More

    ನಮ್ಮ ದೋಷದ ಚೀಲವನ್ನು ಆಗಾಗ ಬಿಚ್ಚಿ ನೋಡಿಕೊಳ್ಳೋಣ…ತಿದ್ದಿಕೊಳ್ಳೋಣ

     | ಡ್ಯಾನಿ ಪಿರೇರಾ

    ವ್ಯಕ್ತಿಯೊಬ್ಬ ಸೃಷ್ಟಿಕರ್ತ ಬ್ರಹ್ಮನಲ್ಲಿ, ‘ನಾನು ಉನ್ನತಿ ಸಾಧಿಸಿ ಸುಖ, ಶಾಂತಿ, ನೆಮ್ಮದಿ ಪಡೆದು ಎಲ್ಲರೂ ನನ್ನನ್ನು ಪ್ರಶಂಸಿಸುವಂತೆ ವರವನ್ನು ಕರುಣಿಸು ತಂದೆ’ ಎಂದು ಪ್ರಾರ್ಥಿಸಿದ. ಆದರೆ, ಬ್ರಹ್ಮ ಅವನಿಗೆ ‘ತಥಾಸ್ತು’ ಎನ್ನದೆ ಆ ವ್ಯಕ್ತಿಯ ಮುಂದೆ ಎರಡು ಚೀಲಗಳನ್ನು ಇರಿಸಿ- ‘ಈ ಎರಡು ಚೀಲಗಳನ್ನು ತೆಗೆದುಕೋ. ಈ ಪೈಕಿ ಒಂದು ಚೀಲದಲ್ಲಿ ನಿನ್ನ ನೆರೆಮನೆಯವರ ದೋಷಗಳು ತುಂಬಿವೆ. ಇದನ್ನು ಬೆನ್ನಿನ ಮೇಲೆ ಹೊತ್ತಿಕೋ. ಯಾವುದೇ ಕಾರಣಕ್ಕೂ ಇದನ್ನು ಬಿಚ್ಚಬೇಡ. ನೀನೂ ನೋಡಬೇಡ, ಬೇರೆಯವರಿಗೂ ತೋರಿಸಬೇಡ. ಈ ಎರಡನೇ ಚೀಲದಲ್ಲಿ ನಿನ್ನ ದೋಷಗಳೇ ತುಂಬಿವೆ. ಅದನ್ನು ನಿನ್ನೆದುರೇ ಕಣ್ಣಿಗೆ ಕಾಣುವಂತೆ ನೇತು ಹಾಕಿಕೋ. ಆಗಾಗ ಬಿಚ್ಚಿ ನೋಡುತ್ತಿರು’ ಎಂದು ಸೂಚಿಸಿದ.

    ಆದರೆ ಆ ವ್ಯಕ್ತಿ ಸೃಷ್ಟಿಕರ್ತನ ಸೂಚನೆಯನ್ನೇ ಮರೆತುಬಿಟ್ಟ. ಆತನಿಂದ ಒಂದು ಪ್ರಮಾದವೇ ನಡೆಯಿತು. ಎರಡೂ ಚೀಲಗಳನ್ನು ಎತ್ತಿಕೊಂಡು, ತನ್ನ ದೋಷಗಳಿರುವ ಚೀಲವನ್ನು ಬಿಗಿಯಾಗಿ ಕಟ್ಟಿ ಬೆನ್ನಿಗೇರಿಸಿಕೊಂಡ. ನೆರೆಯವರ ದೋಷಗಳಿರುವ ಚೀಲವನ್ನು ಎದುರಿಗೆ ನೇತು ಹಾಕಿಕೊಂಡು ಬಿಚ್ಚಿ ಬಿಚ್ಚಿ ನೋಡತೊಡಗಿದ. ಮಾತ್ರವಲ್ಲ, ಬಂದವರಿಗೂ ಅದನ್ನು ಹೇಳುತ್ತ, ತೋರಿಸುತ್ತ ಅವರನ್ನು ಅಪಹಾಸ್ಯ ಮಾಡತೊಡಗಿದ! ಇದರಿಂದ ಬ್ರಹ್ಮದೇವನಲ್ಲಿ ಆತ ನಿವೇದಿಸಿಕೊಂಡ ಫಲಕ್ಕೆ ವಿರುದ್ಧವಾದ ಫಲ ದೊರೆಯಿತು. ಆತನಿಗೆ ಸುಖ, ಶಾಂತಿ, ನೆಮ್ಮದಿ ದೂರವಾಯಿತು. ಅಷ್ಟೇ ಅಲ್ಲ, ಜನರೆಲ್ಲ ಅವನನ್ನು ನಿಂದಿಸತೊಡಗಿದರು. ಅಸಂತುಷ್ಟ ಬದುಕು ಆತನದಾಯಿತು.  ಇದನ್ನೂ ಓದಿ: ಮನೋಲ್ಲಾಸ: ಜಡಗೊಳ್ಳುವ ಅನುಭವ, ವಿವೇಚನೆ..

    ನಿಜ, ನಮ್ಮ ಜೀವನದ ರೀತಿಗಳೂ ಹೀಗೆಯೇ ಅಲ್ಲವೇ? ನಮ್ಮೊಳಗೆ ಎಷ್ಟು ‘ವೃತ್ತಿಪರತೆ’ ಇದೆ ಎಂದರೆ ನಮ್ಮ ದೋಷಗಳನ್ನು ಸಮರ್ಥಿಸಿಕೊಳ್ಳುವ ಮತ್ತು ನಮ್ಮ ತಪ್ಪುಗಳಿಗೆ ನಾವೇ ಕ್ಷಮೆ ಕೊಡುವ ವಕೀಲರು ನಾವು. ಆದರೆ ಅದೇ ಕಾಲಕ್ಕೆ ಇತರರ ದೋಷಗಳನ್ನು ಹೇಳುವ ಮತ್ತು ಅದಕ್ಕೆ ತಕ್ಕ ಶಿಕ್ಷೆ ನೀಡುವ ನ್ಯಾಯಾಧೀಶರು ನಾವು! ಇದು ಮನುಷ್ಯ ಸ್ವಭಾವದೊಳಗಿರುವ ಉನ್ನತ ವ್ಯಕ್ತಿತ್ವವನ್ನು ಅವನತಿಯೆಡೆಗೆ ಸಾಗಿಸಲು ನಾವೇ ನಮ್ಮ ಕೈಯಾರೆ ಮಾಡುವ ಪ್ರಮಾದ. ಇದನ್ನು ಕಬೀರರು ಹೇಳುತ್ತಾರೆ-

    ‘ಇತರರ ದೋಷವ ನೋಡುತ ಜನರು ಹಾಸ್ಯವ ಗೈಯುವರಲ್ಲಾ…ತಮ್ಮೊಳಗಿಹುದೈ ಸಾಸಿರ ದೋಷ ಕಾಣುವುದೇ ಇಲ್ಲ-ಕಬೀರ ಕಾಣುವುದೇ ಇಲ್ಲ’.

    ನಮ್ಮೊಳಗಿರುವ ನೆಮ್ಮದಿ, ಶಾಂತಿಯನ್ನು ಮರೆತು ಸುಖ, ಸಮಾಧಾನವನ್ನು ಹೊರಗೆಲ್ಲೋ ಹುಡುಕುವ ವ್ಯರ್ಥಸಾಹಸ ನಮ್ಮದು. ಸಿಗದೇ ಹೋದಾಗ ಭಗವಂತನಲ್ಲಿ ವರವಾಗಿ ಕೊಡುವಂತೆ ಬೇಡುವ ಪ್ರವೃತ್ತಿಯೂ ನಮ್ಮದೇ. ನಾವು ನಮ್ಮೊಳಗಿನ ದೋಷಗಳನ್ನು ತಿದ್ದಿಕೊಂಡರೆ ಉನ್ನತಿ ಹೊಂದುತ್ತೇವೆ. ಆಗ ನಮಗೆ ಸುಖ, ಶಾಂತಿ, ನೆಮ್ಮದಿಯೊಂದಿಗೆ ಇತರರ ಪ್ರಶಂಸೆಯೂ ಲಭಿಸುತ್ತದೆ. ಹಾಗಾಗಿ ಸನ್ಮಾರ್ಗದಲ್ಲಿ ನಡೆಯುವ ಮೊದಲ ಪ್ರಯತ್ನದಲ್ಲಿ ನಮ್ಮೊಳಗಿನ ದೋಷಗಳನ್ನು ಗುರುತಿಸೋಣ. ಅವುಗಳಿಂದ ದೂರಸಾಗುವ ಪ್ರಯತ್ನದಲ್ಲಿ ಯಶಸ್ವಿಯಾಗೋಣ. ಆಗ ಬದುಕು ಸುಗಮವಾಗುತ್ತದೆ, ಹೊಸ ಜಗತ್ತು ತೆರೆದುಕೊಳ್ಳುತ್ತದೆ.

    (ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

    ಮನೋಲ್ಲಾಸ: ಜಡಗೊಳ್ಳುವ ಅನುಭವ, ವಿವೇಚನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts