More

    ಕಾಮಗಾರಿ ನಿಂತ ಹಾಸ್ಟೆಲ್ ಕಟ್ಟಡಕ್ಕೆ ಹಣ ಪಾವತಿಸಿ ಮಂಗಳೂರು ವಿವಿಯಿಂದ ಗೋಲ್‌ಮಾಲ್!

    ಶ್ರವಣ್ ಕುಮಾರ್ ನಾಳ ಮಂಗಳೂರು
    ಹೆಸರಿಗೆ ಇದು ಅಂತಾರಾಷ್ಟ್ರೀಯ ಹಾಸ್ಟೆಲ್. ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಸ್ಥಗಿತಗೊಂಡು 5 ವರ್ಷ ಕಳೆದಿದ್ದು, ಪಾಳುಬಿದ್ದ ಈ ಹಾಸ್ಟೆಲ್ ಹೆಸರಲ್ಲಿ ಮಂಗಳೂರು ವಿಶ್ವವಿದ್ಯಾಲಯ ಕೋಟ್ಯಂತರ ರೂಪಾಯಿ ಪಾವತಿ ಮಾಡಿದೆ. ಕಾಮಗಾರಿ ಸ್ಥಗಿತಗೊಂಡ ಬಳಿಕವೂ ಗುತ್ತಿಗೆ ಪಡೆದ ಸಂಸ್ಥೆಗೆ ವಿವಿ ಹಣ ನೀಡಿರುವುದು ಅಕ್ರಮ ನಡೆದಿರುವ ಸಂಶಯಕ್ಕೆ ಕಾರಣವಾಗಿದೆ.

    ಕುಲಪತಿ ಪ್ರೊ.ಭೈರಪ್ಪ ಕಾಲಾವಧಿಯಲ್ಲಿ ಅಂದರೆ 2016ರಲ್ಲಿ ವಿದೇಶಿ ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ 53.7 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸಲು ಉದ್ದೇಶಿಸಲಾಗಿತ್ತು. 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತಹ ಅಂತಾರಾಷ್ಟ್ರೀಯ ಮಟ್ಟದ ಹಾಸ್ಟೆಲ್ ನಿರ್ಮಿಸುವ ಕಾಮಗಾರಿಯ ಗುತ್ತಿಗೆಯನ್ನು ಬೆಂಗಳೂರು ಸಹಕಾರ ನಗರದ ಬಿಎಸ್‌ಆರ್ ಇನ್ಫ್ರಾಟೆಕ್ ಇಂಡಿಯಾ ಲಿಮಿಟೆಡ್ ಸಂಸ್ಥೆ ವಹಿಸಿಕೊಂಡಿತ್ತು. ಮುಂದಿನ 2 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ, 2018ರ ವೇಳೆ ಗುತ್ತಿಗೆ ಸಂಸ್ಥೆಯು ಯೋಜಿತ ಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಿದೆ.

    7-8 ಕೋಟಿ ರೂ. ವೆಚ್ಚದ ಹಾಸ್ಟೆಲ್ ಕಾಮಗಾರಿ ನಡೆಸಿ ಸ್ಥಗಿತಗೊಳಿಸಿದ ಗುತ್ತಿಗೆ ಸಂಸ್ಥೆಗೆ ಮಂಗಳೂರು ವಿವಿ ಬರೋಬ್ಬರಿ ಒಟ್ಟು 36.8 ಕೋಟಿ ರೂ. ಹಣ ಪಾವತಿಸಿದ್ದರ ಬಗ್ಗೆ ‘ವಿಜಯವಾಣಿ’ಗೆ ಅಧಿಕೃತ ದಾಖಲೆ ಲಭ್ಯವಾಗಿದೆ.

    ಏನಿದು ಅಂತಾರಾಷ್ಟ್ರೀಯ ಹಾಸ್ಟೆಲ್?

    ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ‘ಕಲ್ಚರಲ್ ಎಕ್ಸ್‌ಚೇಂಜ್ ಪ್ರೋಗ್ರಾಂ’ ಪ್ರಾಯೋಜಕತ್ವದಡಿ ಭಾರತದ ವಿದ್ಯಾರ್ಥಿಗಳು ವಿದೇಶದಲ್ಲಿ, ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ಸಾಮಾಜಿಕ ಹಾಗೂ ಸಂಸ್ಕೃತಿಯ ಕುರಿತು, ಉನ್ನತ ಶಿಕ್ಷಣ ಹಾಗೂ ಸಂಶೋಧನೆ ನಡೆಸಲು ಅವಕಾಶ ನೀಡುವುದು ಪ್ರಮುಖ ಉದ್ದೇಶವಾಗಿತ್ತು. 2011ರಿಂದ ಭಾರತದ 2.75 ಲಕ್ಷ ವಿದ್ಯಾರ್ಥಿಗಳು ವಿದೇಶದಲ್ಲಿ, 3.21 ಲಕ್ಷ ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ನಡೆಸಿದ್ದಾರೆ.

    ಬಾಡಿಗೆ ಕಟ್ಟಡದಲ್ಲಿ ವಿದೇಶಿ ವಿದ್ಯಾರ್ಥಿಗಳ ವಾಸ!

    ಪ್ರಸ್ತುತ ಮಂಗಳೂರು ವಿವಿಯಲ್ಲಿ ಒಟ್ಟು 134 ವಿದೇಶಿ ವಿದ್ಯಾರ್ಥಿಗಳು ಈ ಯೋಜನೆಯಡಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಈ ವಿದೇಶಿ ವಿದ್ಯಾರ್ಥಿಗಳಿಗೆ ಸಮರ್ಪಕ ಹಾಸ್ಟೆಲ್ ಕೊರತೆಯಿಂದ ಕೊಣಾಜೆ, ದೇರಳಕಟ್ಟೆ ಸುತ್ತಮುತ್ತ ಬಾಡಿಗೆ ಕಟ್ಟಡದಲ್ಲಿ ವಾಸವಾಗಿದ್ದಾರೆ. ಶಿಕ್ಷಣ ಸಚಿವಾಲಯದ ಇಂಡಿಯನ್ ಕೌನ್ಸಿಲ್ ಆ್ ಸೋಶಿಯಲ್ ಸೈನ್ಸ್ ರಿಸರ್ಚ್(ಐಸಿಎಸ್‌ಎಸ್‌ಆರ್) ಅನುದಾನದಲ್ಲಿ ವಿದ್ಯಾರ್ಥಿಗಳ ವಸತಿ ವೆಚ್ಚ ನೀಡಲಾಗುತ್ತಿದೆ.

    ಸಿಂಡಿಕೇಟ್ ಸದಸ್ಯರ ಮೌನ

    ಕುಲಪತಿ ಪ್ರೊ.ಭೈರಪ್ಪ ನಿರ್ದೇಶನದಂತೆ ಹಾಸ್ಟೆಲ್ ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆಗೆ ಹಂತ ಹಂತವಾಗಿ ಹಣ ಪಾವತಿಸಲು ವಿವಿ ಸಿಂಡಿಕೇಟ್ ನಿರ್ಧರಿಸಿತ್ತು. ಅದರಂತೆ 2017ರ ಏ.7ರಂದು ಮೊದಲ ಹಂತದ 15.04 ಕೋಟಿ ರೂ., 2018ರ ಫೆ.5ರಂದು 4.03 ಕೋಟಿ ರೂ., 2018ರ ಏ.6ರಂದು 8.53 ಕೋಟಿ ರೂ. ಪಾವತಿಸಲಾಗಿತ್ತು. ಒಟ್ಟು 27.6 ಕೋಟಿ ರೂ. ಪಾವತಿಯಾಗಿದ್ದರೂ ಗುತ್ತಿಗೆ ಸಂಸ್ಥೆ ಕಾಮಗಾರಿ ಸ್ಥಗಿತಗೊಳಿಸಿದೆ. ನಂತರ ಪ್ರೊ.ಭೈರಪ್ಪ ಅವರ ಅಧಿಕಾರವಧಿಯೂ ಕೊನೆಗೊಂಡಿತ್ತು. ವಿವಿ ಹಾಗೂ ಗುತ್ತಿಗೆದಾರರ ನಡುವಿನ ಸಂಧಾನವೂ ವಿಫಲಗೊಂಡಿತ್ತು. ನಂತರ ಅಂದಿನ ಸಿಂಡಿಕೇಟ್ ಸದಸ್ಯರು 2-3 ಸಿಂಡಿಕೇಟ್ ಸಭೆಯಲ್ಲಿ ತನಿಖೆಗೆ ಆಗ್ರಹಿಸಿ ಸುಮ್ಮನಾದರು.

    ಸಿಂಡಿಕೇಟ್ ಸದಸ್ಯರು ವಿರೋಧಿಸಿದರೂ ನಿರಂತರ ಪಾವತಿ

    ಪ್ರೊ.ಬೈರಪ್ಪರ ನಂತರ 2019ರ ಜೂನ್ 6ರಂದು ಪ್ರೊ. ಪಿ.ಎಸ್.ಯಡಪಡಿತ್ತಾಯ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಕರೊನಾ, ಲಾಕ್‌ಡೌನ್ ಸಂದರ್ಭದಲ್ಲಿ ಅನುದಾನ ಕೊರತೆಯಿಂದ ವಿವಿ ಆರ್ಥಿಕವಾಗಿ ತತ್ತರಿಸಿತ್ತು. ಆದರೂ 2020ರ ಆ.25ರಂದು ಗುತ್ತಿಗೆ ಸಂಸ್ಥೆಗೆ 7.07 ಕೋಟಿ ರೂ. ವಿವಿ ಪಾವತಿಸಿದೆ. ಒಂದಿಬ್ಬರು ಸಿಂಡಿಕೇಟ್ ಸದಸ್ಯರು ಇದನ್ನು ವಿರೋಧಿಸಿದರೂ ಕುಲಪತಿ ಯಡಪಡಿತ್ತಾಯ ಮತ್ತೆ 2021ರ ಸೆ.9ರಂದು 2.13 ಕೋಟಿ ರೂ.ಗಳನ್ನು ಗುತ್ತಿಗೆ ಸಂಸ್ಥೆಗೆ ಪಾವತಿಸಿದ್ದಾರೆ.

    ವಿವಿ ಅಂತಾರಾಷ್ಟ್ರೀಯ ಹಾಸ್ಟೆಲ್ ಕಾಮಗಾರಿ ಪೂರ್ಣಗೊಳಿಸಲು ಈ ಹಿಂದೆ ಸಿಂಡಿಕೇಟ್ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳಲಾಗಿದೆ. ಗುತ್ತಿಗೆದಾರರಿಗೆ ಇಂತಿಷ್ಟು ಹಣ ಪಾವತಿಸಿರುವ ಬಗ್ಗೆಯೂ ಮಾಹಿತಿ ಇದೆ. ಸದ್ಯಕ್ಕೆ ನಾನು ಪ್ರಭಾರ ಹುದ್ದೆಯಲ್ಲಿರುವುದರಿಂದ ಸಮರ್ಪಕ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ.

    -ಜಯರಾಜ್ ಅಮೀನ್ ಕುಲಪತಿ (ಪ್ರಭಾರ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts