More

    ಪುಲ್ವಾಮ ದಾಳಿಗೆ ಬಾಂಬ್​ ತಯಾರಿಸಲು ಅಮೇಜಾನ್​ನಿಂದ ಕೆಮಿಕಲ್ಸ್​ ಖರೀದಿ: ಆರೋಪಿಯಿಂದ ಸ್ಫೋಟಕ ಮಾಹಿತಿ

    ಶ್ರೀನಗರ: ಕಳೆದ ವರ್ಷ ಫೆ. 14ರಂದು 40 ಸಿಆರ್​ಪಿಎಫ್​ ಯೋಧರನ್ನು ಬಲಿ ಪಡೆದುಕೊಂಡ ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್​ಐಎ) ಶುಕ್ರವಾರ ಬಂಧಿಸಿದೆ.

    ಇಬ್ಬರಲ್ಲಿ ಓರ್ವ ಆರೋಪಿ ಕೇಂದ್ರೀಯ ಸಶಕ್ತ ಪೊಲೀಸ್​ ಪಡೆಯ ಬೆಂಗಾವಲು ವಾಹನಗಳ ಮೇಲೆ ದಾಳಿ ಮಾಡಲು ಐಇಡಿ ಬಾಂಬ್​ ತಯಾರಿಕೆಗಾಗಿ ಆನ್​ಲೈನ್​ ಶಾಪಿಂಗ್​ನಿಂದ ರಾಸಾಯನಿಕಗಳನ್ನು ಕೊಂಡುತಂದಿದ್ದ ಎಂಬ ಭಯಾನಕ ಮಾಹಿತಿ ಹೊರಬಿದ್ದಿದೆ.

    ಶ್ರೀನಗರದ ವೈಜ್​ ಅಲ್​ ಇಸ್ಲಾಂ(19) ಮತ್ತು ಪುಲ್ವಾಮದ ಮೊಹಮ್ಮದ್​ ಅಬ್ಬಾಸ್​ ರಾಥರ್​(32) ಬಂಧಿತ ಆರೋಪಿಗಳು. ಪುಲ್ವಾಮ ಪ್ರಕರಣದಲ್ಲಿ ಈವರೆಗೆ ಒಟ್ಟು ಐವರು ಆರೋಪಿಗಳನ್ನು ಎನ್​ಐಎ ಬಂಧಿಸಿದೆ.

    ಆರಂಭಿಕ ತನಿಖೆಯಲ್ಲಿ ಆರೋಪಿ ಇಸ್ಲಾಂ ಸ್ಪೋಟಕ ಮಾಹಿತಿ ಹೊರಗೆಡವಿದ್ದು, ಐಇಡಿ ಬಾಂಬ್​ ತಯಾರಿಕೆಗೆ ಅಮೇಜಾನ್​ ಆನ್​ಲೈನ್​ ಶಾಪಿಂಗ್​ನಿಂದ ರಾಸಾಯನಿಕಗಳು, ಬ್ಯಾಟರಿಗಳು ಮತ್ತು ಇತರೆ ಅವಶ್ಯಕ ವಸ್ತುಗಳನ್ನು ಕೊಂಡುಕೊಂಡಿದ್ದಾಗಿ ಹೇಳಿದ್ದಾನೆ. ಎಲ್ಲವನ್ನು ಪಾಕಿಸ್ತಾನದ ಜೈಷ್​ ಎ ಮೊಹಮ್ಮದ್​(ಜಿಇಎಂ) ಉಗ್ರ ಸಂಘಟನೆಯ ನಿರ್ದೇಶನದಂತೆಯೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸಂಚಿನ ಭಾಗವಾಗಿ ವೈಯಕ್ತಿಕವಾಗಿಯೇ ಬಾಂಬ್​ ತಯಾರಿಕೆಯ ಎಲ್ಲ ವಸ್ತಗಳನ್ನು ಕೊಂಡು ಜೆಇಎಂ ಉಗ್ರರಿಗೆ ಆರೋಪಿ ಇಸ್ಲಾಂ ನೀಡಿದ್ದಾನೆ.

    ಮತ್ತೋರ್ವ ಆರೋಪಿ ರಾಥರ್​, ಜೆಇಎಂ ಸಂಘಟನೆಯ ಹಳೆಯ ಭೂಗತ ಕೆಲಸಗಾರ. ಜೈಷ್​ ಉಗ್ರರು ಹಾಗೂ ಐಇಡಿ ಪರಿಣಿತ ಮೊಹದ್​ ಉಮರ್​ 2018ರ ಏಪ್ರಿಲ್-ಮೇ​ನಲ್ಲಿ ಕಾಶ್ಮೀರಕ್ಕೆ ಬಂದಿದ್ದಾಗ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಹೀಗೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇಷ್ಟೇ ಅಲ್ಲದೆ, ಜೈಷ್​ ಇತರೆ ಉಗ್ರರಾದ ಆತ್ಮಾಹುತಿ ಬಾಂಬ್​ ದಾಳಿಕೋರ ಆದಿಲ್​ ಅಹ್ಮದ್​ ದಾರ್, ಸಮೀರ್​ ಅಹ್ಮದ್​ ದಾರ್​ ಮತ್ತು ಕಮ್ರಾನ್​ ಉಗ್ರರಿಗೆ ಪುಲ್ವಾಮ ದಾಳಿಗೂ ಮುನ್ನ ಆಶ್ರಯ ನೀಡಿದ್ದ ಎಂದು ಹೇಳಿದರು.​

    ಆರೋಪಿಗಳಾದ ಇಸ್ಲಾಂ ಮತ್ತು ರಾಥರ್​ನನ್ನು ಶನಿವಾರ ಜಮ್ಮುವಿನಲ್ಲಿರುವ ಎನ್​ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts