More

    ತುಂಬೆ ಡ್ಯಾಂ ರಕ್ಷಣೆಗೆ ಗೇಬಿಯನ್ ವಾಲ್, ಸ್ಮಾಟ್ ಸಿಟಿ ಯೋಜನೆ ಮೂಲಕ ತಡೆಗೋಡೆ ಕುಸಿತಕ್ಕೆ ಶಾಶ್ವತ ಪರಿಹಾರ

    ಶ್ರವಣ್ ಕುಮಾರ್ ನಾಳ ಮಂಗಳೂರು

    ಮಳೆಗಾಲ ಸೇರಿದಂತೆ ಹಲವು ಸಂದರ್ಭ ತುಂಬೆ ಡ್ಯಾಮ್ ಬಳಿ ತಡೆಗೋಡೆ ಕುಸಿತ ನಿರಂತರವಾಗಿ ನಡೆಯುತ್ತಿದ್ದು, ಸ್ಮಾಟ್ ಸಿಟಿ ಯೋಜನೆ ಮೂಲಕ ತಡೆಗೋಡೆ ಕುಸಿತಕ್ಕೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲು ಮಹಾನಗರ ಪಾಲಿಕೆ ತೀರ್ಮಾನಿಸಿದೆ. ತುಂಬೆ ಡ್ಯಾಂ ರಕ್ಷಣೆಗೆ ಗೇಬಿಯನ್ ವಾಲ್ ಮಾದರಿಯಲ್ಲಿ ತಡೆಗೋಡೆ ನಿರ್ಮಾಣಗೊಳ್ಳಲಿದೆ.

    ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಮ್‌ನ ಬಳಿ ನಾಲ್ಕು ವರ್ಷದ ಹಿಂದೆ ತಡೆಗೋಡೆ ಕುಸಿದ ಪರಿಣಾಮ ಇಡೀ ಪಂಪ್‌ಹೌಸ್ ಅಪಾಯ ಸ್ಥಿತಿಗೆ ತಲುಪಿತ್ತು. ಇದೀಗ ಸ್ಮಾಟ್ ಸಿಟಿ ಯೋಜನೆ ಅನುದಾನದಲ್ಲಿ ಗೇಬಿಯನ್ ವಾಲ್ ನಿರ್ಮಾಗೊಳ್ಳುತ್ತಿದೆ. ಪ್ರಸ್ತುತ ಕಾಮಗಾರಿ ಹಿನ್ನೆಲೆಯಲ್ಲಿ ಡ್ಯಾಮ್‌ನ ನೀರನ್ನು 6 ಮೀ.ನಿಂದ 4 ಮೀ.ಗೆ ಇಳಿಕೆ ಮಾಡಿಕೊಂಡು ಕಾಮಗಾರಿ ಪ್ರಗತಿಯಲ್ಲಿದೆ. ಡ್ಯಾಮ್‌ನಲ್ಲಿ ನೀರು ತುಂಬಿರುವುದರಿಂದ ಕಬ್ಬಿಣದ ಮೆಸ್, ಕಪ್ಪು ಕಲ್ಲು ಹಾಗೂ ದೊಡ್ಡ ಗಾತ್ರದ ಕಾಂಕ್ರೀಟ್ ತುಂಡುಗಳನ್ನು ಬಳಸಿಕೊಂಡು ಗೇಬಿಯನ್ ವಾಲ್ ಮಾದರಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ.

    2018ರಲ್ಲಿ ಮಣ್ಣು ಕುಸಿತ:

    ತುಂಬೆ ಡ್ಯಾಮ್‌ನ ಜಾಕ್‌ವೆಲ್ ಹಾಗೂ ಪಂಪ್‌ಹೌಸ್ ಇರುವ ಜಾಗದಿಂದ ಕೇವಲ 15-20 ಮೀಟರ್ ಅಂತರದಲ್ಲಿ 2018ರಲ್ಲಿ ತಡೆಗೋಡೆಯ ಮಣ್ಣು ಕುಸಿದು ಪಂಪ್‌ಹೌಸ್ ಅಪಾಯಕ್ಕೆ ಸಿಲುಕಿತ್ತು. ಹೀಗಾಗಿ ಮರಳಿನ ಚೀಲಗಳನ್ನು ಜೋಡಣೆ ಮಾಡಿ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿತ್ತು. ತಡೆಗೋಡೆ ಕುಸಿತ ಭಾಗಕ್ಕೆ ಹಲವು ಬಾರಿ ಸಚಿವರು-ಶಾಸಕರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನೂ ಮಾಡಿದ್ದು, ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಂದು ಸರ್ಕಾರಕ್ಕೆ 10 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದರೂ, ಅನುದಾನ ಬಿಡುಗಡೆಗೊಂಡಿರಲಿಲ್ಲ. ಜತೆಗೆ ಅಂದಿನ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಯಾವುದೇ ಕ್ಷಣದಲ್ಲಿ ತಡೆಗೋಡೆ ಮತ್ತೆ ಕುಸಿದರೆ ಇಡೀ ಪಂಪ್‌ಹೌಸ್ ನೀರುಪಾಲಾಗುವ ಅಪಾಯವೂ ಎದುರಾಗಿತ್ತು. ಹೀಗಾಗಿ ಅನಿವಾರ್ಯವಾಗಿ ತಡೆಗೋಡೆ ನಿರ್ಮಾಣಕ್ಕಾಗಿ ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

    ——————–

    ಏನಿದು ಗೇಬಿಯನ್ ವಾಲ್?

    ಅಣೆಕಟ್ಟು, ಹೆದ್ದಾರಿ, ರೈಲು ಮಾರ್ಗದ ಬದಿಯ ಗುಡ್ಡ ಕುಸಿತ ಉಂಟಾದರೆ ಆ ಭಾಗದಲ್ಲಿ ಮತ್ತೆ ಕುಸಿತವಾಗದಂತೆ ಈ ‘ಗೇಬಿಯನ್ ವಾಲ್’ಗಳನ್ನು ನಿರ್ಮಿಸುತ್ತಾರೆ. ಕಬ್ಬಿಣದ ಜಾಲರಿ ಮಾದರಿಯ ಬಾಕ್ಸ್‌ಗಳಲ್ಲಿ ಶಿಲೆಕಲ್ಲುಗಳನ್ನು ತುಂಬಿಸಿ ಒಂದರ ಮೇಲೆ ಒಂದರಂತೆ ಜೋಡಿಸಿ ಗೋಡೆ ನಿರ್ಮಿಸಲಾಗುತ್ತದೆ. ಗುಡ್ಡದ ಎತ್ತರಕ್ಕೆ ಅನುಗುಣವಾಗಿ ವಿವಿಧ ಹಂತಗಳಲ್ಲಿ ಕಟ್ಟಲಾಗುತ್ತದೆ. ಇವುಗಳ ಒಳಗಿನಿಂದ ನೀರು ಹರಿದು ಹೋಗಲು ಸಾಧ್ಯವಾಗುವುದರಿಂದ ಮತ್ತೆ ಜರಿದು ಬೀಳುವ ಸಾಧ್ಯತೆ ಕಡಿಮೆ.

    ———————–

    ನದಿ ಪಾತ್ರದ ರೈತರಿಗೆ ನಷ್ಟ

    ತುಂಬೆ ಡ್ಯಾಮ್‌ನಲ್ಲಿ ಪ್ರಸ್ತುತ ನೀರು ಕಡಿಮೆ ಮಾಡಿರುವ ಪರಿಣಾಮ ನದಿ ಪಾತ್ರದ ರೈತರಿಗೆ ಸಾಕಷ್ಟು ತೊಂದರೆಯಾಗಿದ್ದು, ರೈತರು ತಮ್ಮ ಪಂಪ್‌ಸೆಟ್‌ಗಳನ್ನು 6 ಮೀ. ನೀರು ಸಾಮರ್ಥ್ಯಕ್ಕೆ ಜೋಡಿಸಿದ್ದು, ಆದರೆ ಈಗ ಏಕಾಏಕಿ ನೀರು ಕಡಿಮೆ ಮಾಡಿರುವುದರಿಂದ ರೈತರ ಪಂಪುಗಳಿಗೆ ನೀರು ಸಿಗುತ್ತಿಲ್ಲ. ಮತ್ತೆ ಸಾವಿರಾರು ರೂ. ಖರ್ಚು ಮಾಡಿ ಜೋಡಣೆಯಲ್ಲಿ ವ್ಯತ್ಯಾಸ ಮಾಡಬೇಕಿದ್ದು, ಆಗ ಮತ್ತೆ 6 ಮೀ.ಗೆ ಏರಿಸಿದರೆ ರೈತರು ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಈಹಿನ್ನೆಲೆಯಲ್ಲಿ ಕಾಮಗಾರಿಯ ಮಧ್ಯೆ ನೀರಿನ ಮಟ್ಟವನ್ನು 6 ಮೀ.ಗೆ ಏರಿಸಲಾಗಿದೆ. ಪ್ರಸ್ತುತ ಉತ್ತಮ ಒಳಹರಿವು ಕಂಡುಬಂದಿದ್ದು, ಜೂನ್‌ವರೆಗೆ ಮಂಗಳೂರು ನಗರಕ್ಕೆ ನೀರಿನ ವ್ಯತ್ಯಯ ಕಂಡುಬರುವುದಿಲ್ಲ.

    —————-

    ತುಂಬೆ ಡ್ಯಾಮ್‌ನ ಜಾಕ್‌ವೆಲ್ ಹಾಗೂ ಪಂಪ್‌ಹೌಸ್ ಇರುವ ಜಾಗದಿಂದ ಕೇವಲ 15-20 ಮೀಟರ್ ಅಂತರದಲ್ಲಿ ತಡೆಗೋಡೆ ಕುಸಿದು ಬಿರುಕು ಬಿಟ್ಟಿದೆ. ಭವಿಷ್ಯತ್ತಿನಲ್ಲಿ ಡ್ಯಾಂಗೆ ತೊಂದರೆಯಾಗುವುದನ್ನು ತಪ್ಪಿಸಲು ಸ್ಮಾಟ್ ಸಿಟಿ ಯೋಜನೆಯ ಮೂಲಕ ತಡೆಗೋಡೆ ಕುಸಿತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ. ಗೇಬಿಯನ್ ವಾಲ್ ಮಾದರಿಯಲ್ಲಿ ತಡೆಗೋಡೆ ನಿರ್ಮಾಣಗೊಂಡಿದೆ.

    ಜಯಾನಂದ ಅಂಚನ್, ಮಂಗಳೂರು ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts