More

    ಅರ್ಹರಿಗೆ ಕ್ರೀಡಾ ಸಾಮಗ್ರಿ ವಿತರಿಸಲು ಪುರಸಭೆ ಸಿಬ್ಬಂದಿಗೆ ವಿಪಕ್ಷ ನಾಯಕ ತಾಕೀತು

    ಮಾನ್ವಿ: ಪುರಸಭೆ ವ್ಯಾಪ್ತಿಯ ಕ್ರೀಡಾಪಟುಗಳಿಗೆ ವಿತರಿಸಲು ತರಿಸಿದ್ದ ಕ್ರೀಡಾ ಸಾಮಗ್ರಿಗಳು ವಿತರಣೆಯಾಗದೆ ಪುರಸಭೆಯಲ್ಲಿ ಧೂಳು ತಿನ್ನುತ್ತಿವೆ ಎಂದು ವಿಪಕ್ಷ ನಾಯಕ ರಾಜಾ ಮಹೇಂದ್ರನಾಯಕ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು.

    ಪುರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸಿಬ್ಬಂದಿ ನಿರ್ಲಕ್ಷೃಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, 2017-18ರಿಂದ ಇದುವರೆಗೂ ಕ್ರೀಡಾಪಟುಗಳಿಗೆ ಸಾಮಗ್ರಿಗಳನ್ನು ವಿತರಿಸಿಲ್ಲ ಎಂದು ದೂರಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಗಂಗಾಧರ, ಕ್ರೀಡಾ ಸಾಮಗ್ರಿಗಳ ಕುರಿತು ಮಾಹಿತಿ ಪಡೆದಿರುವೆ. ಈಗಾಗಲೇ 2018ರ ಅರ್ಜಿಗಳ ಫೈಲ್ ಸಿಕ್ಕಿದೆ. ಉಳಿದವು ಸಿಕ್ಕಿಲ್ಲ. ಶೀಘ್ರ ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತಂದು ಕ್ರೀಡಾ ಸಾಮಗ್ರಿಗಳನ್ನು ವಿತರಿಸುವ ಭರವಸೆ ನೀಡಿದರು. ಮುಖ್ಯಾಧಿಕಾರಿ ಭರವಸೆಗೆ ಸುಮ್ಮನಾಗದ ಸದಸ್ಯ ಅಮ್ಜದ್‌ಖಾನ್, ಪುರಸಭೆಯಲ್ಲಿ ಸದಸ್ಯರಿಗೆ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    2021-22ನೇ ಸಾಲಿನ 15ನೇ ಹಣಕಾಸು ಹಾಗೂ ಎಸ್‌ಎಫ್‌ಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಪುರಸಭೆ ಅಧ್ಯಕ್ಷೆ ರಶೀದಾಬೇಗಂ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ಲಕ್ಷ್ಮೀದೇವಿನಾಯಕ, ಶೇಖ್ ಫರೀದ್ ಉಮರಿ, ಶರಣಬಸವಗೌಡ, ಮೀನಾಕ್ಷಿ ರಾಮಕೃಷ್ಣ, ಸಂತೋಷಮ್ಮ ಜಯಪ್ರಕಾಶ, ಸಾಬೀರ್‌ಪಾಷಾ, ನೀಲಮ್ಮ, ಹುಸೇನ್‌ಬಾಷಾ, ಸೈಯ್ಯದ್ ತನ್ವೀರ್‌ಉಲ್ ಹಸನ್, ನೀಲಮ್ಮ, ಶರಣಯ್ಯಸ್ವಾಮಿ, ರೇವಣಸಿದ್ದಯ್ಯ, ಬಸವರಾಜ ಭಜಂತ್ರಿ, ಶರಣಪ್ಪ ಮೇದಾ, ಇಬ್ರಾಹಿಂ ಖುರೇಷಿ, ಸುಖಮುನಿ, ಬಸ್ಸಮ್ಮ ಹನುಮಂತ, ಬಾಷಾಸಾಬ್, ಅಮ್ಜದ್ ಖಾನ್ ಇದ್ದರು.

    ಸಭೆಯಲ್ಲಿ ಪಾಲ್ಗೊಂಡ ಶ್ವಾನ!
    ಪುರಸಭೆ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಸಾಮಾನ್ಯ ಸಭೆಯಲ್ಲಿ ಕೆಲ ಹೊತ್ತು ಶ್ವಾನ ಕೂಡ ಪಾಲ್ಗೊಂಡಿತ್ತು. ಸದಸ್ಯರ ಕುರ್ಚಿ ಬಳಿ ಹಾಕಿರುವ ಟೇಬಲ್ ಮೇಲೆ ಕುಳಿತ ಶ್ವಾನವನ್ನು ಅಲ್ಲಿಂದ ಓಡಿಸಲು ಮಹಿಳಾ ಸದಸ್ಯರು ಎಷ್ಟೇ ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಅದನ್ನು ಹೊರಗಟ್ಟಲು ಪುರಸಭೆ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಇದು ಯಾವ ಸದಸ್ಯರ ಸಾಕು ನಾಯಿ ಎಂದು ಕೇಳುತ್ತಿರುವಾಗಲೇ, ಸದಸ್ಯರಿಗೆ ಊಟ ತಂದಿದ್ದ ಖಾನಾವಳಿ ಮಾಲೀಕ ಸಾಕಿರುವ ನಾಯಿ ಎಂದು ತಿಳಿಯಿತು. ಸಭೆಯಲ್ಲಿ ಶ್ವಾನ ಬಂದು ಸದಸ್ಯರಿಗೆ ಕೆಲ ಹೊತ್ತು ನಗೆಗಿಡು ಮಾಡಿತು.

    2021-22ನೇ ಸಾಲಿನಲ್ಲಿ ಎಸ್‌ಎಫ್‌ಸಿ ಯೋಜನೆ ಅನುದಾನದಲ್ಲಿ ಶೇ.7.25 ಅಡಿ ಪಟ್ಟಣದ ಬಡ ಜನರಿಗೆ ಗ್ಯಾಸ್ ಖರೀದಿಗೆ ಹಣ ನಿಗದಿ ಮಾಡಲಾಗಿದೆ. ಯಾವ ಏಜೆನ್ಸಿಗೆ ನೀಡಲಾಗಿದೆ ಎಂಬುದನ್ನು ತಿಳಿಸಬೇಕು. ಗ್ಯಾಸ್ ವಿತರಣೆಯಲ್ಲಿ ವಿಳಂಬ ಮಾಡದೇ ಜನರಿಗೆ ಬೇಗ ವಿತರಿಸಬೇಕು. ಗ್ಯಾಸ್ ವಿತರಣೆ ಮತ್ತು ಫಲಾನುಭವಿಗಳ ಆಯ್ಕೆ ಬಗ್ಗೆ ಸದಸ್ಯರ ಗಮನಕ್ಕೆ ತರಬೇಕು.
    | ರಾಜಾ ಮಹೇಂದ್ರನಾಯಕ ವಿಪಕ್ಷ ನಾಯಕ ಮೀನಾಕ್ಷಿ ಸದಸ್ಯೆ

    ಯಾವ ಏಜನ್ಸಿಗೂ ನೀಡಿಲ್ಲ. ಈಗಾಗಲೇ 130 ಅರ್ಜಿಗಳು ಬಂದಿವೆ. ಪ.ಜಾತಿಯ 78 ಜನರಿಗೆ ಗ್ಯಾಸ್ ವಿತರಿಸಲು 4.2 ಲಕ್ಷ ರೂ. ಹಾಗೂ ಎಸ್ಟಿಯ 52 ಜನರಿಗೆ ಗ್ಯಾಸ್ ವಿತರಣೆಗೆ 2.8 ಲಕ್ಷ ರೂ. ಹಣ ನಿಗದಿ ಮಾಡಲಾಗಿದೆ. ಶೀಘ್ರ ಏಜೆನ್ಸಿಗೆ ಕೊಟೇಷನ್ ನೀಡಲು ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಲಾಗುವುದು. ಗ್ಯಾಸ್ ವಿತರಣೆ ಕುರಿತು ಸದಸ್ಯರ ಅನುಮತಿ ಪಡೆಯಲಾಗುವುದು.
    | ಗಂಗಾಧರ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts