More

    ಮನಸ್ಸಿಗೆ ಶಿಕ್ಷಣ, ಜೀವನಕ್ಕೆ ಸಂಸ್ಕಾರ ನೀಡುವ ಮಂತ್ರಯೋಗ

    ಮನಸ್ಸಿಗೆ ಶಿಕ್ಷಣ, ಜೀವನಕ್ಕೆ ಸಂಸ್ಕಾರ ನೀಡುವ ಮಂತ್ರಯೋಗ‘ದೈವಾಧೀನಂ ಜಗತ್ಸರ್ವಂ| ಮಂತ್ರಾಧೀನಂ ತು ದೈವತಂ’-
    ಈ ಜಗತ್ತು ದೇವರ ಅಧೀನ. ಈ ದೈವವು ಮಂತ್ರಾಧೀನ. ಮಂತ್ರವು ಮಾನವಾಧೀನ. ‘ದೇಹೋ ದೇವಾಲಯ ಪ್ರೋಕ್ತೊ, ಜೀವೋ ದೇವಃ ಸನಾತನಃ’- ಈ ಶರೀರವೇ ದೇವಾಲಯ, ಸಾಕ್ಷಾತ್ ಭಗವಂತನೇ ಇಲ್ಲಿ ವಾಸವಾಗಿದ್ದಾನೆ. ಇಂತಹ ಅನುಪಮ ಸಾಧನಾ ಶರೀರವನ್ನು ನೀಡಿದ ಪರಮಾತ್ಮನ ಸ್ಮರಣೆ ಆರಾಧನೆ- ಉಪಾಸನೆ ಅನುಸಂಧಾನ ಮಾಡಬೇಕಾಗಿರುವುದು ನಮ್ಮ ಕರ್ತವ್ಯ.

    ಮಂತ್ರ ಎಂದರೇನು? ‘ಮನನಾತ್ ತ್ರಾಯತೇ ಇತಿಮಂತ್ರಃ’ – ಮನನದ ಕಾರಣದಿಂದ ಸಾಧಕರನ್ನು ರಕ್ಷಿಸುತ್ತದೆ. ಮನದಲ್ಲಿ ನಿರಂತರವಾಗಿ ಉದ್ಭವಿಸುವ, ಪಠಿಸುವ ಪ್ರಾಕೃತಿಕ, ವೈದಿಕ, ಪವಿತ್ರ ಶುದ್ಧ ಕಂಪನ ನಾದಸ್ವರಗಳ ಗುಚ್ಚ, ಅಕ್ಷರ ಅಥವಾ ಶಬ್ದ ಸಮೂಹವೇ ಮಂತ್ರ. ಮಂತ್ರವು ರಹಸ್ಯ ಹಾಗೂ ರಕ್ಷಿಸಲ್ಪಟ್ಟ ನಾದವಾಗಿದೆ. ಮಂತ್ರ ಪಠಣದಿಂದ ಮಾನಸಿಕ ಹಾಗೂ ಆಧ್ಯಾತ್ಮಿಕ ಶಕ್ತಿ ಪಡೆಯಬಹುದು. ಕೆಲವು ಮಂತ್ರಕ್ಕೆ ದಿವ್ಯ ಅರ್ಥ ಹಾಗೂ ಇನ್ನೂ ಕೆಲವಕ್ಕೆ ಜೀವರಸಾಯನ ಸವರೂಪವಿದೆ. ಇವು ಶರೀರ, ಮನಸ್ಸು, ಭಾವನೆ, ಬುದ್ಧಿ ಹಾಗೂ ಪರಿಸರದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.

    ಮಂತ್ರಗಳು ಭಾರತೀಯ ಜೀವನ ಪದ್ಧತಿಯ ಅವಿಭಾಜ್ಯ ಅಂಗವಾಗಿದೆ. ಮಂತ್ರಗಳ ವಿವಿಧ ಪ್ರಕಾರದಲ್ಲಿ ಬಳಕೆಯಲ್ಲಿದೆ. ಅವು ಬೀಜಮಂತ್ರ, ವೇದಮಂತ್ರ, ಸ್ತೋತ್ರ, ದೀಕ್ಷಾ ಮಂತ್ರ, ಧಾರ್ವಿುಕ ಮಂತ್ರ, ಶಾಂತಿಮಂತ್ರ, ವಶೀಕರಣ, ಸ್ತಂಭನ, ಉಚ್ಛಾರಣ ಹಾಗೂ ಮರಣಮಂತ್ರಗಳು ಪ್ರಾಚೀನಗ್ರಂಥಗಳಲ್ಲಿ ಮಂತ್ರಗಳ ಬಳಕೆ ಅಪಾರವಾಗಿದೆ.ಮಂತ್ರಗಳು ವಿವಿಧ ಸ್ವರೂಪದಲ್ಲಿವೆ. ಋಗ್ವೇದದಲ್ಲಿ ಬರುವ ಮಂತ್ರಗಳನ್ನೇ ಸಾಮವೇದದಲ್ಲಿ ಗಾನಮಯವಾಗಿ ಬಳಕೆಯಲ್ಲಿದೆ. ಮಂತ್ರಗಳು ಇಂಪನ್ನು ಲೆಕ್ಕಾಚಾರಯುಕ್ತ ತಾಳಬದ್ಧ ಸ್ವರೂಪ ಹೊಂದಿವೆ. ಈ ಮಂತ್ರಗಳು ಅಪರಿಮಿತ ದಿವ್ಯಗುಣ ಹೊಂದಿವೆ. ಮಂತ್ರಗಳ ಮುಖ್ಯ ಉದ್ದೇಶವೇ ಸತ್ಯಶೋಧನೆ. ವ್ಯಕ್ತಿಯ ನಿಜಸ್ವರೂಪದ ಅರಿವು, ಬೆಳಕು, ಅಮರತ್ವ, ಶಾಂತಿ ಪ್ರೇಮ,

    ಜ್ಞಾನ ಮತ್ತು ಕರ್ಮ. ಕೆಲವು ಮಂತ್ರಗಳಿಗೆ ಅರ್ಥಹುಡುಕುವುದು ಕಷ್ಟವಾದರೂ ಅದರ ಆಧ್ಯಾತ್ಮಿಕ ಪರಿಣಾಮಮಾತ್ರ ಎಲ್ಲರಿಗೂ ಲಭಿಸುವುದು. ಉತ್ತಮ ಮನಶಾಸ್ತ್ರಜ್ಞರಾಗಿದ್ದ ನಮ್ಮ ಹಿರಿಯರು ಮನಸ್ಸಿಗೆ ಶಿಕ್ಷಣವನ್ನು, ಜೀವನಕ್ಕೆ ಸಂಸ್ಕಾರವನ್ನು ನೀಡಲು ಅನೇಕ ವಿಚಾರಗಳನ್ನೂ ಆಚಾರಗಳನ್ನೂ ಸೂಚಿಸಿದ್ದಾರೆ. ಇವುಗಳಲ್ಲಿ ಗಾಯತ್ರೀ ಮಂತ್ರೋಪಾಸನೆ ಅತ್ಯಂತ ಸರಳ, ಸುಲಭ ಹಾಗೂ ತೀವ್ರ ಪರಿಣಾಮಕಾರಿ. ಗಾಯತ್ರಿ ಮಂತ್ರೋಪಾಸನೆ ಎಂದರೆ ಸೂರ್ಯನ ಉಪಾಸನೆಯೇ ಆಗಿದೆ.

    ಮನುಷ್ಯನ ಶರೀರ ಒಂದು ಅದ್ಭುತ ಯಂತ್ರ. ಈ ಯಂತ್ರ ಕಾರ್ಯನಿರ್ವಹಿಸಬೇಕಾದರೆ ಎಲ್ಲಾ ನರನಾಡಿಗಳು ಸುವ್ಯವಸ್ಥಿತವಾಗಿರಬೇಕು. ನಮ್ಮ ಶರೀರದಲ್ಲಿ 72 ಸಾವಿರ ನಾಡಿಗಳಿವೆ. ಈ ನಾಡಿಗಳಿಗೆ ಗಾಯತ್ರೀ ಮಂತ್ರವು ಉತ್ತಮ ಕಾರ್ಯಕ್ಕೆ ಪ್ರಚೋದನೆಯನ್ನು, ವ್ಯಾಯಾಮವನ್ನು ನೀಡುತ್ತದೆ. ಗಾಯತ್ರೀ ಮಂತ್ರದಲ್ಲಿರುವ 24 ಅಕ್ಷರಗಳು ಶರೀರದ ಮುಖ್ಯವಾದ ಬೆನ್ನು ಮೂಳೆಯಲ್ಲಿರುವ 24 ಕೀಲುಗಳನ್ನು ಪ್ರಚೋದಿಸಿ ಸಮನ್ವಯ ತರುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಬೆನ್ನುಮೂಳೆ ಅಥವಾ ಮೇರುದಂಡ ಯೋಗದೃಷ್ಟಿಯಲ್ಲಿ ಮಹತ್ವದ ಸ್ಥಾನ ಹೊಂದಿದೆ. ಈ ಮೂಳೆಯು ಶರೀರದ ಕಂಬವೆಂದು, ಕುಂಡಳಿನಾಳವೆಂದು ಕರೆಯಲ್ಪಡುವುದು. ಆಧುನಿಕ ಶರೀರ ಶಾಸ್ತ್ರ (ಅನಾಟಮಿ)ದಲ್ಲಿ ಸರ್ವಿಕಲ್ 7, ಡಾರ್ಸ್​ಲ್ 12, ಲಂಬರ್ 5 ಎಂಬುದಾಗಿ ಬೆನ್ನುಮೂಳೆಯ 24 ಭಾಗಗಳನ್ನು ಹೆಸರಿಸಿದ್ದಾರೆ. ಇಂತಹ ಮಹತ್ವದ ಸ್ಥಾನ ಹೊಂದಿರುವ ಮೇರುದಂಡವನ್ನು ಸುಸ್ಥಿತಿಯಲ್ಲಿಡಲೂ ಅದರೊಳಗಿರುವ ಇಡಾ-ಪಿಂಗಳ-ಸುಷುಮ್ನಾ ನಾಡಿಗಳನ್ನು ಏಳು ಚಕ್ರಗಳಾದ ಮೂಲಾಧಾರ, ಸ್ವಾಧಿಷ್ಠಾನ ಮಣಿಪುರ, ಅನಾಹತ, ವಿರುದ್ಧ, ಆಜ್ಞಾ ಮತ್ತು ಸಹಸ್ರಾರವನ್ನು ಪ್ರಚೋದಿಸಲು ‘ಓಂಕಾರ’ ಉಚ್ಛಾರಣೆ, ಗಾಯತ್ರಿ ಮಂತ್ರ ಅನುಷ್ಠಾನ, ಸೂರ್ಯನಮಸ್ಕಾರ ಸರಳ ಸಾಧನಾ ಮಾರ್ಗವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts