More

    ಕೋತಿ ಜತೆ ಸೆಲ್ಫಿ ತೆಗೆಯಲು ಹೋಗಿ ಎಡವಟ್ಟು; 500 ಅಡಿ ಪ್ರಪಾತಕ್ಕೆ ಬಿದ್ದ ಶಿಕ್ಷಕ!

    ಮಹಾರಾಷ್ಟ್ರ: ಸೆಲ್ಫಿ ಕ್ರೇಜ್​ಗೆ ಈಗಾಗಲೇ ಸಾಕಷ್ಟು ಮಂದಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ದುಸ್ಸಾಹಸ ಮಾಡಲು ಹೋಗಿ ಅವಾಂತರಕ್ಕೆ ಸಿಲುಕಿಕೊಳ್ಳುತ್ತಾರೆ. ಹೀಗಾಗಿ ಮೊದಲು ಯಾವ ಸ್ಥಳದಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಸ್ವಲ್ಪ ಎಡವಟ್ಟಾದರೂ ಅಮೂಲ್ಯವಾದ ಜೀವವನ್ನೇ ಕಳೆದುಕೊಳ್ಳಬೇಕಾಗಬಹುದು.

    ಇದೀಗ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದ ವ್ಯಕ್ತಿಯೊಬ್ಬ ಜೀವವನ್ನೇ ಕಳೆದುಕೊಂಡಿದ್ದಾನೆ. ದಾರಿ ಮಧ್ಯದಲ್ಲಿ ಪ್ರಾಣಿಗಳನ್ನು ಕಂಡಾಗ ನೋಡಿ ಸಂತಸ ಪಡಬೇಕು. ಅಥವಾ ದೂರದಿಂದಲೇ ಫೋಟೋ ತೆಗೆದು ಸುಮ್ಮನಾಗಬೇಕು. ಆದರೆ ಈತ ಮಾಡಿದ್ದು ಮಾತ್ರ ಎಡವಟ್ಟಿನ ಕೆಲಸ. ಪುಣೆಯ ವರಂಧಾ ಘಾಟ್​ನಲ್ಲಿ ಸಾಗುತ್ತಿರುವಾಗ ಕೋತಿ ಕಾಣಿಸಿತೆಂದು, ಅದರೊಡನೆ ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದಾನೆ.

    ಅಬ್ದುಲ್ ಶೈಕ್(39) ಎಂಬಾತನಿಗೆ ಘಾಟಿ ರಸ್ತೆಯಲ್ಲಿ ಸಂಚರಿಸುವಾಗ ಕೋತಿ ಕಾಣಸಿಕ್ಕಿದೆ. ಈ ವೇಳೆ ಕಾರು ನಿಲ್ಲಿಸಿ, ಮಂಗನೊಂದಿಗೆ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಘಾಟಿ ರಸ್ತೆಯ ಒಂದು ಬದಿ ಸಹಜವಾಗಿಯೇ ಪ್ರಪಾತ ಇರುತ್ತದೆ. ಇದನ್ನು ಅರಿತುಕೊಳ್ಳದ ಅಬ್ದುಲ್ ಶೈಕ್, ಸೆಲ್ಫಿ ತೆಗೆಯಲು ದುಸ್ಸಾಹ ಮಾಡಿಕೊಂಡಿದ್ದಾರೆ. ಪರಿಣಾಮ 500 ಅಡಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ .

    ಮೃತ ಅಬ್ದುಲ್ ಶೈಕ್ ಕೋತಿಗಳ ಗುಂಪು ಕಾಣಿಸುತ್ತಿದ್ದಂತೆ ಅದಕ್ಕೆ ಆಹಾರದ ಪೊಟ್ಟಣವನ್ನು ನೀಡಿದ್ದಾರೆ. ನಂತರ ಅದರೊಂದಿಗೆ ಸೆಲ್ಫಿ ತೆಗೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ಪ್ರಪಾತಕ್ಕೆ ಬಿದ್ದಿದ್ದಾರೆ ಎಂದು ಘಟನಾ ಸ್ಥಳದಲ್ಲಿದ್ದ ವ್ಯಾಪಾರಸ್ಥರು ಹೇಳಿಕೊಂಡಿದ್ದಾರೆ. ಈ ಮಾಹಿತಿ ಬಂದೊಡನೆ, ಸ್ಥಳೀಯರ ಸಹಕಾರದೊಂದಿಗೆ ಮೃತದೇಹವನ್ನು ಪತ್ತೆ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಭೋರ್ ಪೊಲೀಸ್ ಠಾಣಾ ಇನ್ಸ್​​ಪೆಕ್ಟರ್ ವಿಠ್ಠಲ್ ಧಾಬಾಧೆ ಹೇಳಿದ್ದಾರೆ.

    ಮೃತ ಅಬ್ದುಲ್ ಶೈಕ್ ಘಟನಾ ಸ್ಥಳದಿಂದ 36ಕಿ.ಮೀ ದೂರದಲ್ಲಿರುವ ನರ್ಸಾಪುರ ಗ್ರಾಮದ ನಿವಾಸಿ. ವೃತ್ತಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಇವರ ಪತ್ನಿಯೂ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts