More

    12 ಗುಡಿಸಲು ಬೆಂಕಿಗಾಹುತಿ

    ಮಂಡ್ಯ: ಆಕಸ್ಮಿಕ ಬೆಂಕಿಗೆ 12 ಗುಡಿಸಲು ಭಸ್ಮವಾಗಿರುವ ದುರಂತ ತಾಲೂಕಿನ ಕೀಲಾರದಲ್ಲಿ ನಡೆದಿದ್ದು, ಕಿಡಿಗೇಡಿಗಳ ಕೃತ್ಯದ ಶಂಕೆ ವ್ಯಕ್ತವಾಗಿದೆ.

    ಮಂಗಳವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಒಂದು ಗುಡಿಸಲಿಗೆ ಬೆಂಕಿ ಬಿದ್ದು, ಕ್ಷಣಾರ್ಧದಲ್ಲೇ ಎಲ್ಲ ಗುಡಿಸಲುಗಳನ್ನು ವ್ಯಾಪಿಸಿದೆ. ಬೆಂಕಿ ನಂದಿಸಲು ಗುಡಿಸಲ ವಾಸಿಗಳ ಜತೆಗೆ ಗ್ರಾಮದ ಜನತೆ ಹರಸಾಹಸ ಮಾಡಿದರೂ ಪ್ರಯೋಜನವಾಗಿಲ್ಲ.

    ಮುನಿಯ, ಸೆಡಿಯ, ಅಣ್ಣಾದೊರೆ, ಧರ್ಮಲಿಂಗ, ಲಕ್ಷ್ಮಿ, ನಾಗರಾಜು, ಆನಂದ, ರಾಮಿ ಎಂಬುವರು ಸೇರಿ 12 ಜನರ ಗುಡಿಸಲುಗಳು ಬೆಂಕಿಗಾಹುತಿಯಾಗಿದ್ದು, ಮನೆಯಲ್ಲಿದ್ದ ಬಟ್ಟೆ, ಬರೆ, ದವಸ, ಧಾನ್ಯ, ಹಣ ಸೇರಿ ಎಲ್ಲ ವಸ್ತುಗಳು ಬೂದಿಯಾಗಿದೆ.

    ಬೆಂಕಿ ಕಂಡ ತಕ್ಷಣ ಅಗ್ನಿ ಶಾಮಕ ಠಾಣೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಆದರೆ, ಅಗ್ನಿಶಾಮಕ ಸಿಬ್ಬಂದಿ ಆಗಮಿಸುವ ವೇಳೆಗೆ ಬೆಂಕಿ ತನ್ನ ಕೆಲಸ ಮುಗಿಸಿಯಾಗಿತ್ತು. 12 ಕುಟುಂಬಗಳು ಈಗ ಬೀದಿ ಪಾಲಾಗಿವೆ. ಮನೆ ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತ್ತು.

    2018ರ ಜನವರಿ 10ರಂದು ಇದೇ ರೀತಿ ದುರಂತ ನಡೆದಿತ್ತು. ಅಂದು 20 ಮೇಕೆ ಮರಿಗಳು ಮೃತಪಟ್ಟಿದ್ದವು. ಆಗ ಹಲವು ದಿನಗಳ ಕಾಲ ಗ್ರಾಮ ಪಂಚಾಯಿತಿ ಹಾಗೂ ಗ್ರಾಮದ ಜನತೆ ನೆರವಿಗೆ ಧಾವಿಸಿದ್ದರು. ಸ್ಥಳಕ್ಕೆ ಅಂದಿನ ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ, ಯಾವುದೇ ತನಿಖೆ ನಡೆಸಿರಲಿಲ್ಲ. ಈ ವೇಳೆ ನಿವಾಸಿಗಳಿಗೆ ವಸತಿ ಯೋಜನೆಯಡಿ ಮನೆಗಳನ್ನು ಕಲ್ಪಿಸಿಕೊಡುವ ಭರವಸೆ ನೀಡಲಾಗಿತ್ತು.

    ಅದಕ್ಕಾಗಿ ಜಾಗವನ್ನು ಗ್ರಾಮ ಪಂಚಾಯಿತಿ ಹೆಸರಿಗೆ ಮಾಡಿಸಿ, ಹಂಚಿಕೆ ಮಾಡಲು ತಯಾರಿಯೂ ಆರಂಭವಾಗಿತ್ತು. ಆದರೆ, ಕೆಲವರು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದರು. ಪ್ರಸ್ತುತ ತಹಸೀಲ್ದಾರ್ ಕಚೇರಿಯಲ್ಲಿ ಕಡತ ನಿಂತಿದೆ ಎನ್ನುತ್ತಾರೆ ಗ್ರಾ.ಪಂ.ಮಾಜಿ ಅಧ್ಯಕ್ಷ ರಮೇಶ್.

    ಇಂದಿನ ದುಷ್ಕೃತ್ಯದ ಹಿಂದೆ ಕಿಡಿಗೇಡಿಗಳ ಪಾತ್ರ ಇರುವ ಶಂಕೆಯಿದೆ. ಇದನ್ನು ಗಮನಿಸಿದರೆ ಆಕಸ್ಮಿಕವಾಗಿ ಬಿದ್ದಿಲ್ಲ. ಇವರನ್ನು ಖಾಲಿ ಮಾಡಿಸುವ ಉದ್ದೇಶದಿಂದ ಕಿಡಿಗೇಡಿಗಳು ಬೆಂಕಿ ಹಚ್ಚಿ ತೊಂದರೆ ಕೊಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಜಿಲ್ಲಾಡಳಿತ ತಕ್ಷಣ ಈ ನಿವಾಸಿಗಳಿಗೆ ಯಾವುದಾದರೂ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts