More

    ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಪೂರ್ಣ, ಎರಡೂ ಜಿಲ್ಲೆಗಳ ಶಾಲಾ ಆವರಣ ಸ್ಯಾನಿಟೈಸ್

    ಮಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಾಕಿಯಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮುಹೂರ್ತ ಕೂಡಿ ಬಂದಿದ್ದು, ಕರಾವಳಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಇಂದಿನಿಂದ ಜುಲೈ 3ವರೆಗೆ ಪರೀಕ್ಷೆ ನಡೆಯಲಿದ್ದು, ದ.ಕ.ಜಿಲ್ಲೆಯಲ್ಲಿ ಈ ಬಾರಿ 30,835 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಬಂಟ್ವಾಳದಲ್ಲಿ 17, ಬೆಳ್ತಂಗಡಿಯಲ್ಲಿ 13, ಮಂಗಳೂರು ಉತ್ತರ 21, ದಕ್ಷಿಣ 21, ಮೂಡುಬಿದಿರೆ 5, ಪುತ್ತೂರು 12 ಮತ್ತು ಸುಳ್ಯದಲ್ಲಿ 6 ಸೇರಿ ಒಟ್ಟು 95 ಪರೀಕ್ಷಾ ಕೇಂದ್ರಗಳಿವೆ. ಜ್ವರ, ಶೀತ ಮೊದಲಾದ ಆರೋಗ್ಯ ಸಮಸ್ಯೆಗಳಿರುವ ಮಕ್ಕಳಿಗಾಗಿ ಪ್ರತಿ ಕೇಂದ್ರದಲ್ಲಿ ಎರಡರಂತೆ ಹೆಚ್ಚುವರಿ ಕೊಠಡಿಗಳನ್ನು ಸಿದ್ಧಪಡಿಸಿಡಲಾಗಿದೆ. ಪ್ರತಿ ತರಗತಿ ಕೋಣೆಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ.

    ಆಯಾ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯ ಗ್ರಾಪಂ, ನಗರಸಭೆ, ಪುರಸಭೆ, ಮಹಾನರ ಪಾಲಿಕೆಯಂತಹ ಸ್ಥಳೀಯಾಡಳಿತ ಸಂಸ್ಥೆಗಳ ವತಿಯಿಂದ ಪರೀಕ್ಷೆ ನಡೆಯುವ ಕೊಠಡಿ, ಶಾಲಾ ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದೆ. ಶಾಲೆಗೆ ಬರುವ ಮಕ್ಕಳ ಕೈಗಳನ್ನು ಮೊದಲು ಸ್ಯಾನಿಟೈಸ್ ಮಾಡಿ, ಬಳಿಕ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಮಾಸ್ಕ್ ವಿತರಿಸಲು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ ನಡೆಸಲಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಪ್ರತಿನಿಧಿಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಅಂತರ ಕಾಯ್ದುಕೊಂಡು ನಿಲ್ಲಲು ನೆರವಾಗುವಂತೆ ಗುರುತು ಮಾಡಲಾಗಿದೆ. ಮೊದಲ ದಿನ ದ್ವಿತೀಯ ಭಾಷೆ (ಇಂಗ್ಲಿಷ್ ಮತ್ತು ಕನ್ನಡ) ಪರೀಕ್ಷೆ ನಡೆಯಲಿದೆ.

    ಗಡಿಭಾಗದಿಂದ ಬಸ್: ಕಾಸರಗೋಡು ಜಿಲ್ಲೆಯ 367ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಖಾಸಗಿ ಶಾಲೆಯವರು ತಮ್ಮ ಶಾಲಾ ಬಸ್‌ಗಳಲ್ಲಿ ಮಕ್ಕಳನ್ನು ಗಡಿಭಾಗದಿಂದ ಕರೆದುಕೊಂಡು ಬರಲಿದ್ದು, ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ 59 ಶಾಲಾ ಬಸ್‌ಗಳನ್ನು ಖಾಸಗಿಯವರಿಂದ ಜಿಲ್ಲಾಡಳಿತ ಪಡೆದುಕೊಂಡಿದೆ.

    ಆತಂಕ ಅನಗತ್ಯ, ಪರೀಕ್ಷಾ ಕೊಠಡಿ ಸೇಫ್
    ಉಡುಪಿ ಡಿಸಿ ಮಾಹಿತಿ
    ಉಡುಪಿ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆಮಾಡಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಬುಧವಾರ ವಳಕಾಡು ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಪರೀಕ್ಷೆ ಸುರಕ್ಷಿತವಾಗಿ ನಡೆಸಲು ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಅಗತ್ಯ ಸೂಚನೆ ನೀಡಲಾಗಿದೆ. ಕಂಟೇನ್ಮೆಂಟ್ ರೆನ್‌ನಿಂದ ಬರುವ 4 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಕ್ವಾರಂಟೈನ್‌ಗೆ ಬಳಸಿರುವ ಶಾಲೆಗಳನ್ನು ಸಂಪೂರ್ಣ ಸ್ಯಾನಿಟೈಸೇಷನ್ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯ ಬಸ್ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು 10 ಪರೀಕ್ಷಾ ಕೇಂದ್ರಗಳನ್ನು ಹೆಚ್ಚುವರಿಯಾಗಿ ಗುರುತಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಎಲ್ಲ್ಲ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಶೀಲಿಸಿ ಪ್ರವೇಶ ನೀಡಲಾಗುವುದು, ಜ್ವರದ ಲಕ್ಷಣಗಳಿದ್ದ ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಹೀಗಾಗಿ ಪಾಲಕರು ಮತ್ತು ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಇಂದಿನಿಂದ ನಿಷೇಧಾಜ್ಞೆ
    ಉಡುಪಿ: ಜಿಲ್ಲೆಯಲ್ಲಿ ಜೂ.25ರಿಂದ ಜುಲೈ 4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದೆ. ಈ ಪರೀಕ್ಷೆಗಳನ್ನು ಸುಸೂತ್ರ, ಪಾರದರ್ಶಕ ಹಾಗೂ ಶಾಂತಿಯುತವಾಗಿ ನಡೆಸಲು ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ವಲಯವೆಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಘೋಷಿಸಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts