More

    ಮಾವಿನ ಹೂವಿಗೆ ರೋಗ ಬಾಧೆ ; ಆತಂಕದಲ್ಲಿ ಮಾವು ಬೆಳೆಗಾರ ಔಷಧ ಸಿಂಪಡಿಸಿದರೂ ಆಗದ ನಿಯಂತ್ರಣ

    ಕೈಲಾಂಚ: ಮಾವಿನ ಮರಗಳಲ್ಲಿ ಹೂವಿನ ರಾಶಿ ಕಂಡು ಉತ್ತಮ ಸಲಿನ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಗೊಂಚಲಿನಲ್ಲಿ ಕೊಂಡಿಹುಳ ಮತ್ತು ಜೋನಿ ಸಮಸ್ಯೆ ಕಾಣಿಸಿಕೊಂಡಿದ್ದು, ಈ ಬಾರಿ ನಷ್ಟದ ಭೀತಿ ಎದುರಾಗುವ ಲಕ್ಷಣ ಕಾಣತೊಡಗಿದೆ.

    ಯಾವುದೇ ನೀರಾವರಿ ಸೌಲಭ್ಯ ಹೊಂದಿಲ್ಲದ ಬೆಟ್ಟ-ಗುಡ್ಡಗಳಿಂದ ಕೂಡಿರುವ ಮಳೆಯಾಶ್ರಿತ ಪ್ರದೇಶವಾಗಿರುವ ಕೈಲಾಂಚ ಹೋಬಳಿ ಗ್ರಾಮಗಳಲ್ಲಿ ಅತೀ ಹೆಚ್ಚಿನ ರೈತರು ಮಾವು ಬೆಳೆ ಅವಲಂಬಿಸಿದ್ದಾರೆ.  ಬಾದಾಮಿ, ಮಲಗೋಬ, ರಸಪುರಿ, ಸೆಂಧೂರ ಮಾವಿನ ಮರಗಳನ್ನು ಹೆಚ್ಚಾಗಿ ಬೆಳೆದಿದ್ದು, ಪ್ರತೀ ವರ್ಷ ಒಂದಲ್ಲ ಒಂದು ಸಮಸ್ಯೆ ಮಾವು ಬೆಳೆಗೆ ಎದುರಾಗುತ್ತಲೇ ಇದೆ. ಕಳೆದ ವರ್ಷ ಕರೊನಾ ಹಿನ್ನೆಲೆಯಲ್ಲಿ ಉತ್ತಮ ಫಸಲು ಬಂದರೂ ಲಾಕ್‌ಡೌನ್, ಅಂತರಾಷ್ಟ್ರೀಯ ಮಾರುಕಟ್ಟೆಗೆ ರಫ್ತು, ದೇಶದ ನಾನಾ ಭಾಗಗಳ ಮಾರುಕಟ್ಟೆಗೆ ಫಸಲು ಸಾಗಾಟವಾಗದ ಸಮಸ್ಯೆಯಿಂದ ರೈತರಿಗೆ ಆದಾಯ ಕೈಗೆ ಸಿಗದೆ ನಷ್ಟ ಹೊಂದುವಂತಾಗಿತ್ತು. ಈ ಭಾರಿ ಮುಂಗಾರು ಮತ್ತು ಹಿಂಗಾರು ಮಳೆ ಕಾಲಕಾಲಕ್ಕೆ ಉತ್ತಮವಾಗಿ ಆದ ಪರಿಣಾಮ ಮಾವಿನ ಮರಗಳು ಚಿಗುರೊಡೆದು ಭರ್ಜರಿಯಾಗಿ ಹೂಕಚ್ಚಿ ರೈತರಲ್ಲಿ ಹರ್ಷದ ಜತೆಗೆ ಲಾಭದ ನಿರೀಕ್ಷೆಗೆ ಕಣ್ಣು ಹಾಯಿಸಿದ್ದರು.

    ನಾಗೋಹಳ್ಳಿ, ಕೈಲಾಂಚ, ಅಂಕನಹಳ್ಳಿ, ಗುನ್ನೂರು, ಕೋಟಹಳ್ಳಿ, ಅಮ್ಮನಪುರದೊಡ್ಡಿ, ದೇವರದೊಡ್ಡಿ, ಕವಣಾಪುರ, ಕುರುಬಳ್ಳಿದೊಡ್ಡಿ, ವಿಭೂತಿಕೆರೆ ಮತ್ತಿತರ ಪ್ರದೇಶಗಳಲ್ಲಿ ಮಾವಿನ ಹೂವುಗಳಲ್ಲಿ ಕೊಂಡಿಹುಳಗಳು ಕಾಣಿಸಿಕೊಂಡು ಸಂಪೂರ್ಣ ಹೂವು ತಿಂದು ಮಾವಿನ ಪೀಚುಗಳು ಕಚ್ಚದಂತೆ ಮಾಡುತ್ತಿರುವುದು ರೈತರ
    ಆತಂಕಕ್ಕೆ ಕಾರಣವಾಗಿದೆ.

    ಫಸಲು ನಷ್ಟದ ಆತಂಕ: ವಾತಾವರಣದ ಬದಲಾವಣೆ ಯಿಂದ ನಂಜಾಪುರ, ಕಾಡನಕುಪ್ಪೆ, ಹೊಸದೊಡ್ಡಿ, ಬನ್ನಿಕುಪ್ಪೆ, ಅಂಕನಹಳ್ಳಿ ಭಾಗಗಳಲ್ಲಿ ಜೋನಿ ಸಮಸ್ಯೆ ಎದುರಾಗಿದೆ. ಕೊಂಡಿಹುಳು ಬಾಧೆ ಮತ್ತು ಜೋನಿ ಸಮಸ್ಯೆಯಲ್ಲಿ ಫಸಲು ನಷ್ಟವಾಗುವ ಆತಂಕ ಮನೆ ಮಾಡಿದೆ. ಕೊಂಡಿಹುಳು ನಿಯಂತ್ರಣಕ್ಕೆ ಔಷಧ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಕೀಟಬಾಧೆ ಜೋನಿ ಸಮಸ್ಯೆ ಮುಂದುವರಿದರೆ ರೈತರು ಹೆಚ್ಚಿನ ಆರ್ಥಿಕ ನಷ್ಟ ನೋಡಬೇಕಾಗುತ್ತದೆ ಎನ್ನುತ್ತಾರೆ ಮಾವು ಬೆಳೆಗಾರರು.

    ಕೊಂಡಿಹುಳು ಬಾಧೆ ತಡೆಗಟ್ಟಲು ಕ್ಲೋರೋಪೈರಿಪೋಸ್, ಸೈಪರ್‌ಮೆತ್ರಿನ್ ಔಷಧಯನ್ನು 1 ಲೀ. ನೀರಿಗೆ 2 ಎಂ.ಎಲ್.ಔಷಧ ಜತೆಗೆ ಬೆರೆಸಿ ಸಿಂಪಡಣೆ ಮಾಡಬೇಕು. ಜೋನಿ ಸಮಸ್ಯೆಗೆ ಕಾನ್ಪಿಡಾರ್ 0.5 ಎಂ.ಎಲ್. ಅಥವಾ ಸೊಲೋಮಾನ್ 1 ಎಂ.ಎಲ್ ಔಷಧವನ್ನು 1 ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಿದಾಗ ರೋಗಬಾಧೆ ತಡೆಗಟ್ಟಬಹುದು. ತೋಟಗಾರಿಕೆ ಇಲಾಖೆ ರೈತ ರೊಂದಿಗಿದ್ದು ರೋಗ, ಕೀಟಬಾಧೆ, ಜೋನಿ ಸಮಸ್ಯೆಗೆ ಔಷಧ ಸಿಂಪಡಣೆ ಬಗ್ಗೆ ಅಗತ್ಯ ಮಾಹಿತಿ ನೀಡಲಾಗುವುದು.
    ಎಚ್.ಆರ್.ಶಂಕರ್
    ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ರಾಮನಗರ

    ಮರಗಳು ಚಿಗುರೊಡೆದು ಮರಗಳಲ್ಲಿ ಸೊಂಪಾಗಿ ಹೂವು ಬಿಟ್ಟಿದ್ದನ್ನು ನೋಡಿ ರೈತರಿಂದ ಮಾವಿನ ತೋಟಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದಿದ್ದೇವೆ. ಆದರೆ ಹೂಗಳಲ್ಲಿ ಕೊಂಡಿಹುಳ ಕಾಣಿಸಿಕೊಂಡು ಹೂಗಳನ್ನು ತಿಂದುಹಾಕುತ್ತಿವೆ. ಔಷಧ ಸಿಂಪಡಣೆ ಮಾಡುತ್ತಿದ್ದರೂ ಮತ್ತೆ ಮತ್ತೆ ಹುಳುಬಾಧೆ ಹೆಚ್ಚಾಗುತ್ತಲೇ ಇದೆ. ತೋಟದಿಂದ ತೋಟಕ್ಕೆ ಹರಡುತ್ತಲೇ ಇದ್ದು ಹಾಕಿದ ಬಂಡವಾಳ ಕೈಗೆ ಸೇರುತ್ತದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.
    ಗೋಪಾಲ್‌ನಾಯಕ್ ದೇವರದೊಡ್ಡಿ, ಮಾವಿನಕಾಯಿ ವ್ಯಾಪಾರಿ

    3-4 ವರ್ಷಗಳಿಂದ ಮಾವಿನ ಫಸಲಿನಲ್ಲಿ ಲಾಭ ನೋಡಲು ಆಗಿರಲಿಲ್ಲ. ಈ ಭಾರಿ ಉತ್ತಮ ಮಳೆಯಾದ್ದರಿಂದ ಮರಗಳು ಚಿಗುರೊಡೆದು ಹೂಬಿಟ್ಟು ಕಂಗೊಳಿಸುತ್ತಿರುವುದನ್ನು ನೋಡಿ ಲಾಭದ ನಿರೀಕ್ಷೆಯಲ್ಲಿ ಇದ್ದೆ. ಈಗ ಮಾವಿನ ಮರಗಳಲ್ಲಿ ಜೋನಿ, ಕೊಂಡಿಹುಳು ಸಮಸ್ಯೆ ಕಾಣುತ್ತಿದ್ದು, ಪೀಚುಗಳು ನೆಲಕ್ಕುದುರಿ ಬೀಳುತ್ತಿವೆ. ಇದರಿಂದ ಫಸಲು ನಷ್ಟವಾಗುತ್ತಿದೆ.
    ಯೋಗೇಶ್ ಮಾವು ಬೆಳೆಗಾರ ಹೊಸದೊಡ್ಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts