More

    ಬಿಎಸ್​ವೈ ಹುಟ್ಟುಹಬ್ಬದಂದೇ ಕೇಂದ್ರದಿಂದ ರಾಜ್ಯಕ್ಕೆ ಭರ್ಜರಿ ಗಿಫ್ಟ್​: ಮಹದಾಯಿ ಐತೀರ್ಪಿನ ಅಧಿಸೂಚನೆ ಪ್ರಕಟ

    ನವದೆಹಲಿ: ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ಹುಟ್ಟುಹಬ್ಬ ದಿನದಂದೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಭಾರಿ ಗಿಫ್ಟ್​ ನೀಡಿದೆ. ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಗುರುವಾರ ರಾತ್ರಿ ಮಹದಾಯಿ ಐತೀರ್ಪಿನ ಅಧಿಸೂಚನೆಯನ್ನು ಪ್ರಕಟಿಸಿದೆ.

    ಅಧಿಸೂಚನೆ ಹೊರಡಿಸುವ ಬಗ್ಗೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಸುರೇಶ್ ಅಂಗಡಿ ನೇತೃತ್ವದ ನಿಯೋಗ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ನಿನ್ನೆ ಮನವಿ ಸಲ್ಲಿಸಿತ್ತು.

    ದಿನದ ಅಂತರದಲ್ಲೇ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿದ್ದು, ಇದೀಗ ಅಧಿಸೂಚನೆ ಪ್ರಕಟ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ತನ್ನ ಪಾಲಿನ 13 ಟಿಎಂಸಿ ನೀರಿನ ಬಳಕೆಗೆ ಕ್ರಮ ಕೈಗೊಳ್ಳಬಹುದಾಗಿದೆ. ಇದು ಕಳಸಾ ಬಂಡೂರಿ ಹೋರಾಟಕ್ಕೆ ಸಿಕ್ಕ ಜಯವಾಗಿದೆ.

    ಇದೇ ಖುಷಿಯಲ್ಲಿ ಟ್ವೀಟ್​ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಬಹು ನಿರೀಕ್ಷಿತ ಮಹಾದಾಯಿ ನದಿ ನೀರಿನ ಹಂಚಿಕೆಯ ಐತೀರ್ಪನ್ನು ಕೇಂದ್ರ ಸರ್ಕಾರ ಇಂದು ಗೆಝೆಟ್ ಪ್ರಕಟಣೆ ಹೊರಡಿಸಿದೆ. ನಿನ್ನೆ ಕೇಂದ್ರ ಜಲ ಶಕ್ತಿ ಸಚಿವರನ್ನು ನಾವು ಭೇಟಿ ಮಾಡಿ ಚರ್ಚೆ ನಡೆಸಿದ್ದೆವು. ಪ್ರಧಾನಿ ಮೋದಿ ಹಾಗೂ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ವಂದನೆಗಳು ಎಂದಿದ್ದಾರೆ.

    ನಿನ್ನೆ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದ ನಿಯೋಗ, ನೋಟಿಫಿಕೇಷನ್ ಜಾರಿಗೆ ಗೋವಾ ವಿರೋಧಿಸಿಲ್ಲ. ಹೀಗಾಗಿ ಕೇಂದ್ರದ ಮುಂದೆ ಯಾವುದೇ ಸಮಸ್ಯೆ ಇಲ್ಲ. ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಿದರೆ ನ್ಯಾಯಾಧಿಕರಣ ನಿಗದಿ ಮಾಡಿರುವ ನೀರಿನ ಬಳಕೆ ಹಾಗೂ ಸಂಬಂಧಪಟ್ಟ ಕಾಮಗಾರಿ ಕಾರ್ಯ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ವಿವರಿಸಿತ್ತು.

    ರಾಜ್ಯದ ಮನವಿ ಸ್ವೀಕರಿಸಿದ್ದ ಕೇಂದ್ರ ಸಚಿವರು, ಕೋರ್ಟ್ ಆದೇಶ ಗಮನಕ್ಕೆ ಬಂದಿದೆ. ಕಾನೂನಾತ್ಮಕವಾಗಿ ಪೂರಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಜಗದೀಶ ಶೆಟ್ಟರ್ ಹಾಗೂ ಸಂಸದ ಶಿವಕುಮಾರ್ ಉದಾಸಿ ನಿಯೋಗದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts