More

    ಸಾವಿನ ಅಧ್ಯಯನಕ್ಕೆ ತಜ್ಞರ ತಂಡ

    ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಲು ಬೆಂಗಳೂರಿನ ತಜ್ಞರ ತಂಡವೊಂದು ಆಗಮಿಸಿದೆ.
    ನಿರಂತರವಾಗಿ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಕಾರಣ, ಅದರ ಹಿನ್ನೆಲೆ ಬಗ್ಗೆ ಅಧ್ಯಯನ ನಡೆಸಲು ಜಿಲ್ಲಾಡಳಿತ ಸರ್ಕಾರಕ್ಕೆ ವಿನಂತಿಸಿದ್ದು, ಬುಧವಾರ ಬೆಂಗಳೂರಿನ ಮೂರು ಮಂದಿ ತಜ್ಞರ ತಂಡ ಮಂಗಳೂರಿಗೆ ಆಗಮಿಸಿ ಮಂಗಳೂರಿನ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದೆ.
    ಈಗ ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ 63 ತಲುಪಿದ್ದು, ಚಿಕಿತ್ಸಾ ವರದಿ ಪರಿಶೀಲನೆ ನಡೆಸಿ ಅಂತಿಮವಾಗಿ ಸಾವಿಗೆ ಕಾರಣ ಕುರಿತು ವಿಸ್ತೃತ ವರದಿ ನೀಡಲಿದೆ.

    ಕಿಟ್/ಮಾಸ್ಕ್ ಕೊರತೆಯಿಲ್ಲ: ಜಿಲ್ಲಾ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಎನ್-95 ಮಾಸ್ಕ್ ಹಾಗೂ ಪಿಪಿಇ ಕಿಟ್ ಕೊರತೆ ಕುರಿತು ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಸ್ಪಷ್ಟನೆ ನೀಡಿದ್ದು, ಯಾವುದೇ ಕೊರತೆ ಇಲ್ಲ ಎಂದಿದ್ದಾರೆ.
    ಮಂಗಳವಾರ ಒಂದೂವರೆ ಸಾವಿರ ಮಾಸ್ಕ್ ಹಾಗೂ ಪಿಪಿಇ ಕಿಟ್‌ಗಳು ಬಂದಿವೆ. ಹಾಗಾಗಿ ಇಲ್ಲಿ ಯಾವುದೇ ಪರಿಕರಗಳ ಕೊರತೆ ಇಲ್ಲ. ಈ ಕುರಿತು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕೇಸು ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

    ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ
    ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಸಹಿತ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಯೋಜನೆಯಡಿ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು, ಈ ಬಗ್ಗೆ ಸಂದೇಹ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.
    ಕರೊನಾ ಪಾಸಿಟಿವ್ ಇರುವ, ಆದರೆ ಯಾವುದೇ ರೋಗ ಲಕ್ಷಣ ಇಲ್ಲದವರಿಗೆ ಮನೆಯಲ್ಲೇ ಚಿಕಿತ್ಸೆಗೆ ಸೂಚನೆ ನೀಡಲಾಗಿದೆ. ಸೋಂಕಿನ ಲಕ್ಷಣಗಳಿದ್ದವರಿಗೆ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಸ್ಥಳಾವಕಾಶ ಇಲ್ಲದಿದ್ದಲ್ಲಿ ಮಾತ್ರ ಸರ್ಕಾರ ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು.
    ಸರ್ಕಾರ ಗೊತ್ತುಪಡಿಸಿದ ಖಾಸಗಿ ಆಸ್ಪತ್ರೆಗೆ ನೇರವಾಗಿ ತೆರಳುವವರು ಕಡ್ಡಾಯವಾಗಿ ಆಯಾ ಆಸ್ಪತ್ರೆಗಳಿಗೆ ಗೊತ್ತುಪಡಿಸಿರುವ ಕೋವಿಡ್ ಸಂಬಂಧಿಸಿದ ಅಧಿಕಾರಿಗಳಿಗೆ ಫೋನ್ ಮೂಲಕ ಮಾಹಿತಿ ನೀಡಬೇಕಾಗುತ್ತದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಉಚಿತ ಪರೀಕ್ಷೆಗೆ ಅವಕಾಶವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಪರೀಕ್ಷೆಗೆ ಅವಕಾಶ ಇಲ್ಲ ಎಂದು ವಿವರಿಸಿದ್ದಾರೆ.
    ಯಾವ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ?: * ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ಮಂಗಳೂರು-9737007132 * ಎ.ಜೆ.ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಕುಂಟಿಕಾನ ಮಂಗಳೂರು-9449937129. * ಶ್ರೀನಿವಾಸ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಸುರತ್ಕಲ್-9901244712. * ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆ ಸುಳ್ಯ-9480013503. * ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್, ದೇರಳಕಟ್ಟೆ-9740083240. * ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದೇರಳಕಟ್ಟೆ-9900098782* ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಕೊಡಿಯಾಲಬೈಲ್, ಮಂಗಳೂರು-9901730949. ಇಂಡಿಯಾನ ಆಸ್ಪತ್ರೆ ಮತ್ತು ಹೃದ್ರೋಗ ಸಂಸ್ಥೆ ಪಂಪ್‌ವೆಲ್ -9845403347. ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ-9972388991.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts