More

    ದೃಢ ನಂಬಿಕೆಯೇ ಶ್ರೀರಕ್ಷೆ; ಮನೋಲ್ಲಾಸ

    ದೃಢ ನಂಬಿಕೆಯೇ ಶ್ರೀರಕ್ಷೆ; ಮನೋಲ್ಲಾಸ| ಡ್ಯಾನಿ ಪಿರೇರಾ ಹಳ್ಳಿಮೈಸೂರು
    ಆ ಊರಲ್ಲಿ ಬರಗಾಲ ಆವರಿಸಿ ವರ್ಷಗಳೇ ಕಳೆದಿದ್ದವು. ಮಳೆ ಇಲ್ಲ, ಮಳೆ ಬರದೆ ಬೆಳೆಯಿಲ್ಲ! ಅವರು ಪೂಜಿಸದ ದೇವರಿಲ್ಲ, ಮಾಡದ ಪ್ರಾರ್ಥನೆಗಳಿಲ್ಲ. ಆದರೂ ಪ್ರಯೋಜನವಿಲ್ಲ. ಈ ನಡುವೆ ಅದ್ಯಾರೋ ಜ್ಯೋತಿಷಿ ಹೇಳಿದನಂತೆ- ಪ್ರಾತಃಕಾಲ ಮನೆದೇವರಿಗೆ ವಂದಿಸಿ ಕುಟುಂಬಸಮೇತ ದೂರದ ಬೆಟ್ಟದ ಮೇಲಿನ ಗುಡಿಗೆ ತೆರಳಿ ಅಲ್ಲಿನ ಬೆಟ್ಟದ ತಾಯಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ, ಅದರಲ್ಲೂ ಮಕ್ಕಳ ಭಕ್ತಿಗೆ ಮೆಚ್ಚುವ ಆ ತಾಯಿ ಸಂಪ್ರೀತಳಾಗಿ ಬೇಡಿದ ವರವನ್ನು ಮನೆಗೆ ತಲುಪುವ ಮೊದಲೇ ದಯಪಾಲಿಸುತ್ತಾಳೆ ಎಂದು. ಊರಿನವರು ಮನೆಯ ಮಕ್ಕಳನ್ನೇ ಪೂಜೆಗೆ ಅಣಿಗೊಳಿಸಿ ಬೆಟ್ಟದ ತಾಯಿಯ ದರ್ಶನಕ್ಕೆ ಕರೆದುಕೊಂಡು ಹೋಗುವ ಸಂಕಲ್ಪ ಮಾಡಿದರು. ಅದರಂತೆ ಪೂಜೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಂಡ ಹಿರಿಯರು ಬೆಟ್ಟದ ಕಡೆಗೆ ಮಕ್ಕಳೊಂದಿಗೆ ಹೊರಟರು. ಬೆಟ್ಟದ ಆ ದುರ್ಗಮ ಹಾದಿ, ಬಿರುಬಿಸಿಲಿನ ಝುಳ, ಬರಿಗಾಲಿನ ನಡಿಗೆ, ಈ ನಡುವೆ ಹಸಿವಿಂದ ಚುರುಗುಟ್ಟುವ ಹೊಟ್ಟೆ- ನಿಜಕ್ಕೂ ಮಕ್ಕಳಿಗೆ ಯಾತ್ರೆ ತ್ರಾಸದಾಯಕವಾಗಿತ್ತು. ಆದರೆ, ಪೂಜೆ ಸಂಪನ್ನಗೊಂಡಂತೆ ಮನೆಗೆ ತಲುಪುವ ಮೊದಲೇ ಮಳೆ ಧರೆ ತಣಿಸುತ್ತದೆಂಬ ವಿಶ್ವಾಸ ಉಳಿದೆಲ್ಲವನ್ನೂ ಮರೆಸಿತ್ತು!

    ಅಂತೆಯೇ ಗುಡಿಗೆ ತಲುಪಿ, ಪೂಜೆ ಸಾಂಗವಾಗಿ ನಡೆಸಿದ್ದಾಯಿತು. ದೇವಿ ಸಂತುಷ್ಟಳಾದಳೆಂಬ ಸಂತೃಪ್ತಿ ಎಲ್ಲರ ಮೊಗದೊಳಗೆ. ಕಾರಣ ಇದ್ದಕ್ಕಿದ್ದಂತೆ ಬಿಸಿಲಿನ ಆವೇಗ ಕಡಿಮೆಯಾಗಿ ಮೋಡ ನಭವನ್ನಾವರಿಸಲು ಶುರುವಾಯ್ತು! ಆದರೆ ಊರಿಗೆ ತಲುಪುವ ಅರ್ಧದಾರಿಯಲ್ಲೇ ವರ್ಷಧಾರೆಯ ಭೋರ್ಗರೆತ ಶುರುವಾಯಿತು. ಮಳೆಯಿಂದ ರಕ್ಷಣೆ ಪಡೆಯಲು ಅಲ್ಲಿ ಮನೆಗಳಾಗಲೀ ಮರಗಳಾಗಲಿ ಇಲ್ಲದ ಬಯಲು ಪ್ರದೇಶವದು! ಅಲ್ಲಿದ್ದ ಜನರೊಳಗೊಬ್ಬ ಹುಡುಗ ಮಾತ್ರ ತನ್ನ ಕೈಯಲ್ಲಿದ್ದ ಛತ್ರಿಯನ್ನು ಬಿಡಿಸಿ ನಿಂತ! ಅಲ್ಲಿದ್ದವರಿಗೆ ಆಶ್ವರ್ಯ! ಅವರ್ಯಾರೂ ಛತ್ರಿ ತಂದಿರಲಿಲ್ಲ! ಹುಡುಗ ಜೊತೆಯಲ್ಲಿದ್ದ ಅಮ್ಮನಿಗೆ ಕರೆದು- ‘ಬಾರಮ್ಮ, ಅದೇಕೆ ನೆನೆಯುತ್ತೀಯಾ? ಛತ್ರಿಯ ಒಳಗೆ ತಲೆ ತೂರಿಸು’ ಎಂದ.

    ಆತನಿಗಿದ್ದ ಆ ಅದಮ್ಯ ವಿಶ್ವಾಸ! ಗುಡಿಗೆ ತೆರಳಿ, ಪೂಜೆ ಸಲ್ಲಿಸುತ್ತೇವೆ, ದೇವಿ ನಮ್ಮ ಭಕ್ತಿಗೆ ಓಗೊಟ್ಟು ಮಳೆ ಸುರಿಸುತ್ತಾಳೆ, ಹಿಂದಿರುಗುವಾಗ ನೆನೆದು ಬರಬೇಕಾಗುತ್ತದೆ. ಛತ್ರಿ ಜೊತೆಯಲ್ಲಿದ್ದರೆ ಕ್ಷೇಮ ಎಂಬ ಅಚಲ ವಿಶ್ವಾಸದೊಂದಿಗೆ ಆತ ಹೊರಟಿದ್ದ.

    ಹೌದು, ನಮ್ಮ ಸ್ಥಿತಿಯೂ ಆಚರಣೆಗಳೂ ಆ ಉಳಿದವರಂತೆ! ನಮಗೆ ನಮ್ಮ ಮೇಲೆಯೂ ನಂಬಿಕೆ ಇಲ್ಲ ಕೊನೆಗೆ ನಾವು ನಂಬುವ ಮತ್ತು ಪೂಜಿಸುವ ದೇವರ ಮೇಲೂ ಪೂರ್ಣ ವಿಶ್ವಾಸವಿಲ್ಲ. ಪೂಜೆಯೇನೋ ಮಾಡುತ್ತೇವೆ ಆದರೆ ಪೂರ್ಣ ಮನಸ್ಸಿನಿಂದಲ್ಲ. ಭಗವಂತನ ಮೇಲೆ ನಂಬಿಕೆ ಇಡಬೇಕು ಪೂರ್ಣ ಮನಸ್ಸಿನಿಂದ. ಆ ಕಾರಣಕ್ಕೆ ಪುರಂದರದಾಸರು ಹೇಳುತ್ತಾರೆ- ‘ನಂಬಿ ಕೆಟ್ಟವರಿಲ್ಲವೋ, ರಂಗಯ್ಯನ, ನಂಬದೇ ಕೆಟ್ಟರೆ ಕೆಡಲಿ ಅಂಬುಜನಾಭನ ಪಾದವ ನೆನೆಯೆ ಭ- ವಾಂಬುಧಿ ದುಃಖವ ಪರಿಹರಿಸುವ ಕೃಷ’ ಎಂದು. ಹಾಗಾಗಿ ಆ ಜಗತ್ರಕ್ಷಕನನ್ನು ನಂಬೋಣ, ಆತನಿಗೆ ಶರಣಾಗೋಣ. ಆ ಹುಡುಗನಂತೆ ದೃಢಸಂಕಲ್ಪರಾಗೋಣ.

    (ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts