More

    ಇಂದು ಕರಾವಳಿ ಸ್ತಬ್ಧ ಸಾಧ್ಯತೆ

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಜನತಾ ಕರ್ಫ್ಯೂ ಕರೆಗೆ ದ.ಕ.ಹಾಗೂ ಉಡುಪಿಯಲ್ಲಿ ಸಂಪೂರ್ಣ ಜನಬೆಂಬಲ ವ್ಯಕ್ತವಾಗುವ ಸೂಚನೆ ಶನಿವಾರವೇ ಕಾಣತೊಡಗಿದ್ದು, ಸಂಪೂರ್ಣ ಸ್ತಬ್ಧವಾಗುವ ಸಾಧ್ಯತೆ ಇದೆ.
    ಭಾನುವಾರ ಜನರು ಮನೆಯಲ್ಲೇ ಕುಳಿತು ಕರ್ಫ್ಯೂ ಯಶಸ್ವಿಗೊಳಿಸುವ ಮೂಲಕ ಕರೊನಾವನ್ನು ದೇಶದಿಂದ ದೂರವಾಗಿಸುವ ನಿಟ್ಟಿನಲ್ಲಿ ಬೆಂಬಲ ನೀಡಬೇಕು ಎಂದು ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪ್ರಮುಖರು ಮನವಿ ಮಾಡಿದ್ದಾರೆ. ಜಿಲ್ಲಾದ್ಯಂತ ಹೋಟೆಲ್ ಬಂದ್‌ಗೆ ಅಸೋಸಿಯೇಶನ್ ನಿರ್ಧರಿಸಿದೆ. ಖಾಸಗಿ ಹಾಗೂ ಸರ್ಕಾರಿ ಬಸ್ ಸಂಚಾರವೂ ನಾಳೆ ಸ್ಥಗಿತಗೊಳ್ಳಲಿದೆ. ರಿಕ್ಷಾಗಳು ರಸ್ತೆಗಿಳಿಯುವುದಿಲ್ಲ . ಉಳಿದಂತೆ ಅಂಗಡಿ ಮುಂಗಟ್ಟುಗಳೂ ಬಂದ್ ಆಗುವ ಸಾಧ್ಯತೆಯಿದೆ. ಮಾಲ್‌ಗಳು, ಸಿನಿಮಾ ಮಂದಿರಗಳು ಈಗಾಗಲೇ ಹಲವು ದಿನಗಳಿಂದ ಮುಚ್ಚಿದ್ದು , ಚಿನ್ನಾಭರಣ ಮಳಿಗೆಗಳನ್ನು ಬಂದ್ ಮಾಡಲು ಅಸೋಸಿಯೇಶನ್ ತೀರ್ಮಾಸಿದೆ. ತರಕಾರಿ-ಮೀನು ಮಾರುಕಟ್ಟೆಗಳನ್ನು ಬಂದ್ ಎಂದು ಮಾರಾಟಗಾರರ ಸಂಘ ತಿಳಿಸಿದೆ.
    ತುರ್ತು ಸೇವೆಗಳಿಗೆ ಜನತಾ ಕರ್ಫ್ಯೂನಿಂದ ವಿನಾಯಿತಿಯಿದ್ದು, ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್, ಆಂಬುಲೆನ್ಸ್ ಸೇವೆಗಳು ಎಂದಿನಂತೆ ಇರಲಿವೆ. ಹಾಲಿನ ಡೇರಿಗಳು ಬೆಳಗ್ಗೆ ತೆರೆದಿರುವ ಸಾಧ್ಯತೆಯಿದೆ.

    ಬಸ್ ಸಂಚಾರ ಸ್ಥಗಿತ
    ಜನರು ಮನೆಯಿಂದ ಹೊರ ಬರುವ ಸಾಧ್ಯ ಕಡಿಮೆ ಇರುವುದರಿಂದ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ. ಈಗಾಗಲೇ ಬಸ್‌ಗಳಲ್ಲಿ ಜನರ ಸಂಖ್ಯೆ ಕಡಿಮೆಯಾಗಿ ದಿನಕ್ಕೆ ಕೋಟ್ಯಂತರ ರೂ.ನಷ್ಟವಾಗುತ್ತಿದೆ. ಭಾನುವಾರ ಜನರೇ ಹೊರಬರದಿರಲು ನಿರ್ಧರಿಸಿರುವುದರಿಂದ ಬಸ್ ಓಡಾಡ ನಡೆಸದಿರಲು ನಿರ್ಧರಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    ಟ್ಯಾಕ್ಸಿ ಸಂಚಾರ ಇಲ್ಲ
    ಜನತಾ ಕರ್ಫ್ಯೂಗೆ ಹೆಚ್ಚಿನ ಆಟೋರಿಕ್ಷಾ ಚಾಲಕರ-ಮಾಲೀಕರ ಸಂಘಗಳೂ ಬೆಂಬಲ ವ್ಯಕ್ತಪಡಿಸಿದ್ದು, ಆಟೋಗಳನ್ನು ರಸ್ತೆಗಿಳಿ ಸದಿರಲು ನಿರ್ಧರಿಸಿದೆ. ಟ್ಯಾಕ್ಸಿ-ಮ್ಯಾಕ್ಸಿಕ್ಯಾಬ್ ಚಾಲಕ-ಮಾಲೀಕರ ಸಂಘವೂ ಬೆಂಬಲ ನೀಡಿದ್ದು, ಸಂಚಾರ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದು. ತುರ್ತು ಅವಶ್ಯಕತೆ ಇದ್ದಲ್ಲಿ ಮಾತ್ರ ಕೆಲವು ವಾಹನಗಳು ಓಡಾಟ ನಡೆಸಲಿವೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

    ಪೆಟ್ರೋಲ್ ಬಂಕ್ ಇರಲ್ಲ
    ಪ್ರಧಾನಿಯವರ ಜನತಾ ಕರ್ಫ್ಯೂಗೆ ಬೆಂಬಲವಾಗಿ ಪೆಟ್ರೋಲ್ ಬಂಕ್‌ಗಳು ಕಾರ್ಯ ಸ್ಥಗಿತಗೊಳಿಸಲಿವೆ. ಆದರೆ ತುರ್ತುಸೇವೆಗಳ ವಾಹನಗಳಾದ ಆಂಬುಲೆನ್ಸ್, ಹಾಲಿನ ವಾಹನ, ಆಸ್ಪತ್ರೆ, ಪೊಲೀಸರಿಗೆ ಸಂಬಂಧಿಸಿದ ವಾಹನಗಳು ಹಾಗೂ ಕೆಲವರಿಗೆ ಮಾನವೀಯತೆ ನೆಲೆಯಲ್ಲಿ ಪೆಟ್ರೋಲ್-ಡೀಸೆಲ್ ಪೂರೈಸಲಾಗುತ್ತದೆ. ಆದ್ದರಿಂದ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಎಂದಿಗಿಂತ ಕಡಿಮೆ ಸಿಬ್ಬಂದಿಯೊಂದಿಗೆ ಮೇಲ್ನೋಟಕ್ಕೆ ಬಂದ್ ಆದರೂ ಕಾರ್ಯನಿರ್ವಹಿಸಲಿವೆ. ದಿನದ 24 ಗಂಟೆಕಾರ್ಯ ನಿರ್ವಹಿಸುವ ಪೆಟ್ರೋಲ್ ಬಂಕ್‌ಗಳು 9 ಗಂಟೆಯ ಬಳಿಕ ಪೂರ್ಣ ಪ್ರಮಾಣದಲ್ಲಿ ತೆರೆಯಲಿದೆ. ದ.ಕ.-ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲ 380 ಪೆಟ್ರೋಲ್ ಬಂಕ್‌ಗಳು ಈ ರೀತಿಯಲ್ಲಿ ಜನತಾ ಕರ್ಫ್ಯೂಗೆ ಬೆಂಬಲಿಸಲಿದೆ ಎಂದು ದ.ಕ-ಉಡುಪಿ ಪೆಟ್ರೋಲಿಯಂ ವರ್ತಕರ ಸಂಘದ ಅಧ್ಯಕ್ಷ ಪಿ.ವಾಮನ ಪೈ ವಿಜಯವಾಣಿಗೆ ತಿಳಿಸಿದ್ದಾರೆ.

    ಕರ್ಫ್ಯೂಗೆ ಕಾಸರಗೋಡು ಸಿದ್ಧ
    ಕಾಸರಗೋಡು: ಭಾನುವಾರದ ಜನತಾ ಕರ್ಪ್ಯೂಗೆ ಕಾಸರಗೋಡು ಶನಿವಾರದಿಂದಲೇ ಸಿದ್ಧವಾದಂತಿತ್ತು. ಕೆಎಸ್ಸಾರ್ಟಿಸಿ ಹಾಗೂ ಬಹುತೇಕ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ನಡೆಸಲುದ್ದೇಶಿಸಲಾಗಿದ್ದ ಬ್ರಹ್ಮಕಲಶೋತ್ಸವ, ಜಾತ್ರಾ ಮಹೋತ್ಸವವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ನಗರದಲ್ಲಿ ಜನಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಶನಿವಾರ ಬೆರಳೆಣಿಕೆಯ ಬಸ್‌ಗಳು ಸಂಚರಿಸುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬೆಳಗ್ಗೆ 11ಕ್ಕೆ ತೆರೆದುಕೊಂಡ ಅಂಗಡಿಮುಂಗಟ್ಟುಗಳ ಎದುರು ಜನಸಂದಣಿ ಹೆಚ್ಚಾಗಿತ್ತು. ಕೆಲವರು ದಾಸ್ತಾನಿರಿಸಿಕೊಳ್ಳಲು ಹೆಚ್ಚಿನ ಸಾಮಗ್ರಿ ಖರೀದಿಸುವುದು ಕಂಡುಬಂತು.

    ವಸ್ತು ಖರೀದಿಗೆ ಮುಗಿಬಿದ್ದ ಗ್ರಾಹಕರು
    ಜನತಾ ಕರ್ಫ್ಯುಗೆ ಸ್ಪಂದಿಸಲು ಉಡುಪಿ ಜಿಲ್ಲೆಯ ಜನತೆ ಅಣಿಯಾಗಿದ್ದಾರೆ. ಭಾನುವಾರ ‘ಜನತಾ ಕರ್ಫ್ಯೂ’ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ಚಟುವಟಿಕೆಗಳು ಸ್ತಬ್ಧ ಗೊಳ್ಳುವ ಸಾಧ್ಯತೆ ಹೆಚ್ಚಿದೆ.
    ಜನರು ಶನಿವಾರವೇ ದಿನಸಿ ಅಂಗಡಿಗಳಲ್ಲಿ ಬೆಳಗ್ಗಿನ ಹೊತ್ತು ಹಾಗೂ ಸಾಯಂಕಾಲ ದಿನ ಬಳಕೆ ವಸ್ತುಗಳ ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿತು. ಕೆಲವು ಸೇವೆ ಬಂದ್ ಇರುವುದರಿಂದ ಸರ್ಕಾರಿ ಕಚೇರಿಗಳು ನೌಕರರನ್ನು ಹೊರತು ಪಡಿಸಿ ಸಾರ್ವಜನಿಕರಿಲ್ಲದೆ ಬಣಗುಡುತಿದ್ದವು.
    ಜಿಲ್ಲೆಯಲ್ಲಿ 144(3) ಸೆಕ್ಷನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಭಾನುವಾರದ ಸಂತೆಕಟ್ಟೆ ಸಂತೆ ಹಾಗೂ ಸೋಮವಾರ ಬ್ರಹ್ಮಾವರದ ಸಂತೆ ರದ್ದಾಗಿದೆ.

    ಮದ್ಯ, ಮಾಂಸಕ್ಕೆ ಡಿಮಾಂಡ್
    ಮದ್ಯದ ಅಂಗಡಿ ಕೆಲವು ದಿನ ಬಂದ್ ಆಗಲಿದೆ ಎಂಬ ಗೊಂದಲದಲ್ಲಿ ಶನಿವಾರ ಬಾರ್, ವೈನ್‌ಶಾಪ್‌ಗಳಲ್ಲಿ ಮದ್ಯ ಖರೀದಿಯೂ ಜೋರಾಗಿತ್ತು. ಮಾಂಸಾಹಾರ ಪ್ರಿಯರು ಶನಿವಾರವೇ ಮಾರುಕಟ್ಟೆಯಲ್ಲಿ ಮೀನು ಮತ್ತು ಕುರಿ ಮಾಂಸವನ್ನು ಖರೀದಿಸುತ್ತಿರುವುದು ಕಂಡು ಬಂತು.

    ಊರಿಹೆ ಹೊರಟ ವಲಸೆ ಕಾರ್ಮಿಕರು
    ಹಾವೇರಿ, ಗದಗ, ವಿಜಯಪುರ ಮೊದಲಾದ ಭಾಗದ ಜನರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೂಲಿ ಕೆಲಸ ಇಲ್ಲದಿರುವುದು ಹಾಗೂ ಕರೊನಾ ಭೀತಿಯಿಂದಾಗಿ ತಮ್ಮ ಊರಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದ ದೃಶ್ಯ ಕಂಡು ಬಂದಿತು. ಹೆಂಗಸರು, ಮಕ್ಕಳು ಸೇರಿದಂತೆ ಕುಟುಂಬ ಸಮೇತ ಗಂಟು ಮೂಟೆಕಟ್ಟಿಕೊಂಡು ಹೊರ ಜಿಲ್ಲೆಯ ಮಂದಿ ಊರಿಗೆ ಹೊರಟಿದ್ದಾರೆ. ಹೊರ ಜಿಲ್ಲೆ ಸಾಗುವ ಕೆಎಸ್‌ಆರ್‌ಟಿಸಿ ಬಸ್ಸು ಮತ್ತು ಖಾಸಗಿ ಬಸ್ಸುಗಳಿಗೆ ಶನಿವಾರ ಇಡೀ ದಿನ ಟಿಕೆಟ್‌ಗಾಗಿ ಮುಗಿಬಿದ್ದಿದ್ದು, ಸೀಟು ಇಲ್ಲದಿದ್ದರೂ ನಿಂತುಕೊಂಡೇ ಹೋಗುತ್ತೇವೆ ಎಂದು ಬಸ್ ನಿರ್ವಾಹಕರಲ್ಲಿ ಮನವಿ ಮಾಡಿಕೊಳ್ಳುವ ದೃಶ್ಯ ಕಂಡು ಬಂತು.

    ಪೊಲೀಸ್ ಬಂದೋಬಸ್ತ್
    ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಶನರೆಟ್ ಹಾಗೂ ಪೊಲೀಸ್ ಅಧೀಕ್ಷಕರ ವ್ಯಾಪ್ತಿಯಲ್ಲಿ ಬಂದೋಬಸ್ತ್ ಮಾಡಲಾಗಿದೆ.
    ಜಿಲ್ಲೆಯ ಗಡಿಭಾಗದಲ್ಲಿ ಈಗಾಗಲೇ ಬಿಗು ಬಂದೋಬಸ್ತ್, ತಪಾಸಣೆ ಮಾಡಲಾಗುತ್ತಿದೆ. ಅದರಲ್ಲೂ ಕೇರಳದಿಂದ ಬರುವ ಎಲ್ಲ ಮಾರ್ಗಗಳನ್ನು ಮುಚ್ಚಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ 600ಕ್ಕೂ ಅಧಿಕ ಮಂದಿ ವಿದೇಶದಿಂದ ಆಗಮಿಸಿ, ಮನೆಯಲ್ಲಿಯೇ ನಿಗಾದಲ್ಲಿದ್ದಾರೆ. ಅವರ ಮನೆಗೆ ಪೊಲೀಸರು ಪ್ರತಿನಿತ್ಯ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. 14 ದಿನಗಳ ಕಾಲ ಮನೆಯಿಂದ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಮನೆಯಿಂದ ಹೊರಗೆ ಹೋದರೆ ಈ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡುವಂತೆ ಸ್ಥಳೀಯರಿಗೂ ತಿಳಿಸಲಾಗಿದೆ ಎಂದು ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
    ಮಂಗಳೂರು ನಗರ ಪೊಲೀಸ್ ಕಮಿಶನರೆಟ್ ವ್ಯಾಪ್ತಿಯಲ್ಲೂ ಜನತಾ ಕರ್ಫ್ಯೂ ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಕಮಿಶನರೆಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್.ಸೂಚನೆ ನೀಡಿದ್ದಾರೆ.

    ಚರ್ಚ್‌ಗಳಲ್ಲಿ ಗಂಟೆ ಬಾರಿಸಲು ಬಿಷಪ್ ಕರೆ
    ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರೆಯಂತೆ, ಕರೊನಾ ವೈರಸ್ ರೋಗಿಗಳ ಸೇವೆಯಲ್ಲಿರುವ ಹಾಗೂ ವೈರಸ್ ಹರಡದಂತೆ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸಿಂಗ್ ಸಿಬ್ಬಂದಿ, ಪ್ಯಾರ ಮೆಡಿಕಲ್ ಸಿಬ್ಬಂದಿ, ವಿಮಾನಯಾನ, ಆಂಬುಲೆನ್ಸ್ ಸಿಬ್ಬಂದಿಯ ನಿಸ್ವಾರ್ಥ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಲು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಎಲ್ಲ ಚರ್ಚ್‌ಗಳಲ್ಲಿ ಮಾ.22ರಂದು ಸಾಯಂಕಾಲ 5ಕ್ಕೆ ಗಂಟೆ ಬಾರಿಸಲು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನಾ ಸೂಚನೆ ನೀಡಿದ್ದಾರೆ.
    ಗಂಟೆ ಬಾರಿಸುವುದು ಚರ್ಚ್‌ನ ಧಾರ್ಮಿಕ ವಿಧಿವಿಧಾನಗಳಲ್ಲಿ ಒಂದು. ಸಂತಸ ಅಥವಾ ಕಷ್ಟದ ವಿಚಾರವನ್ನು ಜನರಿಗೆ ತಿಳಿಸಲು ಗಂಟೆ ಬಾರಿಸಲಾಗುತ್ತದೆ. ಜನರು ವೈಯಕ್ತಿಕವಾಗಿ ಚಪ್ಪಾಳೆ ಬಡಿಯುವಾಗ ಒಂದು ಧಾರ್ಮಿಕ ಕೇಂದ್ರವಾಗಿ ಚರ್ಚ್‌ಗಳಲ್ಲಿ ಗಂಟೆ ಬಾರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts