More

    ಮನೋಲ್ಲಾಸ | ವಿಶ್ರಾಂತಿಗೃಹದಿಂದ ಹೊರಡುವಾಗ…

    ಮನೋಲ್ಲಾಸ | ವಿಶ್ರಾಂತಿಗೃಹದಿಂದ ಹೊರಡುವಾಗ...| ಡಾ.ಗಣಪತಿ ಹೆಗಡೆ

    ಆಶ್ರಮದಲ್ಲಿ ಸ್ವಾಮೀಜಿಯೊಬ್ಬರು ನಿತ್ಯವೂ ಸಂಜೆ ಪ್ರವಚನ ಮಾಡುತ್ತಿದ್ದರು. ನೂರಾರು ಜನ ಸದ್ಭಕ್ತರು ಭಾಗವಹಿಸಿ ಅವರ ಮಾರ್ಗದರ್ಶನವನ್ನು ಪಡೆದು ಕೃತಾರ್ಥರಾಗುತ್ತಿದ್ದರು. ಎಂದಿನಂತೆಯೇ ಪ್ರವಚನವನ್ನು ಮುಗಿಸಿದ ಸ್ವಾಮೀಜಿ ತಮ್ಮ ಕುಟೀರದೆಡೆಗೆ ತೆರಳಲು ಅನುವಾದರು. ಜನರ ಮಧ್ಯದಿಂದ ಎದ್ದು ಬಂದವರೊಬ್ಬರು ಸ್ವಾಮೀಜಿಯವರಲ್ಲಿ ಮಾತಾಡಲು ಅವಕಾಶ ಕೋರಿದರು.

    ‘ಹೇಳಿ, ಏನು ವಿಷಯ ಮಾತಾಡಬೇಕಿತ್ತು?’ ಪ್ರಶ್ನಿಸಿದರು ಸ್ವಾಮೀಜಿ.

    ‘ಗುರುಗಳೇ, ಸಮಾಧಾನವಿಲ್ಲದ ಬದುಕು ನನ್ನದಾಗಿದೆ. ಹೆಂಡತಿ ನನ್ನ ಮಾತು ಕೇಳುತ್ತಿಲ್ಲ. ಮಕ್ಕಳಂತೂ ಸದಾ ನನ್ನ ವಿರುದ್ಧವೇ ಯುದ್ಧಕ್ಕೆ ಸಿದ್ಧರಾಗಿರುತ್ತಾರೆ. ಒಟ್ಟಿನಲ್ಲಿ ಜೀವನದಲ್ಲಿ ನೆಮ್ಮದಿಯೇ ಇಲ್ಲದೇ ಕಂಗಾಲಾಗಿದ್ದೇನೆ. ದಯಮಾಡಿ ಮಾರ್ಗದರ್ಶನ ಮಾಡಿ’ ಎಂದು ಗೋಗರೆದರು.

    ‘ನಿಮ್ಮ ಮನೆಯಲ್ಲಿ ನೀವು ಅತಿಥಿಯಾಗಿದ್ದು ಬದುಕುವುದನ್ನು ಕಲಿತರೆ ಬಹುಶಃ ನಿಮ್ಮ ಸಮಸ್ಯೆ ಪರಿಹಾರವಾದೀತು’ ಎಂದರು ಸ್ವಾಮೀಜಿ ಮುಗುಳ್ನಗುತ್ತ.

    ‘ಅಂದರೆ? ಅರ್ಥವಾಗಲಿಲ್ಲ, ಸ್ವಾಮೀಜಿ’.

    ‘ನೀವು ಇತರರ ಮನೆಗಳಿಗೆ ಅತಿಥಿಯಾಗಿ ಹೋದಾಗ ಹೇಗಿರುತ್ತೀರಿ?’

    ‘ಬಹಳ ಸಭ್ಯ, ಸಂಕೋಚಪ್ರವೃತ್ತಿಯಿಂದ ವ್ಯವಹರಿಸುತ್ತೇನೆ. ಎಷ್ಟೆಂದರೂ ಅದು ಅವರ ಮನೆಯಲ್ಲವೇ? ಆದ್ದರಿಂದ ಅವರಿಚ್ಛೆಯಂತೆಯೇ ಮಾತಾಡುತ್ತೇನೆ, ಊಟೋಪ ಚಾರಗಳಂತೂ ಅವರು ಪ್ರೀತಿಯಿಂದ ಏನನ್ನು ಮಾಡಿ ಬಡಿಸುವರೋ ಅದನ್ನೇ ಅಮೃತ ಅಂತ ತಿಳಿದು ಸ್ವೀಕರಿಸುತ್ತೇನೆ. ಅಷ್ಟಕ್ಕೂ ನಾವು ಒಂದೆರಡು ದಿನಗಳಿಗಾಗಿ ಅವರಲ್ಲಿಗೆ ಹೋದವರು. ಅಲ್ಲಿ ಸ್ವಂತ ಮನೆಯಲ್ಲಿದ್ದಂತೆಯೇ ಇರಲು ಸಾಧ್ಯವಾಗುವುದಿಲ್ಲ’.

    ‘ಈ ಸತ್ಯವನ್ನೇ ನೀವು ಅರ್ಥಮಾಡಿಕೊಳ್ಳಬೇಕಾದದ್ದು. ನಿಮ್ಮ ವರ್ತನೆ ಬೇರೆ ಬೇರೆ ಕಡೆಗಳಲ್ಲಿ ಭಿನ್ನವಾಗಿದೆ. ಮನೆಯಲ್ಲಿ ಮಾತ್ರ ಎಲ್ಲವೂ ನನ್ನದು, ನಾನು ಸಂಪಾದಿಸಿದ್ದು, ನಾನು ತಂದಿದ್ದು, ನಾನಿರುವುದರಿಂದಲೇ ನೀವೆಲ್ಲ ಇರೋದು ಎಂಬ ಭಾವನೆಯಿಂದ ವ್ಯವಹರಿಸುತ್ತೀರಿ. ಅದೇ ಬೇರೆಯವರ ಮನೆಗೆ ಹೋದಾಗ ನಿಮ್ಮ ವ್ಯವಹಾರವೇ ಬೇರೆಯಾಗಿರುತ್ತದೆ ಅಲ್ಲವೇ? ಈ ದ್ವಂದ್ವಭಾವವೇ ನಿಮ್ಮನ್ನು ಘಾಸಿಗೊಳಿಸಿರುವುದು’.

    ‘ಈಗ ನಾನು ಏನು ಮಾಡಬೇಕು?’

    ‘ಒಂದಷ್ಟು ದಿನ ನಿಮ್ಮ ಮನೆಯಲ್ಲಿಯೂ ನೀವು ಅತಿಥಿಯಾಗಿಯೇ ಬದುಕುವು ದನ್ನು ರೂಢಿಸಿಕೊಳ್ಳಿ, ಸಮಸ್ಯೆಗಳು ತಾವಾಗಿಯೇ ಪರಿಹಾರವಾಗುತ್ತವೆ’ ಎಂದರು ಸ್ವಾಮೀಜಿ. ‘ಅಷ್ಟೇ ಅಲ್ಲ ನಾವು ಇನ್ನೂ ಒಂದು ಸತ್ಯವನ್ನು ಅರ್ಥೈಸಿಕೊಳ್ಳಬೇಕು, ನಾವು ಈ ಪ್ರಪಂಚಕ್ಕೆ ಭೇಟಿಕೊಟ್ಟ ಯಾತ್ರಿಕರು. ಇದೊಂದು ವಿಶ್ರಾಂತಿಗೃಹ. ಹೊರ ಊರಿಗೆ ಹೋದಾಗ ನಾವು ಯಾವುದಾದರೂ ಹೋಟೆಲ್​ನಲ್ಲಿ ತಂಗುತ್ತೇವಲ್ಲ ಹಾಗೆಯೇ ನಾವು ಈ ವಿಶ್ರಾಂತಿಗೃಹದಲ್ಲಿ ತಂಗಬೇಕು. ಅಲ್ಲಿರುವ ಯಾವ ವಸ್ತುವೂ ನಮ್ಮದಲ್ಲ. ನಾವು ಅಲ್ಲಿರುವಷ್ಟು ಕಾಲ ಅವುಗಳನ್ನು ಬಳಸಿಕೊಳ್ಳಬಹುದು. ಆ ವಿಶ್ರಾಂತಿಗೃಹದಿಂದ ಹೊರಡುವಾಗ ನಾವು ಹೇಗೆ ನಿರ್ವಿಕಾರಭಾವದಿಂದ ಅವುಗಳನ್ನೆಲ್ಲ ಅಲ್ಲೇ ಬಿಟ್ಟು ಬರುತ್ತೇವೋ ಹಾಗೆಯೇ ಈ ಪ್ರಪಂಚದ ಯಾವ ವಸ್ತುವೂ ನಮ್ಮದಲ್ಲ ಎಂಬ ಭಾವದಿಂದಲೇ ಬದುಕಬೇಕು, ಆಗಲೇ ನಮ್ಮ ನಿರ್ಗಮನವು ಸುಲಭವಾಗುತ್ತದೆ’ ಎಂದು ಸ್ವಾಮೀಜಿ ಹೇಳಿದಾಗ ಅವರ ಮುಖದಲ್ಲಿ ಸಮಾಧಾನದ ಭಾವ ಎದ್ದು ಕಾಣುತ್ತಿತ್ತು.

    (ಲೇಖಕರು ಸಂಸ್ಕೃತ ಉಪನ್ಯಾಸಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts