More

  ಮನೋಲ್ಲಾಸ | ಮಾಯೆಯ ಶಕ್ತಿ

  ಮನೋಲ್ಲಾಸ | ಮಾಯೆಯ ಶಕ್ತಿ| ಚಿದಂಬರ ಮುನವಳ್ಳಿ

  ಮಹಾಭಾರತ, ಭಾಗವತ ಮಹಾಪುರಾಣಗಳ ಗ್ರಂಥಕರ್ತರಾದ ವೇದವ್ಯಾಸರು ತಮ್ಮ ಒಂದು ಶ್ಲೋಕದಲ್ಲಿ, ‘ಮೋಹಾಕರ್ಷಣೆಗಳು ಸಾಮಾನ್ಯರಿಂದ ಹಿಡಿದು ಎಂಥೆಂಥ ಶ್ರೇಷ್ಠರೆನಿಸಿಕೊಂಡವರನ್ನೂ ಬಿಟ್ಟಿಲ್ಲ’ ಎಂದು ಬರೆದಿದ್ದರು. ಅದನ್ನು ಅವರ ಪರಮಶಿಷ್ಯ ಮತ್ತು ಮೀಮಾಂಸಾ ಸೂತ್ರದ ಕರ್ತೃ ಜೈಮಿನಿಯು ನೋಡಿ, ‘ಗುರುಗಳೇ ಈ ನಿಮ್ಮ ಶ್ಲೋಕದ ಬಗ್ಗೆ ನನಗೇಕೋ ಸಂದೇಹವಿದೆ. ಮನೋವಿಕಾರಗಳು ಸಾಮಾನ್ಯ ಮನುಷ್ಯನಿಗೆ ಇರುವುದು ಸಹಜ. ಆದರೆ ಯೋಗಿ, ಸಾಧಕರಿಗೆ ನಿಮ್ಮ ಈ ವಾಕ್ಯ ಅನ್ವಯವಾಗುವುದೇ?’ ಎಂದ. ಅದಕ್ಕೆ ವ್ಯಾಸರು, ‘ಏನೋ ನನಗೆ ದೇವರು ಕೊಟ್ಟಷ್ಟು ಬುದ್ಧಿಯಿಂದ ಬರೆದಿದ್ದೇನೆ’ ಎಂದಷ್ಟೇ ಹೇಳಿ ‘ಈಗ ಕಾಶಿಗೆ ಹೊರಟಿದ್ದೇನೆ. ಬಂದ ಮೇಲೆ ವಿವರವಾಗಿ ಮಾತನಾಡೋಣ’ ಎಂದು ಹೊರಟುಬಿಟ್ಟರು.

  ಒಂದು ದಿನ ಸಂಜೆ ಹೊತ್ತು ಜೈಮಿನಿ ತನ್ನ ಆಶ್ರಮದಲ್ಲಿ ಬರೆಯುತ್ತ ಕುಳಿತಿರುವಾಗ ಹೊರಗಡೆ ತುಂತುರು ಮಳೆ ಬೀಳುತ್ತಿತ್ತು. ಅಷ್ಟರಲ್ಲಿ ಒಬ್ಬ ಸುಂದರ ಯುವತಿ ಅರ್ಧ ನೆನೆದ ಅವಸ್ಥೆಯಲ್ಲಿ ಆಶ್ರಮದ ಬಾಗಿಲ ಬಳಿ ಬಂದು, ‘ನಾನು ದಾರಿ ತಪ್ಪಿಸಿಕೊಂಡಿದ್ದೇನೆ’ ಎನ್ನಲು ಜೈಮಿನಿ ಅವಳನ್ನು ಒಳಗೆ ಬರಲು ಹೇಳಿದ. ಜೈಮಿನಿ ಅಲ್ಲಿಯೇ ಕಟ್ಟಿದ ಹಗ್ಗವೊಂದರ ಮೇಲೆ ವಿಸ್ತಾರವಾದ ಬಟ್ಟೆ ಹಾಕಿ ಮರೆ ಮಾಡಿ ‘ಆಚೆ ಕಡೆಗೆ ಹೋಗಿ ಅಲ್ಲಿರುವ ಒಣ ಬಟ್ಟೆಗಳಿಂದ ತಲೆ ಒರಿಸಿಕೊಂಡು ಸುಧಾರಿಸಿ ಕೊಳ್ಳಬಹುದು’ ಎಂದು ಹೇಳಿ ಮತ್ತೆ ಬರೆಯಲು ಕುಳಿತ. ಆದರೆ ಅವನ ಮನಸ್ಸು ಬರವಣಿಗೆಯಲ್ಲಿ ಸ್ಥಿರವಾಗದೆ ಅವಳ ಕಡೆಗೇ ಹರಿಯತೊಡಗಿತು. ಸ್ವಲ್ಪ ಸಮಯದ ನಂತರ ಕೈಯಲ್ಲಿ ದೀಪ ಹಿಡಿದುಕೊಂಡು ‘ಏನಾದರೂ ಬೇಕಿತ್ತೆ?’ ಎಂದು ಕೇಳುತ್ತ ಅವಳ ಹತ್ತಿರ ಹೋಗಿ ಹಿಂದೆಂದೂ ಕಾಣದ ಅವಳ ಸೌಂದರ್ಯಕ್ಕೆ ಮಾರು ಹೋದ. ಆಕೆ, ‘ಛೆ ಛೆ ಇದೇನು ಜ್ಞಾನಿಗಳೇ ಆಚೆ ಹೋಗಿ ನಿಮ್ಮ ಬರವಣಿಗೆ ಮುಂದುವರಿಸಿ’ ಎಂದಳು.

  See also  ಅಧಿಕಾರದ ಹಗಲುಗನಸು ಕಾಣುತ್ತಿದೆ ಕಾಂಗ್ರೆಸ್: ಸಚಿವ ಹಾಲಪ್ಪ ಆಚಾರ್ ವ್ಯಂಗ್ಯ

  ಅದಕ್ಕೆ ಜೈಮಿನಿ, ‘ಹೇ ಸುಂದರಿ! ನೀನು ನನ್ನನ್ನು ಮದುವೆಯಾಗುವೆಯಾ?’ ಎಂದು ಅಂಗಲಾಚಿದ. ಕೊನೆಗೆ ಅವಳು ಒಪ್ಪಿ ಇಲ್ಲಿಯೇ ಇರುವ ಅಗ್ನಿಸಾಕ್ಷಿಯಾಗಿ ವಿವಾಹವಾಗೋಣ. ಆದರೆ ನನ್ನದೊಂದು ಷರತ್ತು. ‘ನನ್ನನ್ನು ಮದುವೆಯಾಗುವವನು ಎರಡೂ ಕೈ-ಕಾಲುಗಳನ್ನು ನೆಲಕ್ಕೆ ಊರಿ ಅಂಬೆಗಾಲಿನಲ್ಲಿ ನಡೆಯುತ್ತ ಸಪ್ತಪದಿ ಮಾಡಬೇಕು’. ಜೈಮಿನಿ, ‘ಇಷ್ಟೇನಾ!’ ಎಂದು ಕೂಡಲೇ ತಯಾರಾಗಿ ಪಶುವಿನ ಹಾಗೆ ಅಗ್ನಿಕುಂಡದ ಸುತ್ತ ತಿರುಗುತ್ತಿರಬೇಕಾದರೆ ಹೊರಗೆ ವೇದವ್ಯಾಸರು ಪ್ರಗಟರಾಗಿ ‘ಹೇಗೆ ನಡೆದಿದೆ ವಿವಾಹ ಸಮಾರಂಭ?’ ಎಂದರು. ಜೈಮಿನಿ ನಾಚಿಕೆಯಿಂದ ತಲೆ ತಗ್ಗಿಸಿ ಅವರ ಪಾದ ಹಿಡಿದ. ಪರೀಕ್ಷೆಗಾಗಿ ವ್ಯಾಸರಿಂದ ಸೃಷ್ಟಿಸಲ್ಪಟ್ಟ ಆ ಮಾಯಾಯುವತಿ ಆಗಲೇ ಅದೃಶ್ಯಳಾಗಿದ್ದಳು. ಮಾಯೆ ಎಂಬುದು ಪ್ರಭಾವಿಯಾಗಿದ್ದು, ಒಂದು ಕ್ಷಣದಲ್ಲಿ ಎಂಥದೇ ಮನುಷ್ಯನನ್ನು ಅಧೋಗತಿಗೆ ತಳ್ಳಬಹುದು. ಮನಸ್ಸಿನ ಶಕ್ತಿ ಎಷ್ಟಿದೆ ಎಂದು ತಿಳಿಯುವುದೇ ಇಂಥ ಸನ್ನಿವೇಶ ಗಳಿಂದ. ಈ ತರಹದ ಪರಿಸ್ಥಿತಿ ಸೃಷ್ಟಿಯಾಗದ ಹಾಗೆ ಎಚ್ಚರ ವಹಿಸುವುದು, ಒಂದು ವೇಳೆ ಅಂಥ ಪ್ರಸಂಗಗಳು ಅನಿವಾರ್ಯವಾಗಿ ಎದುರಾದಾಗ ಮನಃಶಕ್ತಿಯಿಂದ ಎದುರಿಸುವುದು ಇವೆರಡೇ ಇದರಿಂದ ಪಾರಾಗುವ ಉಪಾಯಗಳು ಅಲ್ಲವೇ?

  (ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts