More

    ಕರಾವಳಿಗೆ ಕಾಂಡ್ಲಾ ಅಪರಿಚಿತ?

    ಭರತ್ ಶೆಟ್ಟಿಗಾರ್ ಮಂಗಳೂರು

    ಕರಾವಳಿ ತೀರದ ರಕ್ಷಣಾ ಕವಚ ಎಂದು ಹೆಸರು ಪಡೆದಿರುವ, ಭೂಮಿಯ ಮೇಲಿನ ಶ್ರೇಷ್ಠ ಸಸ್ಯ ಸಂಪತ್ತುಗಳಲ್ಲಿ ಒಂದಾಗಿರುವ ಕಾಂಡ್ಲಾ ವನ (ಮ್ಯಾನ್‌ಗ್ರೋವ್) ಕರ್ನಾಟಕ ಕರಾವಳಿ ಮಟ್ಟಿಗೆ ಅಪರಿಚಿತವಾಗುತ್ತಿಯೇ ಎನ್ನುವ ಪ್ರಶ್ನೆ ಎದುರಾಗಿದೆ.
    ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಪರಿಸರ ಇಲಾಖೆ ಬಿಡುಗಡೆ ಮಾಡಿದ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್-2019 (ಐಎಸ್‌ಎಫ್‌ಆರ್) ಪ್ರಕಾರ ಕರ್ನಾಟಕದಲ್ಲಿರುವ ಒಟ್ಟು ಮ್ಯಾನ್‌ಗ್ರೋವ್ ಪ್ರದೇಶ ಕರಾವಳಿಯ ಮೂರು ಜಿಲ್ಲೆಗಳು ಸೇರಿ ಕೇವಲ 10 ಚದರ ಕಿ.ಮೀ. ದೇಶದ ಒಟ್ಟು ಕಾಂಡ್ಲಾ ಅರಣ್ಯ ಪ್ರದೇಶಕ್ಕೆ ಹೋಲಿಸಿದರೆ ಕೇವಲ ಶೇ.0.20. ಫಾರೆಸ್ಟ್ ಸರ್ವೇ ಆಫ್ ಇಂಡಿಯಾ (ಎಫ್ ಎಸ್‌ಎ) 1987ರಿಂದ ಎರಡು ವರ್ಷಕ್ಕೊಮ್ಮೆ ವರದಿ ಸಿದ್ಧಪಡಿಸುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಈ ವರದಿ ಬಿಡುಗಡೆಗೊಳಿಸಿದ್ದರು.

    ಉತ್ತರ ಕನ್ನಡ ಜಿಲ್ಲೆ ಮುಂದು
    ಕರಾವಳಿ ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆ ಮುಂದಿದ್ದು, ಒಟ್ಟು 8.50 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕಾಂಡ್ಲಾ ಹೊಂದಿದೆ. ಉಡುಪಿ ಜಿಲ್ಲೆ 1.54 ಚ.ಕಿ.ಮೀ. ವ್ಯಾಪ್ತಿ ಹೊಂದಿದ್ದರೆ, ದ.ಕ ಜಿಲ್ಲೆಯ ಪಕ್ಕಾ ಮಾಹಿತಿ ಲಭ್ಯವಾಗಿಲ್ಲ. 2017 ಮತ್ತು 2019ರ ಈ ವರದಿಯಲ್ಲಿ ಕರಾವಳಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಕರಾವಳಿ ಪ್ರದೇಶದಲ್ಲಿ ಹಸಿರು ಬೆಳೆಸುವ ಅದರಲ್ಲೂ ಕಾಂಡ್ಲಾ ಬೆಳೆಯುವ ವಿಶೇಷ ಯೋಜನೆಯಾದ ‘ಹಸಿರು ಕವಚ’ವನ್ನು ಬಜೆಟ್‌ನಲ್ಲಿ ಮತ್ತೆ ಜಾರಿಗೆ ತರಬೇಕು ಎಂದು ಪರಿಸರ-ಅರಣ್ಯ-ಜೀವವೈವಿಧ್ಯ ತಜ್ಞರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಸಮುದ್ರ ಕೊರೆತ ತಡೆಯಲು ಸಹಕಾರಿ
    ನದಿ-ಸಮುದ್ರದ ಬದಿ ಹಚ್ಚ ಹಸಿರಿನಿಂದ ಕಂಗೊಳಿಸುವ ಕಾಂಡ್ಲ್ಲಾ ಕಾಡುಗಳು ನೋಡುಗರನ್ನು ಸೆಳೆಯುತ್ತವೆ. ಇವುಗಳ ಬೇರು ಮಣ್ಣನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಸಾಮರ್ಥ್ಯ ಇರುವುದರಿಂದ ಭೂ ಸವಕಳಿ ತಡೆಯುತ್ತದೆ. ಸಮುದ್ರ ಕೊರೆತ ತಡೆಯುವಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತವೆ. ಸುನಾಮಿಯಂಥ ಪ್ರಕೃತಿ ವಿಕೋಪವನ್ನು ಕಡಿಮೆ ಮಾಡುವ ಸಾಮರ್ಥ್ಯವೂ ಇದೆ ಎಂದು ಈಗಾಗಲೇ ಸಾಬೀತಾಗಿದೆ. ವಾತಾವರಣದ ಇಂಗಾಲದ ಡೈ ಆಕ್ಸೈಡನ್ನು ಹೀರಿ ಆಮ್ಲಜನಕ ಬಿಡುಗಡೆ ಮಾಡುವುದರಿಂದ ತಾಪಮಾನ ಹೆಚ್ಚಾಗದಂತೆಯೂ ತಡೆೆಯುತ್ತದೆ. ಪಕ್ಷಿ-ಸಂಕುಲಗಳು ಇದರಲ್ಲೇ ಗೂಡು ಕಟ್ಟಿ ವಾಸಿಸುತ್ತವೆ. ಜಲಚರಗಳಾದ ಮೀನು ಹಾಗೂ ಏಡಿ, ಕಪ್ಪೆ ಹಾವು, ಆಮೆ ಇತ್ಯಾದಿಗಳಿಗೂ ಆಶ್ರಯತಾಣ.

    ದೇಶದಲ್ಲಿ ಕಾಂಡ್ಲ್ಲಾ ವಿಸ್ತಾರ
    ಹಿಂದಿನ ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ಕಾಂಡ್ಲಾ ಕಾಡುಗಳ ಪ್ರಮಾಣ ಹೆಚ್ಚಾಗುತ್ತಿದೆ. ದೇಶದಲ್ಲಿ ಒಟ್ಟು 4,975 ಚ.ಕಿ.ಮೀ. ಕಾಂಡ್ಲಾ ವಲಯವಿದ್ದು, 2017ರ ವರದಿಗೆ ಹೋಲಿಸಿದರೆ 54 ಚ.ಕಿ.ಮೀ. ಹೆಚ್ಚಳವಾಗಿದೆ. ಕರಾವಳಿ ತೀರವನ್ನು ಹೊಂದಿರುವ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಮ್ಯಾನ್‌ಗ್ರೋವ್ ಕಾಡುಗಳಿವೆ. 2,112 ಚ.ಕಿ.ಮೀ. ವ್ಯಾಪ್ತಿ ಹೊಂದಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೆ, 1,177 ಚ.ಕಿ.ಮೀ. ಕಾಂಡ್ಲಾ ಹೊಂದಿರುವ ಗುಜರಾತ್ ಎರಡನೇ ಸ್ಥಾನದಲ್ಲಿದೆ. ಅಂಡಮಾನ್ ನಿಕೋಬಾರ್‌ನಿಲ್ಲಿ 616 ಚ.ಕಿ.ಮೀ., ಆಂಧ್ರ ಪ್ರದೇಶದಲ್ಲಿ 404 ಚ.ಕಿ.ಮೀ. ಕರ್ನಾಟಕಕ್ಕಿಂತಲೂ ಕಡಿಮೆ ಕರಾವಳಿ ಪ್ರದೇಶವಿರುವ ಗೋವಾದಲ್ಲಿ 26 ಚ.ಕಿಮೀ. ಮ್ಯಾನ್‌ಗ್ರೋವ್ ವಲಯವಿದೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆ ದೇಶದಲ್ಲೇ ಅತಿಹೆಚ್ಚು ಅಂದರೆ 2082.17 ಚ.ಕಿ.ಮೀ. ಮ್ಯಾನ್‌ಗ್ರೋವ್ ಹೊಂದಿದೆ.

    ವಿಶ್ವದಲ್ಲಿ ಹೀಗಿದೆ
    ವಿಶ್ವದಲ್ಲಿ 15 ಮಿಲಿಯ ಹೆಕ್ಟೇರ್ ಪ್ರದೇಶದಲ್ಲಿ ಮ್ಯಾನ್‌ಗ್ರೋವ್ ಪ್ರದೇಶ ವ್ಯಾಪಿಸಿದ್ದು, ಇದು ಉಷ್ಣ ವಲಯ ಅರಣ್ಯ ಪ್ರದೇಶದ ಶೇ.1ರಷ್ಟು. 123 ದೇಶದಲ್ಲಿ ಇದು ಹರಡಿಕೊಂಡಿದ್ದು, ಶೇ.40ರಷ್ಟು ಆಗ್ನೇಯ ಮತ್ತು ದಕ್ಷಿಣ ಏಷ್ಯಾದಲ್ಲಿದೆ. ಉಳಿದ ದಕ್ಷಿಣ ಅಮೆರಿಕ, ಉತ್ತರ ಮಧ್ಯ ಅಮೆರಿಕ, ಪಶ್ಚಿಮ ಮಧ್ಯಮ ಆಫ್ರಿಕಾದಲ್ಲಿದೆ. ದಕ್ಷಿಣ ಏಷ್ಯಾದ ಶೇ.3ರಷ್ಟು ಮ್ಯಾನ್‌ಗ್ರೋವ್ ಭಾರತದಲ್ಲಿದೆ.

    ದ.ಕ.ಜಿಲ್ಲೆಯ ಬೈಕಂಪಾಡಿ ಪ್ರದೇಶದಲ್ಲಿ ಹಿಂದೆ ಯಥೇಚ್ಛವಾಗಿ ಕಾಂಡ್ಲ್ಲಾ ಗಿಡಗಳು ಬೆಳೆಯುತ್ತಿದ್ದವು. ಬೃಹತ್ ಉದ್ದಿಮೆಗಳಿಂದ ಹರಿದು ಬಂದ ತ್ಯಾಜ್ಯ ಹಲವು ಹೆಕ್ಟೇರ್‌ನಷ್ಟು ಮ್ಯಾನ್‌ಗ್ರೋವ್ ನಾಶಕ್ಕೆ ಕಾರಣವಾಯಿತು. ಉತ್ತರ ಕನ್ನಡ ಜಿಲ್ಲೆಯಲ್ಲೂ ಮ್ಯಾನ್‌ಗ್ರೋವ್ ನಾಶಪಡಿಸಿ ಬಂದರು ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕರಾವಳಿ ಭೂ ಭಾಗ ಉಳಿಯಬೇಕಾದರೆ ಮ್ಯಾನ್‌ಗ್ರೋವ್ ಅವಶ್ಯ. ಕಾಡಿನ ರೀತಿಯಲ್ಲಿ ಬೇರೆ ಕಡೆಯಲ್ಲಿ ಇದನ್ನು ಬೆಳಸಲು ಸಾಧ್ಯವಿಲ್ಲ.
    ರಾಮಚಂದ್ರ ಭಟ್
    ನಿವೃತ್ತ ಪ್ರಾಧ್ಯಾಪಕ, ಮೀನುಗಾರಿಕಾ ಕಾಲೇಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts