More

    ಇಂದು ಕೇರಳಿಗರ ವಿಚಾರಣೆ

    ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿ.19ರಂದು ಮಂಗಳೂರಿನಲ್ಲಿ ಪ್ರತಿಭಟನೆ ಸಂದರ್ಭ ತಲೆದೋರಿದ್ದ ಹಿಂಸಾಚಾರದಲ್ಲಿ ಕೇರಳಿಗರು ಭಾಗವಹಿಸಿದ್ದರು ಎಂದು ತನಿಖೆ ವೇಳೆ ಲಭಿಸಿದ ಮಾಹಿತಿ ಮೇರೆಗೆ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಮಂಗಳೂರು ಪೊಲೀಸರು ಕೇರಳದ ಹಲವು ಮಂದಿಗೆ ನೋಟಿಸ್ ಜಾರಿ ಮಾಡಿದ್ದು, ಅವರು ಜ.20ರಂದು ವಿಚಾರಣೆ ಎದುರಿಸಲಿದ್ದಾರೆ.
    ಡಿ.19ರಂದು ಮುಂಜಾನೆಯಿಂದ ರಾತ್ರಿವರೆಗೆ ಮಂಗಳೂರಿನಲ್ಲಿ ಬೇರೆ ಬೇರೆ ಕಾರಣಕ್ಕೆ ಬಂದು ಹೋಗಿದ್ದ ಮಂಜೇಶ್ವರ, ಕುಂಜತ್ತೂರು, ಉಪ್ಪಳ, ಹೊಸಂಗಡಿ, ಕಾಸರಗೋಡು ಮೂಲದ ವಿದ್ಯಾರ್ಥಿಗಳು, ವೈದ್ಯರ ಭೇಟಿಗೆ ಆಗಮಿಸಿದವರು, ಬಂದರಿನ ಅಂಗಡಿಗಳಲ್ಲಿ ಕೆಲಸ ಮಾಡುವವರು, ಕೂಲಿಗಳು, ಹಳ್ಳಿಗಳಲ್ಲಿ ಮೀನು ಮಾರಾಟ ಮಾಡಲು ಮೀನುಗಾರಿಕೆ ಧಕ್ಕೆಗೆ ಖರೀದಿಗೆ ಬಂದ ವ್ಯಾಪಾರಿಗಳು, ಬ್ಯಾಂಕ್ ಮುಂತಾದ ಸಂಸ್ಥೆಗಳ ಉದ್ಯೋಗಿಗಳಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.

    ಏಕಾಏಕಿ ಪೊಲೀಸ್ ನೋಟಿಸ್ ಪಡೆದ ಮಂದಿ ಗಾಬರಿಗೊಂಡಿದ್ದಾರೆ. ಹಲವರು ಕೆಲಸ ಕಾರ್ಯ ಬಿಟ್ಟು ಪೊಲೀಸರ ಮುಂದೆ ಹಾಜರಾಗುವಂತಾಗಿದೆ. ಹೆಚ್ಚಿನವರು ತಮ್ಮದಲ್ಲದ ತಪ್ಪಿಗೆ ಕೆಲಸ ಕಾರ್ಯ ಬಿಟ್ಟು ಠಾಣೆಯ ಮುಂದೆ ಭಯದಿಂದ ಸಮಯ ಕಳೆಯುವಂತಾಗಿದೆ.

    ಹಾಜರಾಗದಿದ್ದರೆ ಕಾನೂನು ಕ್ರಮ
    ಈ ನೋಟಿಸ್‌ನಲ್ಲಿ ಕೊಲೆಯತ್ನ, ಅಕ್ರಮ ಕೂಟ, ಗಲಭೆಗೆ ಪ್ರಚೋದನೆ ಮುಂತಾದ ಗಂಭೀರ ಸೆಕ್ಷನ್‌ಗಳನ್ನು ನಮೂದಿಸಲಾಗಿದೆ. ಬಂದರು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯಲಿದ್ದು, ತನಿಖೆಗೆ ಹಾಜರಾಗದಿದ್ದರೆ ಅಥವಾ ಸಮರ್ಪಕ ಉತ್ತರ ನೀಡದೇ ಇದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ. ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಗಲಾಟೆ ದಿನ ಮಂಗಳೂರಿನಲ್ಲಿದ್ದ ಹಲವು ಮಂದಿ ಕೇರಳದವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದರಲ್ಲಿ ಬೇರೆ ಬೇರೆ ಉದ್ದೇಶಕ್ಕಾಗಿ ಬಂದ ಅನೇಕರು ಅಮಾಯಕರಿರಬಹುದು. ಆದರೆ ತನಿಖೆ ಉದ್ದೇಶದಿಂದ ವಿಚಾರಣೆ ನಡೆಸುವುದು ಅನಿವಾರ್ಯ. ಅಮಾಯಕರಿಗೆ ಇಲಾಖೆಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಭಯ ಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts