More

    ಮಳೆಗಾಲಕ್ಕೆ ಸಿದ್ಧಗೊಳ್ಳದ ಪಾಲಿಕೆ

    ಹರೀಶ್ ಮೋಟುಕಾನ ಮಂಗಳೂರು
    ಪ್ರತಿವರ್ಷ ನಗರದ ಜಪ್ಪಿನಮೊಗರು, ಕೋಡಿಕಲ್, ಕೊಟ್ಟಾರ, ಮಹಾಕಾಳಿಪಡ್ಪು ಪ್ರದೇಶಗಳಲ್ಲಿ ಜೋರು ಮಳೆಗೆ ಮನೆಗಳಿಗೆ ಹಾಗೂ ಅಂಗಡಿಗಳಿಗೆ ನೀರು ನುಗ್ಗುವುದು ಸಾಮಾನ್ಯ. ಈ ಬಾರಿಯೂ ಇಂತಹ ಅನಾಹುತವಾಗುವ ಸಾಧ್ಯತೆ ಕಂಡುಬಂದಿದೆ. ಸ್ಥಳೀಯ ಪ್ರಮುಖ ರಾಜಕಾಲುವೆಗಳ ಹೂಳೆತ್ತುವ ಕೆಲಸ ನಡೆದಿರುವ ಹೊರತು, ಇನ್ಯಾವುದೇ ಸಿದ್ಧತೆ ಆಗಿಲ್ಲದ ಕಾರಣ ಜನರು ನೆರೆ ಭೀತಿ ಎದುರಿಸುತ್ತಿದ್ದಾರೆ.

    ಪ್ರತಿವರ್ಷ ತೋಡುಗಳ ಹೂಳು ತೆಗೆಯುತ್ತಾರೆ. ಆದರೆ ನಿರಂತರ ಎಡೆಬಿಡದೆ ಮಳೆ ಸುರಿದಾಗ ನೀರು ತೋಡಿನಿಂದ ಉಕ್ಕಿ ಹರಿಯುತ್ತದೆ. ರಾತ್ರಿ ವೇಳೆ ನೀರು ಉಕ್ಕಿ ಹರಿದರೆ ಇಡೀ ರಾತ್ರಿ ನಿದ್ದೆ ಇರುವುದಿಲ್ಲ ಎಂದು ಜಪ್ಪಿನಮೊಗರು ನಿವಾಸಿಗಳು ತಿಳಿಸಿದ್ದಾರೆ. ನಗರದ ಹಲವು ಕಡೆಗಳಲ್ಲಿ ಒಳ ರಸ್ತೆಗಳಲ್ಲಿ ಡಾಂಬರು ಕಿತ್ತು ಹೋಗಿ ಗುಂಡಿಗಳಾಗಿವೆ. ಮಳೆಗಾಲದಲ್ಲಿ ಬಹು ಬೇಗನೆ ಹದಗೆಟ್ಟು ಸಂಚಾರಿಗಳು ಸರ್ಕಸ್ ಮಾಡಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಸ್ಮಾರ್ಟ್‌ಸಿಟಿ ಕಾಮಗಾರಿಗಳು ಅರ್ಧಂಬರ್ಧವಾಗಿವೆ. ಹೂಳೆತ್ತಿ ಹಾಕಿದ್ದನ್ನು ತಕ್ಷಣ ಸಾಗಾಟ ಮಾಡದೆ ಅವು ಮಳೆ ಬಂದಾಗ ಮತ್ತೆ ತೋಡು, ಚರಂಡಿ ಪಾಲಾಗುತ್ತಿವೆ. ಈ ಕಡೆಗೆ ಪಾಲಿಕೆ ಅಧಿಕಾರಿಗಳು ಗಮನ ವಹಿಸಬೇಕಾಗಿದೆ.

    ನಗರದ ಕೆಲವು ಅಪಾರ್ಟ್‌ಮೆಂಟ್‌ಗಳು, ದೊಡ್ಡ ಹೋಟೆಲ್‌ಗಳು ಮಳೆನೀರನ್ನು ಒಳಚರಂಡಿಗೆ ಬಿಡುವುದರಿಂದ ಅಲ್ಲಲ್ಲಿ ರಸ್ತೆಗಳಲ್ಲಿರುವ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುತ್ತವೆ. ಕೊಳಚೆ ನೀರು ರಸ್ತೆಯಲ್ಲಿ ಸಾಗುವ ಪಾದಚಾರಿಗಳು, ದ್ವಿಚಕ್ರ ಸವಾರರ ಮೇಲೆ ಪ್ರೋಕ್ಷಣೆಯಾಗುವುದು ಸಾಮಾನ್ಯ. ಅಪಾರ್ಟ್‌ಮೆಂಟ್‌ಗಳಿಂದ ಒಳಚರಂಡಿಗೆ ಮಳೆ ನೀರು ಬಿಡುವುದಕ್ಕೆ ಪಾಲಿಕೆ ಕಡಿವಾಣ ಹಾಕಬೇಕಾಗಿದೆ.

    ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡ ಕಾರಣ ಕಾಮಗಾರಿ ನಿರ್ವಹಣೆಗೆ ವಿಳಂಬವಾಗಿದೆ. ಪಾಲಿಕೆಯ ಹಿರಿಯ ಇಂಜಿನಿಯರ್‌ಗಳು ನಿವೃತ್ತರಾದ ಕಾರಣ ಹೊಸದಾಗಿ ಆಯ್ಕೆಯಾದವರಿಗೆ ಅನುಭವ ಕೊರತೆ ಇದೆ. ಅದರಲ್ಲೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಯಾವುದೇ ಕೆಲಸಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

    ರಾಜಕಾಲುವೆಗಳ ಹೂಳೆತ್ತುವ ಕಾಮಗಾರಿ ಒಂದೂವರೆ ತಿಂಗಳ ಹಿಂದೆಯೇ ಆರಂಭಗೊಂಡಿದೆ. ಇನ್ನು ವೇಗವಾಗಿ ಚರಂಡಿಗಳ ದುರಸ್ತಿ ಕೆಲಸಗಳು ನಡೆಯಲಿವೆ. ನಗರದಲ್ಲಿ ನೆರೆ ಉಂಟಾಗದಂತೆ ಪ್ರಯತ್ನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಲಿಕೆ ಸದಸ್ಯರು ತಮ್ಮ ವಾರ್ಡ್‌ನ ಸಾರ್ವಜನಿಕರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡಿಸಿದಾಗ ಯಾವುದೇ ಗೊಂದಲಗಳು ಉಂಟಾಗುವುದಿಲ್ಲ.

    ಅಪಾಯಕಾರಿ ತೋಡು

    ನಗರದ ಮುಖ್ಯ ತೋಡುಗಳಾದ ಲಾಲ್‌ಭಾಗ್, ಬಿಜೈಗಳಲ್ಲಿ, ಕೊಡಿಯಾಲಬೈಲ್, ಮಾಲೆಮಾರ್ ಮೊದಲಾದ ಕಡೆ ರಾಜ ಕಾಲುವೆಗಳ ಹೂಳು ತೆಗೆಯಲಾಗಿದೆ. ಸಣ್ಣ ತೋಡುಗಳ ಹಾಗೂ ಚರಂಡಿಗಳ ಹೂಳೆತ್ತುವ ಕಾರ್ಯ ಇನ್ನೂ ನಡೆದಿಲ್ಲ. ನೀರು ಹರಿದು ಬರುವಾಗ ಬ್ಲಾಕ್ ಆಗಿ ಎಲ್ಲೆಂದರಲ್ಲಿ ನುಗ್ಗುವ ಸಾಧ್ಯತೆ ಇದೆ. ಇದು ಪರಿಸರದ ನಿವಾಸಿಗಳಿಗೆ ಅಪಾಯಕಾರಿಯಾಗುತ್ತಿದೆ. ಕಳೆದ ಮಳೆಗಾಲದಲ್ಲಿ ಕೊಟ್ಟಾರಚೌಕಿ, ಬಜಾಲ್, ಪಂಪ್‌ವೆಲ್, ಜಿಎಚ್‌ಎಸ್ ರಸ್ತೆ, ಕೆ.ಎಸ್.ರಾವ್ ರಸ್ತೆ, ಪಾಂಡೇಶ್ವರ ಮೊದಲಾದ ಕಡೆ ನೀರು ಹರಿಯದೆ ರಸ್ತೆಯಲ್ಲಿ ನಿಂತು ಸಂಪೂರ್ಣ ಬ್ಲಾಕ್ ಆಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿಯೂ ಅಲ್ಲಿ ಯಾವುದೇ ಪರಿಹಾರ ಕ್ರಮ ಕೈಗೊಳ್ಳದ ಕಾರಣ ಸಮಸ್ಯೆ ಮರುಕಳಿಸಲಿದೆ. ಮೇ 11ರಂದು ರಾತ್ರಿ ಮತ್ತು 13ರಂದು ಬೆಳಗ್ಗೆ ಸುರಿದ ಮಳೆ ಕೆಲವು ಕಡೆ ರಾದ್ಧಾಂತ ಸೃಷ್ಟಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ

    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲ ಎದುರಿಸಲು ರಾಜಕಾಲುವೆ, ಚರಂಡಿಗಳ ಹೂಳೆತ್ತುವ ಕಾಮಗಾರಿ ಪ್ರಗತಿಯಲ್ಲಿದೆ. ಮಳೆಗಾಲದ ತುರ್ತು ಸಂದರ್ಭ ಎದುರಿಸಲು ಪಾಲಿಕೆ ವತಿಯಿಂತದ ಪ್ರತಿ ವಾರ್ಡ್‌ಗೆ ಗ್ಯಾಂಗ್‌ಮನ್‌ಗಳ ತಂಡ ರಚಿಸಲು ಟೆಂಡರ್ ಆಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ವಾರ್ಡ್‌ಗೆ ಒಂದು ಟಿಪ್ಪರ್ ಹಾಗೂ ನಾಲ್ಕು ಜನ ಕೆಲಸಗಾರರನ್ನು ಸಿದ್ಧರಾಗಿರುವಂತೆ ಸೂಚಿಸಲಾಗಿದೆ. ಪಾಲಿಕೆಯಲ್ಲಿ ಒಂದು ಜೆಸಿಬಿ, ಟಿಪ್ಪರ್ ಹಾಗೂ ನಾಲ್ಕು ಜನರನ್ನು ಅಪಾಯ ಎದುರಿಸಲು ಇಡಲಾಗಿದೆ. ಮಳೆಗಾಲ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ಹೆಲ್ಪ್‌ಲೈನ್ ತೆರೆಯಲಾಗುವುದು. ಕಂಟ್ರೋಲ್ ರೂಂ ಕೂಡಾ ಚಾಲನೆಯಲ್ಲಿರುತ್ತದೆ. ದಿನದ 24 ಗಂಟೆ ಈ ದೂರವಾಣಿ ಸಂಖ್ಯೆಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಇವುಗಳ ನಂಬರ್ ಶೀಘ್ರ ನೀಡಲಾಗುವುದು.
    – ಚನ್ನಬಸಪ್ಪ, ಮನಪಾ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts