More

    ಸಾವಿರಕ್ಕೇರಿದ ಸೋಂಕಿತರ ಸಂಖ್ಯೆ, ದ.ಕ.ದಲ್ಲಿ ಇನ್ನೊಂದು ಸಾವು, ಒಂದೇ ದಿನ 97 ಮಂದಿಗೆ ಕರೊನಾ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 97 ಜನರಲ್ಲಿ ಕೋವಿಡ್- 19 ಸೋಂಕು ದೃಢಪಟ್ಟಿದ್ದು, ಓರ್ವ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಒಟ್ಟು ಪಾಸಿಟಿವ್ ಸಂಖ್ಯೆಯೂ ಸಾವಿರದ ಗಡಿ ದಾಟಿ 1010ಕ್ಕೆ ತಲುಪಿದೆ. ಇದರಲ್ಲಿ 503 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

    ಶುಕ್ರವಾರ ಮೃತಪಟ್ಟವರು ಮಡಿಕೇರಿ ಮೂಲದ 47 ವರ್ಷದ ವ್ಯಕ್ತಿ. ಖಾಸಗಿ ಆಸ್ಪತ್ರೆಯಿಂದ ಗಂಭೀರ ಸ್ಥಿತಿಯಲ್ಲಿ ಗುರುವಾರ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾಯಂಕಾಲ ಮೃತಪಟ್ಟಿದ್ದಾರೆ. ಇವರು ಸಕ್ಕರೆ ಕಾಯಿಲೆ, ಬಹುವಿಧ ಅಂಗ ವೈಫಲ್ಯ, ಮೆದೋಜಿಕರದ ಉರಿಯೂತ, ಮೂತ್ರಪಿಂಡದ ವೈಫಲ್ಯ ಮತ್ತಿತರ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

    ಸೋಂಕು ದೃಢಪಟ್ಟ 97 ಮಂದಿಯಲ್ಲಿ ಮೂವರು ವಿದೇಶಗಳಿಂದ ಬಂದವರು. 28 ಮಂದಿ ಐಎಲ್‌ಐ, 12 ಮಂದಿಯ ಸಂಪರ್ಕ ಶೋಧ ಮುಂದುವರಿಕೆ, 28 ಮಂದಿ ರ‌್ಯಾಂಡಮ್ ಮಾದರಿಯಲ್ಲಿ ಪತ್ತೆಯಾದ ಪ್ರಕರಣ ಮತ್ತು 25 ಮಂದಿ ಪ್ರಾಥಮಿಕ ಸಂಪರ್ಕ ಉಳ್ಳವರು. ಸೋಂಕಿತರಲ್ಲಿ 1 ವರ್ಷ, 2 ವರ್ಷದ ಹೆಣ್ಮಕ್ಕಳು, 5 ವರ್ಷ, 7 ವರ್ಷದ ಬಾಲಕ ಸೇರಿದ್ದಾರೆ.
    ಗಂಭೀರ ಸ್ಥಿತಿಯಲ್ಲಿ ಐವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾಗಿ 26 ಮಂದಿ ಬಿಡುಗಡೆಯಾಗಿದ್ದಾರೆ.

    ವೈದ್ಯರ ಕುಟುಂಬದ ನಾಲ್ವರಿಗೆ ಪಾಸಿಟಿವ್
    ಬಂಟ್ವಾಳ: ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಆರು ಮಂದಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ.
    ಕೆಲದಿನಗಳ ಹಿಂದೆ ಪಾಸಿಟಿವ್ ಬಂದಿದ್ದ ಬಿ.ಸಿ.ರೋಡ್ ಕೈಕಂಬ ಸಮೀಪದ ವೈದ್ಯರ ಕುಟುಂಬದ ನಾಲ್ವರು, ಮಂಗಳೂರಿನ ದಕ್ಕೆಯಲ್ಲಿ ಕೆಲಸ ಮಾಡುತ್ತಿದ್ದ ಫರಂಗಿಪೇಟೆಯ ಯುವಕ, ಪತ್ರಿಕಾ ವಿತರಕರಾಗಿರುವ ಬಂಟ್ವಾಳ ಪೇಟೆಯ ನಿವಾಸಿ ಸೋಂಕಿತರು. ಶುಕ್ರವಾರ ಬಂಟ್ವಾಳ ಪರಿಸರದಲ್ಲಿ ಪತ್ರಿಕೆಗಳ ವಿತರಣೆ ನಡೆದಿಲ್ಲ. ಅಕ್ಕಪಕ್ಕದ ಅಂಗಡಿಗಳನ್ನೂ ಮುಚ್ಚಲಾಗಿದೆ. ಸಂಪರ್ಕದಲ್ಲಿ ಇದ್ದವರಿಗೆ ಹೋಂ ಕ್ವಾರಂಟೈನ್ ಸೂಚಿಸಲಾಗಿದೆ.

    ತಾಪಂ ಕಚೇರಿಗೆ ನಿರ್ಬಂಧ: ಬಂಟ್ವಾಳ ತಾಪಂ ಕಚೇರಿಗೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಕಚೇರಿ ಕಾರ್ಯಾಚರಿಸುತ್ತಿದೆ.

    ಪುಣಚದ ಮಹಿಳೆಗೆ ಪಾಸಿಟಿವ್
    ಪುತ್ತೂರು: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಬಳಿಕ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪುಣಚ ಎಂಬಲ್ಲಿನ ಮಹಿಳೆಗೆ ಸೋಂಕು ದೃಢಪಟ್ಟಿದೆ.

    ಕೊಲ ಆಸ್ಪತ್ರೆ ಸೀಲ್‌ಡೌನ್
    ಕಡಬ: ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ, ಹೊಸ್ಮಠ ನಿವಾಸಿಗೆ ಕೋವಿಡ್-19 ದೃಢಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 3 ದಿನ ಸೀಲ್‌ಡೌನ್ ಮಾಡಲಾಗಿದೆ. ಆಸ್ಪತ್ರೆಯ ವೈದ್ಯಾಧಿಕಾರಿ ಸಹಿತ 11 ಸಿಬ್ಬಂದಿಯನ್ನು ಆಸ್ಪತ್ರೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ.

    ಗ್ರಾಪಂನ ಇಬ್ಬರು ಸಿಬ್ಬಂದಿಗೆ ಪಾಸಿಟಿವ್, ಉಡುಪಿ ಜಿಲ್ಲೆಯಲ್ಲಿ 16 ಪಾಸಿಟಿವ್
    ಉಡುಪಿ: ಜಿಲ್ಲೆಯಲ್ಲಿ ಪಿಡಿಒ ಸಹಿತ ಇಬ್ಬರು ಪಂಚಾಯಿತಿ ಸಿಬ್ಬಂದಿಗೆ ಕರೊನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎರಡು ಗ್ರಾಪಂ ಕಚೇರಿಗಳನ್ನು 48 ಗಂಟೆ ಕಾಲ ಸೀಲ್‌ಡೌನ್ ಮಾಡಲಾಗಿದೆ. ಕಾರ್ಕಳ ತಾಲೂಕಿನ ಪಿಡಿಒ ಒಬ್ಬರಿಗೆ ಮತ್ತು ಬೈಂದೂರು ತಾಲೂಕಿನ ಪಂಚಾಯಿತಿಯೊಂದರ ಕಂಪ್ಯೂಟರ್ ಆಪರೇಟರ್ ಸೋಂಕಿತರು. ಇವರು ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಈ ವೇಳೆ ಸೋಂಕು ತಗುಲಿರುವ ಶಂಕೆಯಿದೆ. ಕಾರ್ಕಳದ ಸೋಂಕಿತ ಮಹಿಳೆಗೆ ಹೆರಿಗೆ ವೇಳೆ ಮಗು ಮೃತಪಟ್ಟಿದ್ದು, ಈ ಮಗುವಿನ ಕರೊನಾ ಪರೀಕ್ಷೆ ವರದಿ ನೆಗಟಿವ್ ಬಂದಿದೆ. ಈಗ ಮಹಿಳೆಗೂ ನೆಗೆಟಿವ್ ವರದಿ ಬಂದಿದ್ದು, ಬಿಡುಗಡೆಯಾಗಿದ್ದಾರೆ.

    16 ಪಾಸಿಟಿವ್: ಶುಕ್ರವಾರ ಉಡುಪಿಯ 9, ಕುಂದಾಪುರದ 4, ಕಾರ್ಕಳದ 3 ಸಹಿತ 16 ಮಂದಿಗೆ ಕರೊನಾ ದೃಢಪಟ್ಟಿದೆ. ಇದರಲ್ಲಿ ಹೊರಜಿಲ್ಲೆಗಳಿಂದ ಬಂದವರು ಮೂವರು. ಪ್ರಾಥಮಿಕ ಸಂಪರ್ಕದಿಂದ 9 ಪಾಸಿಟಿವ್ ಬಂದಿದೆ. 14 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 1258ಕ್ಕೆ ಏರಿಕೆಯಾಗಿದೆ. 151 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಮಾದರಿ ಸಂಗ್ರಹ ಹೆಚ್ಚಳ: ಹಾಟ್‌ಸ್ಪಾಟ್ ಪ್ರದೇಶಗಳಿಂದ ಆಗಮಿಸಿದ 808 ಮಂದಿ, ಉಸಿರಾಟ ಸಮಸ್ಯೆ 5, ಕೋವಿಡ್ ಸೋಂಕಿತರ ಸಂಪರ್ಕ ಒಳಪಟ್ಟ 25 ಮಂದಿ, ಇಲ್‌ನೆಸ್‌ಗೆ ಸಂಬಂಧಿಸಿ 29 ಮಂದಿ, ಕೋವಿಡ್ ಶಂಕಿತ ಒಬ್ಬರು ಸೇರಿದಂತೆ 868 ಮಂದಿಯ ಮಾದರಿ ಶುಕ್ರವಾರ ಸಂಗ್ರಹಿಸಲಾಗಿದೆ. 1417 ವರದಿ ಬರಲು ಬಾಕಿ ಇದೆ.

    ಕಾಸರಗೋಡಿನ 7 ಮಂದಿಗೆ ಸೋಂಕು
    ಕಾಸರಗೋಡು: ಜಿಲ್ಲೆಯ 7 ಮಂದಿ ಸಹಿತ ಕೇರಳದಲ್ಲಿ ಶುಕ್ರವಾರ 211 ಮಂದಿಯಲ್ಲಿ ಕೋವಿಡ್-19 ಕಾಣಿಸಿಕೊಂಡಿದೆ. ಈ ನಡುವೆ, ಕಾಸರಗೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ವಠಾರದ ವಸತಿಗೃಹದಲ್ಲಿ ಕ್ವಾರಂಟೈನ್‌ನಲ್ಲಿದ್ದಾಗ ಮೃತಪಟ್ಟ ಉತ್ತರಪ್ರದೇಶ ಕನೌಜ್ ಜಿಲ್ಲೆಯ ನಿವಾಸಿ ಬಂಟಿ(23) ಎಂಬಾತನಿಗೆ ಸೋಂಕು ಇರಲಿಲ್ಲ ಎಂಬುದು ಪರೀಕ್ಷೆಯಿಂದ ಖಚಿತಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts