More

    ಏಕನಾಥೇಶ್ವರಿ, ಬರಗೇರಮ್ಮ ಸಿಡಿ ಸಂಪನ್ನ

    ಚಿತ್ರದುರ್ಗ: ಕೋಟೆನಗರಿಯ ಅಧಿದೇವತೆ ಏಕನಾಥೇಶ್ವರಿ, ನಗರದೇವತೆ ಬರಗೇರಮ್ಮನ ಸಿಡಿ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ಜರುಗಿತು.

    ಸಿಡಿ ಕಂಬವನ್ನು ರೇಷ್ಮೆ ಸೀರೆಗಳಿಂದ ಅಲಂಕರಿಸಿದ ನಂತರ ಶಾಸ್ತ್ರ, ಸಂಪ್ರದಾಯದಂತೆ ಪೂಜಿಸಲಾಯಿತು. ಏಕನಾಥೇಶ್ವರಿ ದೇವಿ ಪಾದದ ಗುಡಿ ಹಾಗೂ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಯ ಮೂಲ ದೇಗುಲ ಮುಂಭಾಗದಲ್ಲಿ ಹರಕೆ ಹೊತ್ತ ಅನೇಕ ಭಕ್ತರನ್ನು ಸಿಡಿಕಂಬಕ್ಕೆ ಕಟ್ಟಿ ಮೂರು ಬಾರಿ ಸುತ್ತಿಸುವ ಮೂಲಕ ಸಿಡಿಯಾಡಿಸಲಾಯಿತು. ಈ ವೇಳೆ ನೆರೆದಿದ್ದ ಭಕ್ತರಿಂದ ಉಧೋ ಉಧೋ ಹರ್ಷೋದ್ಗಾರ ಮೊಳಗಿತು.

    ಸಿಡಿಯಾಡುವ ಮುನ್ನ ದೇವಿಯ ಉತ್ಸವ ಮೂರ್ತಿಗಳಿಗೆ ಭಕ್ತಿ ಸಮರ್ಪಿಸಿ, ಪ್ರದಕ್ಷಿಣೆ ಹಾಕಿ, ಪೂಜೆ ಸಲ್ಲಿಸಿದ ಬಳಿಕ ಸಿಡಿ ಕಂಬದ ಬಳಿ ಸಿಡಿಯಾಡಲು ಸಜ್ಜಾಗಿದ್ದ ಒಬ್ಬೊಬ್ಬರನ್ನೇ ಕರೆತರಲಾಯಿತು.

    ಕಳೆದೆರಡು ವರ್ಷ ಅಕ್ಕ-ತಂಗಿಯರಾದ ಈ ಶಕ್ತಿದೇವತೆಗಳ ಸಿಡಿ ಮಹೋತ್ಸವವನ್ನು ಸಾಂಕೇತಿಕವಾಗಿ ಆಚರಿಸಲಾಗಿತ್ತು. ಆದರೂ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಕ್ಷೀಣಿಸಿರಲಿಲ್ಲ. ಈ ಬಾರಿ ಸಿಡಿಯಾಡಿಸಿದ್ದರಿಂದ ಎಂದಿನಂತೆ ಕಳೆಗಟ್ಟಿತ್ತು. ಭಕ್ತರ ಉತ್ಸಾಹವೂ ಇಮ್ಮಡಿಗೊಂಡಿತು. ಇತರೆ ಭಕ್ತರು ಕೂಡ ಕಂಬಕ್ಕೆ ಪ್ರದಕ್ಷಿಣೆ ಹಾಕಿ ಭಕ್ತಿಯಲ್ಲಿ ಮಿಂದೆದ್ದರು.

    ಸಿಡಿ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಅಭಿಷೇಕ ಸೇರಿ ಇತರೆ ಪೂಜಾ ಕೈಂಕರ್ಯಗಳು ನೆರವೇರಿದವು. ಬೃಹತ್ ಹೂವಿನ ಹಾರಗಳಿಂದಲೇ ದೇವಿಯರ ಮೂರ್ತಿಗಳನ್ನು ಭಕ್ತರ ಕಣ್ಮನ ಸೆಳೆಯುವಂತೆ ಅರ್ಚಕರು ಅಲಂಕರಿಸಿದ್ದರು. ದೇಗುಲ ಕೂಡ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿತು.

    ನಗರ ಸೇರಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಗ್ರಾಮಸ್ಥರು ದೇವಿಯ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ದರ್ಶನಕ್ಕಾಗಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಮೀಸಲು ಸಮರ್ಪಿಸಿ, ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿಕೊಂಡರು. ಪುಟಾಣಿಗಳನ್ನು ದೇವಿಗೆ ಮುಟ್ಟಿಸಿ ಆಶೀರ್ವಾದ ಪಡೆದರು. ನೆರೆದಿದ್ದ ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.

    ಏಕನಾಥೇಶ್ವರಿ ದೇವಿಗೆ ಪೂಜೆ: ಸಿಡಿಯಾದ ನಂತರ ಉಚ್ಚಂಗಿಯಲ್ಲಮ್ಮ ದೇಗುಲ, ದೊಡ್ಡಪೇಟೆ, ಉಜ್ಜಯನಿ ಮಠ, ಕೂಡಲೀ ಶೃಂಗೇರಿ ಮಹಾಸಂಸ್ಥಾನದ ಶಾಖಾ ಮಠ, ಜೋಗಿಮಟ್ಟಿ ರಸ್ತೆ, ಪ್ರಶಾಂತನಗರ, ಸುಣ್ಣದ ಗುಮ್ಮಿ, ಜಟ್‌ಪಟ್‌ನಗರ, ಫಿಲ್ಟರ್ ಹೌಸ್ ರಸ್ತೆ, ಕೋಟೆ ಮಾರ್ಗದ ಭಕ್ತರಿಂದ ಇಡೀ ರಾತ್ರಿ ಏಕನಾಥೇಶ್ವರಿ ದೇವಿಗೆ ಪೂಜೆ, ಮಹಾಮಂಗಳಾರತಿ ಸೇವೆ, ನಂತರ ಪ್ರಸಾದ ವಿತರಿಸಲಾಯಿತು. ಮೇ 5ರಂದು ಮುಂಜಾನೆ ದೇವಿಯ ಗುಡಿತುಂಬುವ ಕಾರ್ಯ ಶಾಸ್ತ್ರೋಕ್ತವಾಗಿ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts