More

    ಮಂಜುನಾಥ ಒಎಲ್​ಎಕ್ಸ್​ನಲ್ಲಿ ಜಾಹೀರಾತು ಹಾಕಿ ವಂಚಿಸ್ತಾ ಇದ್ದದ್ದು ಯಾಕೆ?  

    ಬೆಂಗಳೂರು: ಒಎಲ್​ಎಕ್ಸ್​ನಲ್ಲಿ ತಾನು ಮೋಸಹೋಗಿದ್ದ ಕೋಪಕ್ಕೆ ವಾಹನ ಮಾರಾಟ ಮಾಡುವುದಾಗಿ ಜಾಹೀರಾತು ಪ್ರಕಟಿಸಿ ಜನರಿಗೆ ವಂಚಿಸುತ್ತಿದ್ದ ಆರೋಪಿಯನ್ನು ತಿಲಕ್​ನಗರ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಸಿಕ್ಕಿಬಿದ್ದಿದ್ದು ಹೀಗೆ?

    ಚಿಕ್ಕಕಲ್ಲಸಂದ್ರದ ಹನುಮಗಿರಿ ನಿವಾಸಿ ಧನುಷ್ ಕಾರು ಖರೀದಿಗೆ ಮುಂದಾಗಿದ್ದ. ಒಎಲ್​ಎಕ್ಸ್​ನಲ್ಲಿ ನಂದೀಶ್ ರೆಡ್ಡಿ ಎಂಬ ಹೆಸರಿನಲ್ಲಿ ಪ್ರಕಟವಾಗಿದ್ದ ಕಾರು ಮಾರಾಟದ ಜಾಹೀರಾತು ಗಮನಿಸಿ ಸಂರ್ಪಸಿದ್ದ. ಆ.19ರಂದು ಆರ್​ಬಿಐ ಕಾಲನಿಗೆ ಕರೆಸಿಕೊಂಡು ಟೆಸ್ಟ್ ಡ್ರೖೆವ್ ಮಾಡಿಸಿದ್ದ. ಬಳಿಕ 4.80 ಲಕ್ಷ ರೂ. ಗೆ ವ್ಯವಹಾರ ಕುದುರಿಸಿ, ಮುಂಗಡ 4.50 ಲಕ್ಷ ರೂ. ಪಡೆದಿದ್ದ. ಈ ವೇಳೆ ಕಾರಿನ ದಾಖಲೆಗಳು ಮನೆಯಲ್ಲಿ ಬಿಟ್ಟು ಬಂದಿದ್ದೇನೆ. ಕಾರು ವರ್ಗಾವಣೆ ಅರ್ಜಿಗಳಿಗೆ ತಾಯಿಯ ಸಹಿ ಮಾಡಿಸಿಕೊಂಡು ಬಂದು ಕಾರು ಕೊಡುವುದಾಗಿ ತಿಳಿಸಿ ನಾಪತ್ತೆಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಕಾರಿನ ನಂಬರ್ ಹಾಗೂ ಫೋನ್ ನಂಬರ್ ಕರೆಗಳ ವಿವರ ಪರಿಶೀಲಿಸಿದಾಗ, ಆರೋಪಿಯು ಕಾವೇರಿನಗರದಲ್ಲಿರುವ ಸುಳಿವು ಸಿಕ್ಕಿತ್ತು. ಮನೆಯಲ್ಲಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ.

    ಕನಕಪುರ ತಾಲೂಕು ಕಡಿವೇಕೆರೆ ನಿವಾಸಿ ಮಂಜುನಾಥ್ ಅಲಿಯಾಸ್ ನಂದೀಶ್ ರೆಡ್ಡಿ (28) ಬಂಧಿತ. ಆರೋಪಿಯಿಂದ 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕಾರು, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಕೆ.ಆರ್.ಪುರ, ನೆಲಮಂಗಲ, ನಾಯಂಡಹಳ್ಳಿ ಮತ್ತು ಮೈಸೂರು ಸೇರಿ ವಿವಿಧೆಡೆ ನಡೆದಿದ್ದ ವಂಚನೆ ಪ್ರಕರಣಗಳು ಈತನ ಬಂಧನದಿಂದ ಬೆಳಕಿಗೆ ಬಂದಿವೆ ಎಂದು ಆಗ್ನೇಯ ಡಿಸಿಪಿ ಶ್ರೀನಾಥ್ ಜೋಷಿ ತಿಳಿಸಿದ್ದಾರೆ.

    ಇದನ್ನೂ ಓದಿ: ಷಾರ್ಟ್‌ ಸರ್ಕ್ಯೂಟ್‌: ವಿಜಯಪುರದ ಯೋಧ ಹುತಾತ್ಮ

    ಎಸ್​ಎಸ್​ಎಲ್​ಸಿ ಓದಿದ್ದ ಮಂಜುನಾಥ್, ಕಾರ್ಯಕ್ರಮಗಳಲ್ಲಿ ಹೂವಿನ ಅಲಂಕಾರ ಮಾಡುವ ಕೆಲಸ ಮಾಡಿಕೊಂಡಿದ್ದ. ಲಾಕ್​ಡೌನ್ ಬಳಿಕ ವ್ಯಾಪಾರ ಸ್ಥಗಿತವಾಗಿದ್ದರಿಂದ ಹಣಕಾಸಿನ ಸಮಸ್ಯೆಯಾಗಿತ್ತು. ಅಲ್ಲದೇ, ಈ ಹಿಂದೆ ಒಎಲ್​ಎಕ್ಸ್​ನಲ್ಲಿ ಮೊಬೈಲ್ ಖರೀದಿಸಲು ಮುಂದಾಗಿದ್ದ. ಜಾಹೀರಾತು ಹಾಕಿದ್ದ ವ್ಯಕ್ತಿಯನ್ನು ಸಂರ್ಪಸಿ 5 ಸಾವಿರ ರೂ. ಗಳನ್ನು ಆತನ ಖಾತೆಗೆ ವರ್ಗಾಯಿಸಿದ್ದ. ಹಣ ಪಡೆದಿದ್ದ ವ್ಯಕ್ತಿ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದ. ಇದರಿಂದ ಆಕ್ರೋಶಗೊಂಡು, ಯಾವ ರೀತಿ ಮೋಸವಾಯಿತೋ ಅದೇ ರೀತಿಯಾಗಿ ಹಣ ವಾಪಸ್ ಪಡೆಯಬೇಕೆಂದು ಯೋಚಿಸಿ ಕೃತ್ಯಕ್ಕೆ ಕೈ ಹಾಕಿದ್ದ.

    ಇದನ್ನೂ ಓದಿ: ಕರೊನಾ ಚೇತರಿಕೆಯಲ್ಲಿ ರಾಜ್ಯವೇ ನಂ.1 : ಡಿಸಿಎಂ ಅಶ್ವತ್ಥನಾರಾಯಣ ವಿವರಣೆ

    ಬಳಸಿದ ಕಾರುಗಳ ಮಾರಾಟ ಮಳಿಗೆಗಳಿಗೆ ಹೋಗಿ ಕಾರು ಖರೀದಿಸುವ ಸೋಗಿನಲ್ಲಿ ಮಾಲೀಕರಿಂದ ದಾಖಲೆಗಳ ಪ್ರತಿಗಳನ್ನು ಪಡೆಯುತ್ತಿದ್ದ. ಮಳಿಗೆಗೆ ಹೋಗಿದ್ದಾಗ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದ ಕಾರಿನ ಫೋಟೋಗಳನ್ನು ಒಎಲ್​ಎಕ್ಸ್​ನಲ್ಲಿ ಜಾಹೀರಾತು ಪ್ರಕಟಿಸುತ್ತಿದ್ದ. ಕಾರು ಖರೀದಿಸಲು ಸಂರ್ಪಸುವರಿಗೆ, ಕಾರಿನ ದಾಖಲೆಗಳನ್ನು ವ್ಯಾಟ್ಸ್​ಆಪ್ ಮೂಲಕ ಕಳುಹಿಸಿ, ಎಲ್ಲ ದಾಖಲೆಗಳು ಸರಿಯಾಗಿವೆ ಎಂದು ಬಿಂಬಿಸಿ ವ್ಯವಹಾರ ಕುದುರಿಸುತ್ತಿದ್ದ.

    ಇದನ್ನೂ ಓದಿ: ಕೃಷ್ಣ ಮಠ ನಿರ್ವಹಣೆಗೆ ಸಾಲ ಮಾರ್ಗ

    ಬೇರೆಯವರ ದಾಖಲೆ ನೀಡಿ ಸಿಮ್ ಖರೀದಿ

    ಕೆಲಸಕ್ಕಾಗಿ ಹುಡುಕಾಡುತ್ತಿದ್ದ ಯುವಕರನ್ನು ಸಂರ್ಪಸಿ, ಪ್ರತಿಷ್ಠಿತ ಕಂಪನಿಯಲ್ಲಿ ನೌಕರಿ ಕೊಡಿಸುವುದಾಗಿ ಅವರನ್ನು ನಂಬಿಸಿದ್ದ. ಕಂಪನಿಗಳಿಗೆ ಅರ್ಜಿ ಕಳುಹಿಸಬೇಕು ಎಂಬ ನೆಪದಲ್ಲಿ ಆಧಾರ್​ಕಾರ್ಡ್, ಪ್ಯಾನ್​ಕಾರ್ಡ್, ಗುರುತಿನ ಚೀಟಿ ಹಾಗೂ ಫೋಟೋ ಪಡೆಯುತ್ತಿದ್ದ. ಆ ದಾಖಲೆಗಳಿಂದ ಸಿಮ್ ಕಾರ್ಡ್ ಖರೀದಿಸಿದ್ದ. ಈ ಫೋನ್ ನಂಬರ್ ಮೂಲಕ ಒಎಲ್​ಎಕ್ಸ್​ನಲ್ಲಿ ನಂದೀಶ್​ರೆಡ್ಡಿ, ಬಾಬು, ಭರತ್, ಶಿವಾಜಿ ರಾವ್ ಎಂಬ ಹೆಸರಿನ ನಕಲಿ ಖಾತೆಗಳನ್ನು ತೆರೆದಿದ್ದ. ನಾಲ್ಕೈದು ಜನರನ್ನು ವಂಚಿಸಿದ ಬಳಿಕ ಸಿಮ್ಾರ್ಡ್ ಬದಲಾಯಿಸುತ್ತಿದ್ದ. ಬಳಿಕ ಮತ್ತೊಂದು ಸಿಮ್ ಕಾರ್ಡ್​ನಿಂದ ವಂಚನೆಗೆ ಇಳಿಯುತ್ತಿದ್ದ. ವಂಚಿಸಿದ ಹಣದಲ್ಲಿ ಮನೆಗೆ ಬೇಕಾದ ವಸ್ತುಗಳಾದ ಫ್ರಿಜ್, ಟಿವಿ, ವಾಶಿಂಗ್ ಮಷಿನ್, ದ್ವಿಚಕ್ರ ವಾಹನ ಹಾಗೂ ಕಾರು ಖರೀದಿಸಿದ್ದ. ಕಾವೇರಿನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಐಷಾರಾಮಿ ಜೀವನ ಸಾಗಿಸುತ್ತಿದ್ದ. ವಂಚನೆ ಹಣದಲ್ಲಿ ಶೋಕಿ ಮಾಡುತ್ತಿದ್ದ. ವಂಚನೆ ಹಣದಲ್ಲಿ ಖರೀದಿಸಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಾಳೆಯಿಂದ ಮಾರುಕಟ್ಟೆ ಪುನರಾರಂಭ: ಬಿಬಿಎಂಪಿಯಿಂದ ಮಾರ್ಕಿಂಗ್ ವ್ಯವಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts