮೂಲಕ ಬ್ಯಾಂಕ್‌ಗಳು ಅವರ ವ್ಯಾಪಾರದ ಸಾಮರ್ಥ್ಯಕ್ಕೆ ಅನುಗುಣವಾಗಿ ಹಂತ ಹಂತವಾಗಿ 20ರಿಂದ 50 ಸಾವಿರ ರೂ.ವರೆಗೂ ಸಾಲ ನೀಡುತ್ತಿವೆ. ಈ ರೀತಿ ಪಡೆದ ಸಾಲವನ್ನು ವ್ಯವಹಾರಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕು. ಆರ್ಥಿಕವಾಗಿ ಸದೃಢರಾಗಬೇಕು. ಪಡೆದ ಸಾಲವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಆಗ ಮಾತ್ರ ಹೆಚ್ಚಿನ ಸಾಲ ಸೌಲಭ್ಯ ಪಡೆಯಲು ನೀವುಗಳು ಅರ್ಹರಾಗುತ್ತೀರಿ. ವಿಮಾ ಸೌಲಭ್ಯಗಳನ್ನೂ ಪಡೆದುಕೊಳ್ಳಿ ಎಂದು ಹೇಳಿದರು.
    ಜಿಲ್ಲಾ ಕೌಶಲಾಭಿವೃದ್ದಿ ಅಧಿಕಾರಿ ಡಾ. ವೀರೇಂದ್ರ ನಾಯಕ್ ಸಾಲ ಪಡೆದುಕೊಳ್ಳುವ ಬಗೆ ಹಾಗೂ ಅದರ ಮಹತ್ವ, ಸಾಧಕ-ಬಾಧಕಗಳನ್ನು ವಿವರಿಸಿದರು. ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳಾ ಭೈರಪ್ಪ, ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್, ಸುಹಾಸಿನಿ, ಅನುಸುಧಾ ಮೋಹನ್ ಪಳನಿ, ಶಶಿಕಲಾ ನಾರಾಯಣಪ್ಪ, ಗೀತಾ ರಾಜ್‌ಕುಮಾರ್, ಕೌಶಲ ಅಭಿವೃದ್ದಿ ಅಧಿಕಾರಿ ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts