More

    ಹವಾಮಾನಕ್ಕೆ ಬಾಡಿದ ಮಾವು-ಗೇರು

    ಶ್ರವಣ್ ಕುಮಾರ್ ನಾಳ, ಪುತ್ತೂರು

    ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಗೇರು, ಮಾವು ಇಳುವರಿ ಕುಸಿತ ಕಂಡಿದೆ.
    ಅಕ್ಟೋಬರ್-ಡಿಸೆಂಬರ್ ಪಶ್ಚಿಮ ಘಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾವು, ಗೇರು ಹೂ ಬಿಡುವ ಕಾಲ. ಈ ಅವಧಿಯಲ್ಲಿ ಚಳಿಮಿಶ್ರಿತ ಒಣಹವೆ ಹಾಗೂ ಬಿಸಿಲು ಇರಬೇಕು. ಆದರೆ ಈ ಬಾರಿ ಮಳೆ ಸಹಿತ ಮೋಡ ಮುಸುಕಿದ ವಾತಾವರಣ ಇದ್ದುದರಿಂದ ಬಹುತೇಕ ಗೇರು, ಮಾವು ಹೂ ಬಿಟ್ಟಿಲ್ಲ.

    ಕರಾವಳಿ ಭಾಗದ ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ 412 ಎಕ್ಟೇರ್ ಮಾವು, 26 ಸಾವಿರ ಎಕ್ಟೇರ್ ಗೇರು ಬೆಳೆಯಿದೆ. ವಾರ್ಷಿಕ 7591 ಟನ್ ಮಾವು, 60-70 ಸಾವಿರ ಟನ್ ಗೇರು ಬೆಳೆಯಾಗುವುದು ರೂಢಿ. ಆದರೆ ನವಂಬರ್‌ನಲ್ಲಿ ಕಾಣಿಸಿಕೊಂಡ ಹವಾಮಾನ ವೈಪರೀತ್ಯ ಈ ಬಾರಿ ಕರಾವಳಿಗೆ ಬಾರಿ ಹೊಡೆತ ನೀಡಿದೆ.

    ಪ್ರಸ್ತುತ ಚಳಿ ಇದ್ದು ಮೋಡ ಮುಸುಕಿದ ಅಥವಾ ಸೂಯಾಸ್ತಮಾನದ ತಕ್ಷಣ ಟಿ-ಜಾತಿಯ ಸೊಳ್ಳೆಯ ಸಂತಾನೋತ್ಪತ್ತಿಗೆ ಅನುಕೂಲಕರ ಸ್ಥಿತಿ ಉಂಟಾಗುತ್ತದೆ. ಇಡೀ ಗೇರು ಮರಕ್ಕೆ ವ್ಯಾಪಿಸುವ ಈ ಸೊಳ್ಳೆಯು ಹೂವಿನ ಕಾಂಡದ ರಸ ಹೀರುತ್ತದೆ. ಸಾಮಾನ್ಯವಾಗಿ ಗೇರು ಬಲಿತು ಹಣ್ಣಾದಾಗ ಹಣ್ಣು ತಿನ್ನಲು ಈ ಟಿ-ಸೊಳ್ಳೆ ಬರುತ್ತವೆ. ಆದರೆ ಈ ಬಾರಿ ಹಿಂಡು ಹಿಂಡಾಗಿ ಗೇರು ತೋಟಗಳಿಗೆ ಲಗ್ಗೆ ಇಟ್ಟ ಟಿ-ಸೊಳ್ಳೆಗಳು ಅಳಿದುಳಿದ ಗೇರು ಹೂವಿನ ಮಕರಂದ, ಕಾಡದ ರಸ ಹೀರಿದ್ದರಿಂದ ಈಗಾಗಲೇ ಬಹುತೇಕ ಕಡೆ ಹೂಗೊಂಚಲು ಬಾಡಿದೆ. ಟಿ ಸೊಳ್ಳೆ ನಿಯಂತ್ರಣಕ್ಕೆ ಸಿಗದಷ್ಟು ವ್ಯಾಪಿಸಿದ್ದರಿಂದ ಪುತ್ತೂರಿನ ಗೇರು ಸಂಶೋಧನಾ ಕೇಂದ್ರದ ಅಧಿಕಾರಿಗಳಿಗೂ ತಲೆನೋವಾಗಿದೆ. ಔಷಧಿಯಾಗಿ ಬಳಕೆಯಾಗುತ್ತಿದ್ದ ಮೊನೋಪೊಟಸ್‌ಗಿಂತಲೂ ಕರಾಟೆ ಎಂಬ ಔಷಧ ಬಳಕೆಗೆ ಗೇರು ಕೃಷಿಕರು ಇಂದು ಆಸಕ್ತಿ ತೋರುತ್ತಿದ್ದಾರೆ. 100 ಲೀ. ನೀರಿಗೆ 125 ಮಿಲಿ ಕರಾಟೆ ಔಷಧದ ಬಳಕೆ ಹಾಗೂ ಇದರ ಜತೆಗೆ 15;15;15 ಎನ್ನುವ ಔಷಧಿಯನ್ನು 100 ಲೀ.ಗೆ ಅರ್ಧ ಕೆ.ಜಿ.ಯಂತೆ ಬಳಕೆ ಮಾಡಿದರೆ ಟಿ-ಸೊಳ್ಳೆ ಕಾಟವನ್ನು ಸ್ವಲ್ಪಮಟ್ಟಿಗೆ ತಪ್ಪಿಸಬಹುದು. ಆದರೆ ಹಲವು ಬಾರಿ ಔಷಧ ಸಿಂಪಡಿಸಿದ್ದರೂ ಟಿ-ಸೊಳ್ಳೆ ನಿಯಂತ್ರಣಕ್ಕೆ ಬರುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

    ನಲುಗಿದ ಮಾವು
    ಕರಾವಳಿಗೆ ಕಳೆದ ಜೂನ್‌ನಲ್ಲಿ ಬೀಳಬೇಕಿದ್ದ ಮುಂಗಾರು 1 ತಿಂಗಳು ತಡವಾಗಿ ಬಂದಿದೆ. ನವೆಂಬರ್ ವೇಳೆ ಒಣ ಬಿಸಿಲಾಗುವಲ್ಲಿ ಮಳೆಯೇ ಅಬ್ಬರಿಸಿದೆ. ನವೆಂಬರ್ ಮಾವು ಹೂ ಚಿಗುರುವ ಸಮಯ. ಆದರೆ, ಮಳೆ ಬಂದರೆ ಮಾವಿನ ಎಲೆ ಬಲಿಷ್ಠವಾಗುವುದೇ ವಿನಾ ಹೂ ಬಿಡಲು ಯೋಗ್ಯ ವಾತಾವರಣ ಇರುವುದಿಲ್ಲ. ಈ ಬಾರಿ ಜನವರಿಯಲ್ಲಿ ಮಾವು ಹೂ ಬಿಟ್ಟರೂ ತಂಪಾದ ವಾತಾವರಣದ ಕೊರತೆ ಇರುವುದರಿಂದ ಹೂ ಬೆಳೆದಿಲ್ಲ. ಇದರಿಂದ ಕರಾವಳಿ ಮಾರುಕಟ್ಟೆಯಲ್ಲಿ ಈ ಬಾರಿ ಈ ನೆಲದ ಮಾವಿನ ಹಣ್ಣಿನ ಘಮಘಮ ಪರಿಮಳ ಕಡಿಮೆ. ಮಹಾರಾಷ್ಟ್ರದ ಅಲ್ಫೋನ್ಸಾ, ಉತ್ತರಪ್ರದೇಶದ ದಸೆರಿ, ಚೌನ್ಸ, ಲಂಗ್ರ, ಗುಜರಾತ್‌ನ ಕೇಸರ್, ತಮಿಳುನಾಡಿನ ಮುಲ್ಗಾಭ, ಪಶ್ಚಿಮ ಬಂಗಾಳದ ಹಿಮಸಾಗರ್, ಆಂಧ್ರದ ಬೈಗಾನ್‌ಪಲ್ಲಿ ತಳಿಗಳು ಕರಾವಳಿಯ ಮಾರುಕಟ್ಟೆ ಪ್ರವೇಸುವ ಸಾಧ್ಯತೆಯೇ ಅಧಿಕ.

    ಹೂವಿನಿಂದ ಬೀಜವಾಗಲು 60 ದಿನ
    ಸಾಮಾನ್ಯವಾಗಿ ಗೇರು ಹೂವಿನಿಂದ ಬೀಜವಾಗಲು 60 ದಿನ ಬೇಕಾಗುತ್ತದೆ. ಆದರೆ ಬಿಸಿಯ ವಾತಾವರಣ ಬಂದಂತೆ 40 ದಿನಗಳಲ್ಲೂ ಬೀಜವಾಗುತ್ತದೆ. ಮಾವು ಹೂವಿನಿಂದ ಹಣ್ಣಾಗಲು 50-55 ದಿನ ಬೇಕು. ಕಡಿಮೆ ಇಳುವರಿ ಮತ್ತು ಬೇಡಿಕೆ ಹೆಚ್ಚುತ್ತಿರುವ ಕಾರಣ ಗೇರು ಬೀಜ ಹಾಗೂ ಮಾವಿನ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ.

    ಈ ಬಾರಿ ಹವಾಮಾನ ವೈಪರೀತ್ಯದಿಂದ ಹಿಂದೆಂದೂ ಕಾಣದ ರೀತಿ ಗೇರು ಇಳುವರಿ ಕೊರತೆಯಾಗಿದೆ. ಜತೆಗೆ ನಿಯಂತ್ರಣಕ್ಕೆ ಬಾರದ ಸ್ಥಿತಿಯಲ್ಲಿ ಟಿ-ಸೊಳ್ಳೆ ಕಾಟವಿದೆ. ಕರಾವಳಿಯಲ್ಲಿ ವಾರ್ಷಿಕ 60-70 ಸಾವಿರ ಟನ್ ಗೇರು ಬೆಳೆಯಾಗುವುದು ರೂಢಿ. ಆದರೆ ಈ ಬಾರಿ ಇಳುವರಿ ಎಷ್ಟಿದೆ ಎಂಬುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ.
    ಡಾ.ಎಂ.ಜಿ.ನಾಯಕ್, ನಿರ್ದೇಶಕ, ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯ

    ಹವಾಮಾನದ ಏರಿಳಿತ ಮಾವು ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಬಾರಿ ಜನವರಿಯಲ್ಲಿ ಮಾವು ಹೂ ಬಿಟ್ಟರೂ ತಂಪಾದ ವಾತಾವರಣದ ಕೊರತೆ ಇರುವುದರಿಂದ ಹೂ ಬಲಿಷ್ಠವಾಗಿ ಬೆಳೆದಿಲ್ಲ.
    ನಿಧೀಶ್, ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts