More

    ಮಾವಿನ ಹಣ್ಣಿಗೆ ಲಾಕ್​ಡೌನ್ ಪೆಟ್ಟು

    ರಾಣೆಬೆನ್ನೂರ: ಹಣ್ಣುಗಳ ರಾಜ ಮಾವಿನ ಹಣ್ಣಿನ ವ್ಯಾಪಾರ ನಗರದಲ್ಲಿ ಆರಂಭಗೊಂಡಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಎಂದಿನ ಬೇಡಿಕೆ ಕಂಡು ಬರುತ್ತಿಲ್ಲ. ಮಾವು ಖರೀದಿಸುವವರ ಸಂಖ್ಯೆಯೂ ಕುಂಠಿತವಾಗಿದ್ದು ಆಗೊಬ್ಬರು, ಈಗೊಬ್ಬರು ಎನ್ನುವಂತೆ ಗ್ರಾಹಕರು ಕಾಣಸಿಗುತ್ತಿದ್ದಾರೆ.

    ನಗರದ ಪಿ.ಬಿ. ರಸ್ತೆ ತರಕಾರಿ ಮಾರುಕಟ್ಟೆ, ಎಂ.ಜಿ. ರಸ್ತೆ, ನೆಹರು ಮಾರುಕಟ್ಟೆ ಸೇರಿ ವಿವಿಧೆಡೆ ಮಾವು ಮಾರಾಟ ಮಾಡಲಾಗುತ್ತಿದೆಯಾದರೂ ಕಳೆದ ವರ್ಷದಂತೆ ಮುಗಿಬಿದ್ದು ಖರೀದಿಸುವ ದೃಶ್ಯಗಳು ಮಾಯವಾಗಿವೆ. ಕಳೆದ ಸೆಪ್ಟೆಂಬರ್​ನಲ್ಲಿ ಸುರಿದ ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ಇಳುವರಿ ಕಡಿಮೆಯಾಗಿದೆ. ಬೆಲೆಯೂ ಇಳಿಮುಖವಾಗಿದೆ.

    ನಗರದ ಬಹುತೇಕ ಅಂಗಡಿಗಳಲ್ಲಿ ಮಾವಿನ ಹಣ್ಣುಗಳು ಅಷ್ಟಾಗಿ ಕಂಡುಬರುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾವಿನ ಮಾರಾಟದ ಭರಾಟೆ ಅಷ್ಟು ಜೋರಾಗಿ ನಡೆಯುತ್ತಿಲ್ಲ. ನಗರದ ಕೆಲವೇ ಅಂಗಡಿಗಳಲ್ಲಿ, ತಳ್ಳುವ ಗಾಡಿಗಳಲ್ಲಿ ಹಾಗೂ ತಲೆಯ ಮೇಲೆ ಬುಟ್ಟಿ ಹೊತ್ತು ಮಾರಾಟ ಮಾಡುವುದು ಕಂಡುಬರುತ್ತಿದೆ.

    ರಸಪುರಿ, ಮಲಗೋಬಾ, ಬಾದಾಮಿ, ತೋತಾಪುರಿ ಸೇರಿ ಹಲವು ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಕಾಲಿಡುತ್ತಿವೆ. ಒಂದು ಕೆ.ಜಿ. ಮಾವಿಗೆ ಹಣ್ಣಿಗೆ 50 ರಿಂದ 100 ರೂ. ಗಳವರೆಗೂ ಮಾರಾಟ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯುವುದಿಲ್ಲ. ಹೀಗಾಗಿ, ಹಾನಗಲ್ಲ, ಹಿರೇಕೆರೂರ, ಶಿಗ್ಗಾಂವಿ ಭಾಗದಿಂದ ಮಾರಾಟಕ್ಕೆ ಬರುತ್ತದೆ. ತುಮಕೂರು ಸೇರಿ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ಮಾವು ಬರಬೇಕಿದೆ. ಹೀಗಾಗಿ, ಕಾರ ಹುಣ್ಣಿಮೆ ಸಮೀಪ ಬಂದಂತೆ ಮಾವು ಮಾರಾಟ ಜೋರಾಗಬಹುದು ಎಂಬುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.

    ಬೆಲೆಯಲ್ಲಿ ಇಳಿಮುಖ: ಸದ್ಯ ಮಾರುಕಟ್ಟೆಯಲ್ಲಿ ರಸಪುರಿ ಒಂದು ಕೆ.ಜಿ.ಗೆ 50 ರಿಂದ 70 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷ ಇದೇ ಹಣ್ಣು 80 ರಿಂದ 100 ರೂ.ಗೆ ಮಾರಾಟವಾಗಿತ್ತು. ಬಾದಾಮಿ ಹಣ್ಣು ಕಳೆದ ಬಾರಿ 140 ರವರೆಗೂ ಮಾರಾಟವಾಗಿದ್ದರೆ ಈ ಬಾರಿ 100 ರೂ. ಗಡಿ ದಾಟಿಲ್ಲ.

    ಕೆಲವೆಡೆ ಮಾವಿನ ಹಣ್ಣಿನ ವ್ಯಾಪಾರಿಗಳಲ್ಲಿ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜನತೆ ಬೀದಿ ಬದಿ ಮಾರಾಟ ಮಾಡುತ್ತಿರುವ ನಮ್ಮ ಬಳಿ ಹಣ್ಣು ಖರೀದಿಸಲು ಹಿಂದೆ-ಮುಂದೆ ನೋಡುತ್ತಿದ್ದಾರೆ. ಹೀಗಾಗಿ, ವ್ಯಾಪಾರ ಕೊಂಚ ಕಡಿಮೆಯಿದೆ. ಇನ್ನೂ ವಿವಿಧ ತಳಿಯಹಣ್ಣು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದ್ದು, ಮುಂದಿನ ದಿನದಲ್ಲಾದರೂ ವ್ಯಾಪಾರ ಉತ್ತಮವಾಗಲಿದೆಯೇ ಎಂಬುದನ್ನು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts