More

    ಸ್ಮಾರ್ಟ್ ಪೋಲ್ ಕಣ್ಗಾವಲು, 15 ಕಡೆ ಅಳವಡಿಕೆ, ಜನ-ಆಡಳಿತಕ್ಕೆ ಸಹಕಾರಿ

    ಭರತ್ ಶೆಟ್ಟಿಗಾರ್ ಮಂಗಳೂರು
    ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ನಗರದ ವಿವಿಧ ಕೇಂದ್ರ ಸ್ಥಳಗಳಲ್ಲಿ ದೈನಂದಿನ ಆಗುಹೋಗುಗಳ ಕುರಿತಂತೆ ಸಾರ್ವಜನಿಕರಿಗೆ ತ್ವರಿತ ಮಾಹಿತಿ ಹಾಗೂ ಸ್ಥಳದ ಮೇಳೆ ಹದ್ದಿನ ಕಣ್ಣು ಇಡುವ ನಿಟ್ಟಿನಲ್ಲಿ ವಿವಿಧ ಜಂಕ್ಷನ್‌ಗಳಲ್ಲಿ ಸ್ಮಾರ್ಟ್ ಪೋಲ್‌ಗಳನ್ನು ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ.
    ಮೊದಲ ಹಂತದಲ್ಲಿ 15 ಸ್ಮಾರ್ಟ್ ಪೋಲ್‌ಗಳು ಅಳವಡಿಕೆಯಾಗಲಿದ್ದು, ಎರಡನೇ ಹಂತದಲ್ಲಿ ಮತ್ತೆ 15 ಅಳವಡಿಕೆಯಾಗಲಿವೆ. ಅತ್ಯಾಧುನಿಕ ಕ್ಯಾಮರಾಗಳನ್ನೂ ಹೊಂದಿರುವ ಈ ಕಂಬಗಳು ರಾತ್ರಿ ವೇಳೆಯೂ ಚಲನವಲನಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುತ್ತವೆ. ವಿವಿಧ ಅಪರಾಧ ಕೃತ್ಯಗಳಲ್ಲಿ ಆರೋಪಿಗಳ ಪತ್ತೆಗೂ ಇದು ಸಹಕಾರಿ. ಒಂದು ಕಂಬ ಅಳವಡಿಕೆಗೆ ಅಂದಾಜು 5 ಲಕ್ಷ ರೂ. ವೆಚ್ಚ ಬೀಳುತ್ತದೆ. ವಿವಿಧ ಮಾದರಿ ಕಂಬ, ಕ್ಯಾಮರಾ ಅಳವಡಿಕೆಯಾಗುವುದರಿಂದ ವೆಚ್ಚ ಹೆಚ್ಚು-ಕಡಿಮೆಯಾಗಬಹುದು ಎನ್ನುತ್ತಾರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು.

    ಮಂಗಳೂರಿನಲ್ಲಿ ಎಲ್ಲೆಲ್ಲಿ ಅಳವಡಿಕೆ?
    ಸಂತ ಆ್ಯಗ್ನೆಸ್ ಕಾಲೇಜು ಜಂಕ್ಷನ್, ಲೋವರ್ ಬೆಂದೂರು, ಕಂಕನಾಡಿ, ಮಾರ್ಗನ್ಸ್‌ಗೇಟ್, ರಾವ್ ಆ್ಯಂಡ್ ರಾವ್ ಸರ್ಕಲ್, ಕದ್ರಿ ಸರ್ಕಿಟ್ ಹೌಸ್ ಬಳಿ, ಪಡೀಲ್, ಮಾರ್ನಮಿಕಟ್ಟೆ, ಲಾಲ್‌ಭಾಗ್‌ನಲ್ಲಿ ಸದ್ಯ ಅಳವಡಿಸಲು ಉದ್ದೇಶಿಸಲಾಗಿದೆ. ಕಾವೂರು, ಪದವಿನಂಗಡಿ, ಲೇಡಿಹಿಲ್, ಪಂಪ್‌ವೆಲ್‌ನಲ್ಲಿ ಕೆಲಸ ಆರಂಭಿಸಿದ್ದು, ಸ್ಮಾರ್ಟ್ ಕಂಬ ಅಳವಡಿಸಲಾಗಿದೆ. ಮಲ್ಲಿಕಟ್ಟೆಯಲ್ಲಿ ಈಗಾಗಲೇ ಅಳವಡಿಸಲಾಗಿದ್ದರೂ, ಡಿಸ್‌ಪ್ಲೇ ರಸ್ತೆ ಕಡೆಗೆ ಇಡುವ ಬದಲು ಒಳಗೆ ಅಳವಡಿಸಿದ್ದರಿಂದ ಸದ್ಯ ಕಾರ್ಯಾಚರಿಸುತ್ತಿಲ್ಲ. ಮಾಸಾಂತ್ಯದ ವೇಳೆಗೆ ಮತ್ತೆ ಕೆಲಸ ಆರಂಭಿಸಲಿದೆ. ಕೊಟ್ಟಾರ ಹಾಗೂ ವಾಮಂಜೂರಿನಲ್ಲಿ ಅಳವಡಿಸಲು ಉದ್ದೇಶಿಸಿದ್ದರೂ, ರಸ್ತೆ ಅಭಿವೃದ್ಧಿ ಕೆಲಸ ನಡೆಯಲಿರುವುದರಿಂದ ಅಂತಿಮ ನಿರ್ಧಾರ ಆಗಿಲ್ಲ. ಎರಡನೇ ಹಂತದಲ್ಲಿ ಸೇರ್ಪಡೆಯಾಗಬಹುದು ಎನ್ನುತ್ತಾರೆ ಅಧಿಕಾರಿಗಳು.

    ಕಂಬದ ವಿಶೇಷ, ಪ್ರಮುಖ ಮಾಹಿತಿ: ಪ್ರತಿ ಸ್ಮಾರ್ಟ್ ಪೋಲ್‌ನಲ್ಲೂ ಒಂದು 360 ಡಿಗ್ರಿ ಕ್ಯಾಮರಾ ಸಹಿತ ಮೂರು ಅಥವಾ ನಾಲ್ಕು ಕ್ಯಾಮರಾಗಳು ಇರಲಿವೆ. ಜತೆಗೆ ಸ್ಮಾರ್ಟ್ ಡಿಸ್‌ಪ್ಲೇಯಲ್ಲಿ ಸಾರ್ವಜನಿಕರಿಗೆ ವಿವಿಧ ಮಾಹಿತಿ ರವಾನೆಯಾಗುತ್ತದೆ. ಉದಾ: ಮಳೆ ಮಾಹಿತಿ, ದಿನದ ತಾಪಮಾನ, ಮಾಲಿನ್ಯ ಪ್ರಮಾಣ, ಯಾವ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದೆ ಇಂಥ ಪ್ರಮುಖ ಮಾಹಿತಿ ನೀಡಲಾಗುತ್ತದೆ. ತುರ್ತು ಸಂದರ್ಭ ಪೊಲೀಸ್ ಠಾಣೆ ಅಥವಾ ಸ್ಮಾರ್ಟ್ ಸಿಟಿ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ಗೆ ಮಾಹಿತಿ ರವಾನಿಸಲು ಎಮರ್ಜೆನ್ಸಿ ಪುಷ್ ಬಟನ್ ಸೌಲಭ್ಯವಿದೆ. ಮುಂದಿನ ದಿನಗಳಲ್ಲಿ 5ಜಿ ನೆಟ್‌ವರ್ಕ್ ಬರುವ ಸಾಧ್ಯತೆಯಿರುವುದರಿಂದ ರೆವೆನ್ಯೂ ಮಾಡೆಲ್ ಆಧಾರದಲ್ಲಿ ಆ್ಯಂಟನಾ ಅಳವಡಿಸಲು ಅವಕಾಶವಿದೆ. ಕಂಟ್ರೋಲ್ ಪ್ಯಾನಲ್, ವೈಫೈ ಕನೆಕ್ಟಿವಿಟಿಯನ್ನೂ ಒಳಗೊಂಡಿದೆ.

    ಮಂಗಳೂರು ನಗರ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 15 ಸ್ಮಾರ್ಟ್ ಪೋಲ್‌ಗಳ ಅಳವಡಿಕೆಯಾಗಲಿದ್ದು, ಈಗಾಗಲೇ ಕೆಲಸ ಆರಂಭವಾಗಿದೆ. ಇದು ಸ್ಮಾರ್ಟ್ ನಗರವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಕ್ರಿಯೆಯ ಒಂದು ಭಾಗವಾಗಿದ್ದು, ಆಡಳಿತ -ಸಾರ್ವಜನಿಕರಿಗೂ ಇದು ಸಹಕಾರಿಯಾಗಲಿದೆ.
    – ಅಕ್ಷಯ್ ಶ್ರೀಧರ್, ಸ್ಮಾಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts