More

    ಕಾಂಗ್ರೆಸ್ ತೊರೆಯಲು ಮನೋಹರ ತಹಶೀಲ್ದಾರ ನಿರ್ಧಾರ?

    ಗಿರೀಶ ದೇಶಪಾಂಡೆ ಹಾನಗಲ್ಲ

    ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳ್ಳುತ್ತಿದ್ದಂತೆ ಟಿಕೆಟ್ ವಂಚಿತರು ಹಾಗೂ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಮಾಜಿ ಸಚಿವ ಮನೋಹರ ತಹಶೀಲ್ದಾರ ಕಾಂಗ್ರೆಸ್ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ.

    ಕಳೆದ ಐದು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿರುವ ಮನೋಹರ ತಹಶೀಲ್ದಾರ ಅವರಿಗೆ ಹಾಲಿ ಶಾಸಕರಾಗಿದ್ದರೂ 2018ರಲ್ಲಿ ಟಿಕೆಟ್ ತಪ್ಪಿಸಿ ಶ್ರೀನಿವಾಸ ಮಾನೆ ಅವರಿಗೆ ನೀಡಲಾಗಿತ್ತು. ಇದನ್ನು ಆಕ್ಷೇಪಿಸಿದ್ದ ತಹಶೀಲ್ದಾರ ಅವರಿಗೆ ಹೈಕಮಾಂಡ್ ಬೇರೆ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದರಿಂದ ಶ್ರೀನಿವಾಸ ಮಾನೆ ಗೆಲುವಿಗೆ ಶ್ರಮಿಸಿದ್ದರು. ನಂತರದಲ್ಲಿ ಮಾಜಿ ಸಚಿವ ಸಿ.ಎಂ. ಉದಾಸಿ ಅವರ ನಿಧನದಿಂದಾಗಿ ನಡೆದ ಉಪ ಚುನಾವಣೆಯಲ್ಲೂ ಮಾನೆ ಅವರನ್ನೇ ಕಾಂಗ್ರೆಸ್ ಕಣಕ್ಕಿಳಿಸಿತು. ಆ ಸಂದರ್ಭದಲ್ಲಿ ಕಡಿಮೆ ಅವಧಿ ಇರುವುದರಿಂದ ಮತ್ತು ಹಿಂದಿನ ಚುನಾವಣೆಯಲ್ಲಿ ಸೋಲನುಭವಿಸಿದ್ದರಿಂದ ಮಾನೆ ಅವರಿಗೆ ಮತ್ತೊಂದು ಅವಕಾಶ ನೀಡಿರುವುದಾಗಿ ಕಾಂಗ್ರೆಸ್ ಹೈಕಮಾಂಡ್ ಮನೋಹರ ತಹಶೀಲ್ದಾರ ಅವರನ್ನು ಸಮಾಧಾನಗೊಳಿಸಿತ್ತು.

    ಎರಡು ಚುನಾವಣೆಯಲ್ಲಿ ಹೈಕಮಾಂಡ್ ಮಾತಿಗೆ ಮನ್ನಣೆ ನೀಡಿದ್ದ ಮನೋಹರ ತಹಶೀಲ್ದಾರ, ಪ್ರಸಕ್ತ ಚುನಾವಣೆಗೂ ಟಿಕೆಟ್ ಕೈತಪ್ಪಿದ್ದರಿಂದ ಹೈಕಮಾಂಡ್ ನಿಲುವನ್ನು ಬಲವಾಗಿ ವಿರೋಧಿಸಿದ್ದಾರೆ. ಈ ಬಾರಿ ಯಾವುದೇ ಕಾರಣಕ್ಕೂ ಚುನಾವಣೆ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪಕ್ಷೇತರವಾಗಿ ಸ್ಪರ್ಧಿಸುವುದು ಶತಸಿದ್ಧ. ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿಯೇ ತೋರಿಸುವುದಾಗಿ ಹೈಕಮಾಂಡ್​ಗೆ ಸವಾಲು ಹಾಕಿದ್ದಾರೆ. ಮನೋಹರ ತಹಶೀಲ್ದಾರಗೆ ಟಿಕೆಟ್ ನೀಡದ್ದರಿಂದ ಅವರ ಬೆಂಬಲಿಗರು ಹಾನಗಲ್ಲ ಪಟ್ಟಣದ ಎಂಜಿ ವೃತ್ತದಲ್ಲಿ ಟೈರ್​ಗೆ ಬೆಂಕಿ ಹಚ್ಚಿ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

    ಮನೋಹರ ತಹಶೀಲ್ದಾರರಿಗೆ ಹೈಕಮಾಂಡ್ ನೀಡಿದ ಭರವಸೆ ಹುಸಿಯಾಗಿಸಿದೆ. ಅವರ ರಾಜಕೀಯ ಹಿರಿತನ ಕಡೆಗಣಿಸಿದೆ. ಇದಕ್ಕೆ ಪಕ್ಷ ಬೆಲೆ ತೆರಬೇಕಾಗುತ್ತದೆ. ಈ ಚುನಾವಣೆಯಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಸಂದೇಶಗಳು ಕಾಂಗ್ರೆಸ್ ಕಾರ್ಯಕರ್ತರ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹರಿದಾಡುತ್ತಿವೆ. ಮನೋಹರ ತಹಶೀಲ್ದಾರ ಇನ್ನು ಕಾಂಗ್ರೆಸ್​ನಲ್ಲಿ ಮುಂದುವರಿಯುವ ಅಗತ್ಯವಿಲ್ಲ. ಕೂಡಲೇ ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷೇತರವಾಗಿ ಸ್ಪರ್ಧಿಸಲಿ ಎಂದು ಕಾರ್ಯಕರ್ತರು, ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

    ಆರೋಪ-ಪ್ರತ್ಯಾರೋಪ ಆರಂಭ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೊರ ಬೀಳುತ್ತಿದ್ದಂತೆ ಟಿಕೆಟ್ ವಂಚಿತ ತಹಶೀಲ್ದಾರ ಹಾಗೂ ಟಿಕೆಟ್ ಪಡೆದ ಮಾನೆ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಇದೆಲ್ಲದರ ಮಧ್ಯೆ ಪಕ್ಷನಿಷ್ಠ ಕಾರ್ಯಕರ್ತರು ಮನೋಹರ ತಹಶೀಲ್ದಾರ ಪರವಾಗಿ ನಿಲ್ಲುವುದೋ, ಮಾನೆ ಪರವಾಗಿ ಕೆಲಸ ಮಾಡುವುದೋ ಎಂಬ ಗೊಂದಲದಲ್ಲಿ ಬಿದ್ದಿದ್ದಾರೆ.

    ಕಾಂಗ್ರೆಸ್ ಟಿಕೆಟ್ ಈ ಬಾರಿ ನಮಗೆ ಸಿಗುವ ಭರವಸೆಯಿತ್ತು. ನನಗೆ ಕೊಡುವ ಮನಸಿಲ್ಲದಿದ್ದರೆ ಸ್ಥಳೀಯ ಯಾರಿಗಾದರೂ ಟಿಕೆಟ್ ನೀಡುವಂತೆ ಆಗ್ರಹಿಸಿದ್ದೆವು. ಆದರೆ, ಇದೆಲ್ಲ ಗಾಳಿಗೆ ತೂರಿ ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ತಾಲೂಕಿನ ಸ್ವಾಭಿಮಾನಿ ಮತದಾರರಿಗೆ ನೋವುಂಟಾಗಿದೆ. ನಾನು ಚುನಾವಣೆಗೆ ಸ್ಪರ್ಧಿಸುವುದಂತೂ ನಿಶ್ಚಿತ. ಈ ಕುರಿತಂತೆ ಮಾ. 30ರಂದು ಕಾರ್ಯಕರ್ತರ ಸಭೆ ಕರೆಯಲಾಗಿದೆ. ಪಕ್ಷೇತರವಾಗಿ ಕಣಕ್ಕಿಳಿಯಬೇಕೋ, ಜೆಡಿಎಸ್​ನಿಂದ ಸ್ಪರ್ಧೆ ಎದುರಿಸಬೇಕೊ ಎಂಬುದನ್ನು ಕಾರ್ಯಕರ್ತರು ನಿರ್ಧರಿಸುತ್ತಾರೆ. ನಮ್ಮ ಶಕ್ತಿಯನ್ನು ಚುನಾವಣೆಯಲ್ಲಿ ಪ್ರದರ್ಶಿಸುತ್ತೇವೆ.

    | ಮನೋಹರ ತಹಶೀಲ್ದಾರ, ಮಾಜಿ ಸಚಿವ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts