More

    ಮಂಗಳೂರು ಭೂಗತ ತೈಲಾಗಾರ ಖಾಲಿ

    ವೇಣುವಿನೋದ್ ಕೆ.ಎಸ್. ಮಂಗಳೂರು

    ದೇಶದಲ್ಲಿರುವ ಭೂಗತ ತೈಲ ಸಂಗ್ರಹಣಾಗಾರಗಳು ಮೂರು. ಅದರಲ್ಲಿ ಎರಡು ಕರ್ನಾಟಕದ ಕರಾವಳಿಯಲ್ಲೇ ಇವೆ. ಒಂದು ಮಂಗಳೂರು, ಇನ್ನೊಂದು ಉಡುಪಿಯ ಪಾದೂರು. ಮಂಗಳೂರಿನ ಎರಡೂ ಭೂಗತ ಸುರಂಗದಲ್ಲಿದ್ದ ತೈಲ ಸದ್ಯ ಖಾಲಿಯಾಗಿದೆ!

    ಒಪೆಕ್ ರಾಷ್ಟ್ರಗಳು ಕಡಿಮೆ ತೈಲೋತ್ಪಾದನೆ ಮಾಡುತ್ತಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ, ಆ ಮೂಲಕ ಕಚ್ಚಾತೈಲದ ದರವನ್ನು ತಗ್ಗಿಸುವ ಪ್ರಯತ್ನವಾಗಿ ಅಮೆರಿಕ 5 ಕೋಟಿ ಬ್ಯಾರೆಲ್, ಭಾರತ 50 ಲಕ್ಷ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ಬಿಡುವುದಾಗಿ ತಿಳಿಸಿದ್ದವು. ತನ್ನ ಮೂರು ತೈಲಾಗಾರಗಳಲ್ಲಿರುವ ಪೆಟ್ರೋಲಿಯಂ ತೈಲವನ್ನು ಬಳಸಲು ಇಲ್ಲಿಗೆ ಕೊಳವೆ ಮೂಲಕ ಸಂಪರ್ಕ ಹೊಂದಿರುವ ಎಚ್‌ಪಿಸಿಎಲ್ ಹಾಗೂ ಎಂಆರ್‌ಪಿಎಲ್‌ಗಳಿಗೆ ಅನುಮತಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿತ್ತು.

    ಈ ಕುರಿತು ‘ವಿಜಯವಾಣಿ’ಗೆ ಲಭ್ಯವಾದ ಮಾಹಿತಿಯಂತೆ, ಮಂಗಳೂರಿನ ಪೆರ್ಮುದೆಯಲ್ಲಿರುವ ಐಎಸ್‌ಪಿಆರ್‌ಎಲ್ ನಿರ್ಮಿಸಿರುವ 1.5 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ಭೂಗತ ತೈಲಾಗಾರದಲ್ಲಿ ತೈಲದ ಸಂಗ್ರಹ ಇಲ್ಲ. ಇದ್ದ ತೈಲ ಸರ್ಕಾರ ನಿರ್ಧಾರ ಕೈಗೊಳ್ಳುವ ಮೊದಲೇ ಬಳಕೆಯಾಗಿದೆ. ಸರ್ಕಾರದ ಕೆಲ ತಿಂಗಳ ನಿರ್ಣಯದಂತೆಯೇ ಕಚ್ಚಾ ತೈಲವನ್ನು ಮಾರಾಟ ಮಾಡಲಾಗಿದೆ.

    ಎಂಆರ್‌ಪಿಎಲ್ ಅಗತ್ಯವಿರುವಾಗ ಈ ತೈಲವನ್ನು ಬಳಸಿಕೊಳ್ಳುತ್ತದೆ. ಇಲ್ಲಿ ತಲಾ 0.75 ಎಂಎಂಟಿ ಸಾಮರ್ಥ್ಯದ ಎರಡು ತೈಲ ಸುರಂಗಗಳಿದ್ದು, ಈ ಪೈಕಿ ಒಂದರಿಂದ ತೈಲವನ್ನು ಎಂಆರ್‌ಪಿಎಲ್ ಬಳಕೆ ಮಾಡಿದೆ. ಇನ್ನೊಂದರ ತೈಲವನ್ನು ಈಗಾಗಲೇ ರಿಲಯನ್ಸ್‌ಗೆ ಪೆಟ್ರೋಲಿಯಂ ಸಚಿವಾಲಯ ಮಾರಾಟ ಮಾಡಿದ್ದು, ಅವರು ಹಡಗಿನ ಮೂಲಕ ಸಾಗಾಟ ಮಾಡಿದ್ದಾರೆ.

    ಕಚ್ಚಾ ತೈಲ ಬೆಲೆ ಕನಿಷ್ಠ ಮಟ್ಟಕ್ಕೆ ಕುಸಿದ ಸಂದರ್ಭ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ತನ್ನ ತೈಲಾಗಾರಗಳಿಗೆ ಕಚ್ಚಾ ತೈಲ ಆಮದು ಮಾಡಿ ತುಂಬಿಸಿತ್ತು. ಮಂಗಳೂರಿಗೆ ಹಲವು ಪಾರ್ಸೆಲ್‌ಗಳಲ್ಲಿ ಕಂಟೈನರ್ ನೌಕೆಗಳ ಮೂಲಕ ಅಬುದಾಭಿಯಿಂದ ತೈಲ ಆಮದು ಮಾಡಿಕೊಳ್ಳಲಾಗಿತ್ತು. ಸರ್ಕಾರದಿಂದ ಎಂಆರ್‌ಪಿಎಲ್, ಎಚ್‌ಪಿಸಿಎಲ್ ಮತ್ತು ಖಾಸಗಿ ರಿಫೈನರಿಗಳಿಗೆ ತೈಲ ಮಾರಾಟ ಅಂತಾರಾಷ್ಟ್ರೀಯ ದರದಲ್ಲೇ ನಡೆದಿದೆ.

    ಪಾದೂರು ತೈಲ ಬಳಕೆ ಆದೇಶ ಬಂದಿಲ್ಲ: ಉಡುಪಿ ಜಿಲ್ಲೆಯ ಪಾದೂರಿನ ತೈಲಾಗಾರದಲ್ಲಿ 2.5 ಮಿಲಿಯನ್ ಮೆಟ್ರಿಕ್ ಟನ್ (0.625 ಎಂಎಂಟಿ ಸಾಮರ್ಥ್ಯದ ನಾಲ್ಕು ಸುರಂಗಗಳು) ತೈಲ ಸಂಗ್ರಹವಿದೆ. ಅದನ್ನು ಬಳಕೆ ಮಾಡುವುದಕ್ಕೆ ಸರ್ಕಾರದಿಂದ ಇದುವರೆಗೆ ಆದೇಶ ಬಂದಿಲ್ಲ ಎಂದು ಎಂಆರ್‌ಪಿಎಲ್ ಅಧಿಕಾರಿಗಳು ಹೇಳುತ್ತಾರೆ. ಕಚ್ಚಾ ತೈಲಗಳಲ್ಲಿ ಹಲವು ಗ್ರೇಡ್‌ಗಳಿವೆ. ಅದರಲ್ಲಿ ಕೆಲವು ಕಡಿಮೆ ಬೆಲೆಗೆ ಸಿಕ್ಕಿದರೂ ಆಯಾ ಸ್ಥಾವರಕ್ಕೆ ಹೊಂದಾಣಿಕೆಯಾಗುವುದಿಲ್ಲ. ಅವುಗಳನ್ನು ಸಂಸ್ಕರಣೆ ಮಾಡುವಾಗ ಲಾಭದ ಅಂಶ ಕಡಿಮೆ ಆಗುತ್ತದೆ. ಈ ಎಲ್ಲ ಅಂಶಗಳನ್ನೂ ರಿಫೈನರಿ ಗಣನೆಗೆ ತೆಗೆದುಕೊಳ್ಳುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

    ತೈಲಾಗಾರಗಳು ಭೋಗ್ಯಕ್ಕೆ: ದೇಶದ ಭೂಗತ ತೈಲಾಗಾರಗಳನ್ನು ಭೋಗ್ಯಕ್ಕೆ ನೀಡಲು ಈ ಹಿಂದೆಯೇ ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರಂತೆ ಮಂಗಳೂರಿನ ಭೂಗತ ತೈಲಾಗಾರದಲ್ಲಿರುವ ಎರಡರಲ್ಲಿ ಒಂದು ಸುರಂಗವನ್ನು ಎಂಆರ್‌ಪಿಎಲ್‌ಗೆ ಹಾಗೂ ಇನ್ನೊಂದನ್ನು ಅಬುದಾಭಿಯ ಆಡ್‌ನಾಕ್ ಕಂಪನಿಗೆ ಲೀಸ್‌ಗೆ ಕೊಡಲಾಗಿದೆ. ಪಾದೂರಿನ ಸುರಂಗಗಳ ಲೀಸ್ ವಿಚಾರ ಅಂತಿಮಗೊಂಡಿಲ್ಲ. ವಿಶಾಖಪಟ್ಟಣದ ತೈಲಾಗಾರವನ್ನು ಎಚ್‌ಪಿಸಿಎಲ್‌ಗೆ ಲೀಸ್‌ಗೆ ಕೊಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts