More

    ಮತ್ತೆ ಹೂಬಿಟ್ಟ ಮಾವು

    ರಾಜೇಶ್ ಶೆಟ್ಟಿ ದೋಟ, ಮಂಗಳೂರು
    ಒಮ್ಮೆ ಹೂ ಬಿಟ್ಟು ಫಸಲು ತುಂಬಿಕೊಂಡಿರುವ ಮಾವಿನ ಮರದಲ್ಲಿ ಇದೀಗ ಮತ್ತೊಮ್ಮೆ ಹೂವು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಈ ಬಾರಿ ಭರ್ಜರಿ ಫಸಲು ನಿರೀಕ್ಷಿಸಲಾಗಿದೆ.

    ಸಾಮಾನ್ಯವಾಗಿ ಡಿಸೆಂಬರ್ ಅಂತ್ಯದಲ್ಲಿ ಮಾವಿನ ಮರಗಳು ಹೂಬಿಟ್ಟು ಮಾರ್ಚ್ ಅಂತ್ಯದ ವೇಳೆಗೆ ಹಣ್ಣಾಗತೊಡಗುತ್ತವೆ. ಈ ಬಾರಿ ನಿಗದಿತ ಅವಧಿಯಲ್ಲೇ ಹೂವು ಕಾಣಿಸಿಕೊಂಡಿದ್ದು, ಮಿಡಿಯಾಗಿದೆ. ತೋಟಗಾರಿಕಾ ಪದ್ಧತಿಯಲ್ಲಿ ಬೆಳೆದ ಕಸಿ ಮಾವು ಮಾರುಕಟ್ಟೆ ಪ್ರವೇಶಿಸಿದರೂ, ಸ್ಥಳೀಯ ನೆಕ್ಕರೆ, ಬೆಳ್ಳಾರೆ, ಪುಳಿಕುಕ್ಕು, ಮುಂಡಪ್ಪ, ಕಾಡು ಮಾವು ತಳಿಯ ಮರಗಳಲ್ಲಿ ಈ ವೇಳೆಗೆ ಹೂ ಕಾಣಿಸಿಕೊಂಡಿರುವುದು ಸೋಜಿಗ. ಜನವರಿ ತಿಂಗಳಲ್ಲಿ ಸುರಿದ ಮಳೆ ಇದಕ್ಕೆ ಕಾರಣ ಎನ್ನುತ್ತಾರೆ ಕೃಷಿಕರು.

    ಕಳೆದ ವರ್ಷ ಅಕ್ಟೋಬರ್-ಸೆಪ್ಟೆಂಬರ್‌ವರೆಗೂ ಮಳೆ ಸುರಿದುದರಿಂದ ಹೊಸ ಚಿಗುರು, ಹೂ ಬರಲು ವಿಳಂಬವಾಗಿತ್ತು. ಕಾಯಿಬಿಟ್ಟು ಬೆಳೆಯುವಾಗ ಮೇ ಆಗಿತ್ತು. ಇಳುವರಿ ಪ್ರಮಾಣವೂ ಕಡಿಮೆಯಾಗಿತ್ತು. ಈ ಬಾರಿ ಪ್ರಸ್ತುತ ಹೂ ಬಿಟ್ಟ ಮರಗಳಲ್ಲಿ ಫಸಲು ಲಭಿಸಿದರೆ ಜೂನ್-ಜುಲೈವರೆಗೂ ಮಾವು ಲಭಿಸುವ ನಿರೀಕ್ಷೆ ಇದೆ. ತೋಟಗಾರಿಕೆ ಇಲಾಖೆಯಿಂದ ಆಫ್ ಸೀಸನ್ ಮಾವು ಬೆಳೆಯಲಾಗುತ್ತಿದೆಯಾದರೂ, ಇತ್ತೀಚಿನ ವರ್ಷಗಳಲ್ಲಿ ಪ್ರಾಕೃತಿಕವಾಗಿ ಈ ಬದಲಾವಣೆ ಇದೇ ಮೊದಲು ಎನ್ನುತ್ತಾರೆ ತೋಟಗಾರಿಕೆ ಅಧಿಕಾರಿಗಳು.

    ಈ ಬಾರಿ ಫಸಲು ಹೇಗೆ?: ಇದೀಗ ಕಾಯಿಯಾಗುತ್ತಿರುವ ಹಂತದಲ್ಲಿರುವ ಮಾವಿನ ಫಸಲು ಗಮನಿಸಿದರೆ ದ.ಕ.ಜಿಲ್ಲೆಯಲ್ಲಿ ಒಟ್ಟು ಇಳುವರಿ ಕಡಿಮೆ ಎನ್ನಬಹುದು. ಆದರೆ, ಎರಡನೇ ಹಂತದಲ್ಲಿ ಹೂ ಬಿಟ್ಟಿರುವ ಪ್ರಮಾಣವನ್ನು ಗಮನಿಸಿದರೆ ಭರ್ಜರಿ ಫಸಲನ್ನು ನಿರೀಕ್ಷಿಸಬಹುದು ಎನ್ನುತ್ತಾರೆ ಕೃಷಿಕರು. ಕರಾವಳಿ ಕೃಷಿಕರಿಗೆ ಮಾವು ಪ್ರಮುಖ ಆದಾಯದ ಬೆಳೆಯಲ್ಲ. ಆದರೂ ಹಲವು ವರ್ಷಗಳಿಂದ ದೊಡ್ಡ ಮತ್ತು ಸಣ್ಣ ರೈತರು ಇಷ್ಟಪಟ್ಟು ಮಾವು ಬೆಳೆಯುತ್ತಿದ್ದಾರೆ. ಸಮಗ್ರ ಕೃಷಿ ಪದ್ಧತಿಯಲ್ಲಿ ಇದು ಕಿರು ಆದಾಯದ ಮೂಲ. ಬೀಜ ಬಿದ್ದ ಜಾಗದಲ್ಲಿ ಮೊಳಕೆ ಒಡೆದು ಯಾವ ಪೋಷಣೆಯೂ ಇಲ್ಲದೆ ತನ್ನ ಪಾಡಿಗೆ ಬೆಳೆಯುತ್ತಿದ್ದ ಸ್ಥಳೀಯ ಜಾತಿಯ ಮಾವಿನ ಮರಗಳು ಸಮೃದ್ಧವಾಗಿ ಕಾಯಿ, ಹಣ್ಣುಗಳನ್ನು ನೀಡುತ್ತವೆ.

    ಬಿಸಿಲಿನಿಂದ ಉದುರುತ್ತಿದೆ ಮಿಡಿ: ಚಳಿಗಾಲದಲ್ಲಿ ಮೋಡದ ವಾತಾವರಣ ಮೂಡಿದ ಕೂಡಲೇ ಅರಳಿದ ಹೂವುಗಳು ಮುರುಟುವ ಅಪಾಯವಿದೆ. ಆದರೆ ಈ ಬಾರಿ ಅಂತಹ ಸಮಸ್ಯೆ ಕಂಡುಬಂದಿಲ್ಲ. ಆದರೆ, ಏರುತ್ತಿರುವ ಬಿಸಿಲಿನಿಂದಾಗಿ ಉತ್ತಮವಾಗಿ ಹೂವು ಬಿಟ್ಟು ನಿಂತಿರುವ ಮಾವಿನ ಮರದಿಂದ ಮಿಡಿಗಳು ಉದುರುತ್ತಿವೆ. ಮಾರುಕಟ್ಟೆಯಲ್ಲಿ ಆರಂಭದಲ್ಲಿ ಕೆ.ಜಿ.ಗೆ 50 ರೂ.ವರೆಗೆ ಬೆಲೆ ಇದ್ದ ಮಾವಿನ ಮಿಡಿ ಈಗ 30 ರೂ.ಗೆ ಲಭಿಸುತ್ತಿದೆ.

    ಚಳಿ ಹಾಗೂ ಸೆಕೆಯ ವಾತಾವರಣ ಸಮಪ್ರಮಾಣದಲ್ಲಿ ಇದ್ದರೆ ಇಳುವರಿ ಉತ್ತಮವಾಗಿರುತ್ತದೆ. ಪ್ರಸ್ತುತ ವಾತಾವರಣದ ಬದಲಾವಣೆ ಹಾಗೂ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಮಾವಿನ ಮರಗಳಲ್ಲಿ ಎರಡನೇ ಬಾರಿಗೆ ಹೂ ಕಟ್ಟಿದೆ. ಈ ಬೆಳವಣಿಗೆ ಜಿಲ್ಲೆಯ ಮಟ್ಟಿಗೆ ಬಹಳ ವಿರಳ.
    ಎಚ್.ಆರ್ ನಾಯ್ಕ ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ, ದ.ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts