More

    ಮಂಗಳೂರು ವಿಮಾನ ನಿಲ್ದಾಣ ಮೊದಲ ಬಾರಿ ಸ್ತಬ್ಧ

    ಮಂಗಳೂರು: ಕರೊನಾ ಲಾಕ್‌ಡೌನ್‌ನಿಂದಾಗಿ ಮಂಗಳೂರು ವಿಮಾನ ನಿಲ್ದಾಣ ಇದೇ ಮೊದಲ ಬಾರಿಗೆ ಪೂರ್ತಿ ಸ್ತಬ್ಧವಾಗಿದೆ. ಮೊದಲು ಅಂತಾರಾಷ್ಟ್ರೀಯ ವಿಮಾನ ಹಾರಾಟಗಳು ರದ್ದಾದರೆ, ಬುಧವಾರದಿಂದ ದೇಶೀಯ ವಿಮಾನಗಳ ಸಂಚಾರವೂ ಸ್ಥಗಿತಗೊಂಡವು.
    ಇನ್ನು ನವಮಂಗಳೂರು ಬಂದರು ಮಂಡಳಿ ಹಾಗೂ ಭಾರತೀಯ ರೈಲ್ವೆ ಅಗತ್ಯ ವಸ್ತುಗಳ ನಿರ್ವಹಣೆ, ಸಾಗಾಟದಲ್ಲಿ ನಿರತವಾಗಿವೆ.
    ನವಮಂಗಳೂರು ಬಂದರಿನಲ್ಲಿ ಆಹಾರ ಖಾದ್ಯ ವಸ್ತುಗಳು, ಪೆಟ್ರೋಲಿಯಂ, ಕಲ್ಲಿದ್ದಲು ಇತ್ಯಾದಿ ವಸ್ತುಗಳ ಆಮದು ಮುಂದುವರಿದಿದೆ. ಸಿಬ್ಬಂದಿಗಳಲ್ಲಿ ಶೇ.50ನ್ನು ಮನೆಯಲ್ಲಿರಿಸಿ, ಉಳಿದವರು ಕೆಲಸ ಮಾಡುತ್ತಿದ್ದಾರೆ. ಅವರನ್ನು ಪಾಳಿಯಲ್ಲಿ ದುಡಿಸಲಾಗುತ್ತಿದೆ.
    ಎಲ್ಲ ರೀತಿಯ ಕೊವಿಡ್ ಸಂರಕ್ಷಣಾ ವ್ಯವಸ್ಥೆ ರೂಪಿಸಲಾಗಿದ್ದು ಹೊರಗಿನಿಂದ ಬರುವ ಹಡಗುಗಳ ಸಿಬ್ಬಂದಿಯನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಬಂದರು ಮಂಡಳಿ ವೈದ್ಯಾಧಿಕಾರಿ ನೇತೃತ್ವದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಹೊರಗಿನಿಂದ ಬರುವ ಹೋಗುವವರನ್ನೂ ತಪಾಸಣೆ ಮಾಡಲಾಗುತ್ತಿದೆ.

    ಚೆಟ್ಟಿನಾಡ್ ಸ್ಥಗಿತ: ಬಂದರಿನಲ್ಲಿ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಉಳಿದಂತೆ ಸಿಮೆಂಟ್ ನಿರ್ವಹಣೆ ಮಾಡುವ ಚೆಟ್ಟಿನಾಡು ಸಂಸ್ಥೆಯ ಬರ್ತ್ ಇದುವರೆಗೆ ಕಾರ್ಯ ನಿರ್ವಹಣೆ ಮಾಡುತ್ತಿತ್ತು. ಆದರೆ ಅಲ್ಲಿ ಕೆಲಸಕ್ಕೆ ಬರಲು ಕಾರ್ಮಿಕರು ಒಪ್ಪುತ್ತಿಲ್ಲ ಎಂಬ ಕಾರಣದಿಂದ ಸ್ಥಗಿತಗೊಳಿಸಲಾಗಿದೆ.
    ಸದ್ಯ ಯುಪಿಸಿಎಲ್‌ಗೆ ಕಲ್ಲಿದ್ದಲು ಪೂರೈಕೆಯನ್ನು ಮುಂದುವರಿಸಲಾಗಿದೆ. ಆದರೆ ಕೊವಿಡ್ ಕಾರಣದಿಂದಾಗಿ ಕಾರ್ಮಿಕರ ಸಮಸ್ಯೆ ತಲೆದೋರಿದ್ದು, ಲೋಡಿಂಗ್ ಅನ್‌ಲೋಡಿಂಗ್ ಸರಿಯಾಗಿ ಮಾಡಲಾಗುತ್ತಿಲ್ಲ. ಇದೇ ಕಾರಣದಿಂದ ಕಂಟೈನರ್ ನೌಕೆಯೊಂದು ಅರ್ಧದಷ್ಟು ಕಂಟೈನರ್ ಲೋಡ್ ಮಾಡಿ ತೆರಳಿರುವುದಾಗಿ ತಿಳಿದುಬಂದಿದೆ.

    ರೈಲ್ವೆಯಲ್ಲಿ ಗೂಡ್ಸ್ ಮಾತ್ರ: ರೈಲ್ವೆಯಲ್ಲಿ ಪ್ರಯಾಣಿಕರ ಸೇವೆ ನಿಷೇಧವನ್ನು ಏ.14ರ ಮಧ್ಯರಾತ್ರಿ 12ಗಂಟೆವರೆಗೂ ವಿಸ್ತರಣೆ ಮಾಡಲಾಗಿದೆ. ಪ್ರಸ್ತುತ ಕೆಲವೇ ಸಂಖ್ಯೆಯಲ್ಲಿ ಗೂಡ್ಸ್ ರೈಲುಗಳು ಅಗತ್ಯ ಸಾಮಗ್ರಿಗಳ ಸಾಗಾಟವನ್ನು ಕೈಗೊಳ್ಳುತ್ತಿವೆ. ದೂರದ ಊರುಗಳಿಂದ ಅಗತ್ಯ ಸಾಮಾಗ್ರಿ ಸಾಗಾಟಕ್ಕೆ ಪ್ರಸ್ತುತ ಎಲ್ಲ ರಸ್ತೆ ಸಾರಿಗೆ ವಾಹನಗಳ ಸಂಚಾರ ನಿಷೇಧಗೊಂಡಿರುವ ವೇಳೆ ರೈಲ್ವೇ ಈ ಸಾಗಾಟದಲ್ಲಿ ಮಹತ್ವದ ಪಾತ್ರ ವಹಿಸಿದೆ.

    ಚೀನಾದ ಹಡಗು ಹಿಂದಕ್ಕೆ: ಎಟಿಎಫ್(ಏರ್‌ಕ್ರಾಫ್ಟ್ ಟರ್ಬೈನ್ ಫ್ಯೂಯಲ್) ಕೊಂಡೊಯ್ಯಲು ನವಮಂಗಳೂರು ಬಂದರಿಗೆ ಬಂದಿದ್ದ ಚೀನಾದ ಹಡಗೊಂದನ್ನು ಲಂಗರು ಹಾಕದಂತೆ ಸೂಚಿಸಿ ಹಿಂದಕ್ಕೆ ಕಳುಹಿಸಲಾಗಿದೆ. ‘ಯೇ ಚಿ’ ಎನ್ನುವ ತೈಲ ಟ್ಯಾಂಕರ್ ಹಡಗಿನಲ್ಲಿ ಪೂರ್ತಿ ಚೀನಾದ ಸಿಬ್ಬಂದಿಯಿದ್ದು, ಕರೊನಾ ಹರಡಬಹುದು ಎನ್ನುವ ಭೀತಿಯಿಂದ ಬರ್ತ್ ಮಾಡಲು ಬಿಡಲಾಗಿಲ್ಲ. ಎಂಆರ್‌ಪಿಎಲ್ ಬರ್ತ್‌ನಿಂದ ಎಟಿಎಫ್ ಪಡೆಯುವುದಕ್ಕಾಗಿ ಈ ಹಡಗು ಬಂದಿತ್ತು. ಇದು ಕರೊನಾ ನಿರ್ಬಂಧದ ಬಳಿಕ ಇಂತಹ ಮೊದಲ ಪ್ರಕರಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts