More

    ಡಾಂಬರು ಕಾಣದ ಮಳ್ಳೂರು ರಸ್ತೆ!

    ಸುಂಟಿಕೊಪ್ಪ: ಹೋಬಳಿ ಕೇಂದ್ರದಿಂದ ಮಳ್ಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರು ಕಂಡು ದಶಕಗಳೇ ಕಳೆದಿದ್ದು, ಈ ಮಾರ್ಗದಲ್ಲಿ ಸಂಚಾರ ಮಾಡುವವರು ಪ್ರಾಯಾಸ ಪಡುವಂತಾಗಿದೆ.

    ಈ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಹಲವು ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆ ಉಂಟು. ಈ ಗ್ರಾಮ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, ಕಾನ್‌ಬೈಲ್ ಮಾರ್ಗವಾಗಿ ಕಲ್ಲೂರು, ಹೆರೂರು, ಹಾದ್ರೆ ಹೆರೂರು ಮೂಲಕ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸಲಿದೆ.

    ಕೊಡಗರಹಳ್ಳಿ, ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು 5 ಸಾವಿರ ಜನಸಂಖ್ಯೆ ಇದೆ. ಈ ಮಾರ್ಗ ದಲ್ಲಿ ಕುಶಾಲನಗರಕ್ಕೆ ಬೆಳಗ್ಗೆ 8 ಗಂಟೆಗೆ ಸಾರಿಗೆ ಬಸ್ ಮಡಿಕೇರಿಯಿಂದ ಸುಂಟಿಕೊಪ್ಪ, ಕೊಡಗರಹಳ್ಳಿ, ಅಂದಗೋವೆ, ಕಾನ್‌ಬೈಲ್, ಮಳ್ಳೂರು, ಕಲ್ಲೂರು, ಹೆರೂರು ಮಾರ್ಗವಾಗಿ ಬಸವನಹಳ್ಳಿ ಮೂಲಕ ಕುಶಾಲನಗರ ತಲುಪಲಿದೆ. ನಂತರ ಸಂಜೆ ಇದೇ ಮಾರ್ಗವಾಗಿ ಸಾರಿಗೆ ಬಸ್ ಸಂಚರಿಸಲಿದೆ. ಈ ಎರಡೂ ಸಮಯದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹಲವರು ಪ್ರಯಾಣಿಸುತ್ತಾರೆ. ನಂತರದ ಸಮಯದಲ್ಲಿ ಖಾಸಗಿ ವಾಹನಗಳಲ್ಲೇ ಸಂಚರಿಸಬೇಕಿದೆ.

    ಗ್ರಾಮದಲ್ಲಿ ನೂರಾರು ಕೃಷಿಕರರಿದ್ದು, ವ್ಯವಸಾರದೊಂದಿಗೆ ಹೈನುಗಾರಿಕೆಯನ್ನೂ ಅವಲಂಬಿಸಿದ್ದಾರೆ. ಕೃಷಿ ಚಟುವಟಿಕೆಗೆ ಪೂರಕ ವಸ್ತುಗಳನ್ನು ಖರೀದಿಸಬೇಕಾದರೆ ಸುಂಟಿಕೊಪ್ಪ ಹೋಬಳಿ ಕೇಂದ್ರಕ್ಕೆ ಹೋಗಬೇಕಿದೆ. ಆರೋಗ್ಯ ಸಮಸ್ಯೆಯಿಂದ ತುರ್ತು ಚಿಕಿತ್ಸೆಗೂ ಸುಂಟಿಕೊಪ್ಪವನ್ನೇ ಆಶ್ರಯಿಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ವಾಹನಗಳಿಗೆ ದುಪ್ಪಟ್ಟು ಹಣ ನೀಡಿ ಕೂಲಿ ಕಾರ್ಮಿಕರು ಹಾಗೂ ಮದ್ಯಮ ವರ್ಗದವರು ಬಾಡಿಗೆ ವಾಹನಗಳಲ್ಲಿ ತೆರಳುವಂತಾಗಿದೆ. ಅಲ್ಲದೆ ಸ್ವಂತ ವಾಹನ ಹೊಂದಿರುವವರು ಈ ಗುಂಡಿ ರಸ್ತೆಯಲ್ಲೇ ಸಂಚರಿಸಬೇಕಿದ್ದು, ಇದರಿಂದಾಗಿ ವಾಹನಗಳು ಆಗಿಂದಾಗೆ ದುರಸ್ತಿಗೊಳಗಾಗುತ್ತಿದೆ ಎಂಬುದು ಕೃಷಿಕರು ಅಳಲು.

    ಪರಿಶಿಷ್ಟ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಗ್ರಾಮದಲ್ಲಿ ನೆಲೆಸಿದ್ದು, ಹಲವು ಕಾಲನಿಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಇಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಹಲವು ಸಂದರ್ಭದಲ್ಲಿ ಜನರು ಜೀವ ಕೈಯಲ್ಲಿಡಿದು ತೆರಳಬೇಕಾದ ಪರಿಸ್ಥಿತಿ ಇದೆ. ರಸ್ತೆ ಅಭಿವೃದ್ಧಿ ಪಡಿಸುವಂತೆ ಗ್ರಾಮ ಪಂಚಾಯಿತಿಯ ಈ ಹಿಂದಿನ ಆಡಳಿತ ಮಂಡಳಿ ಸಾಕಷ್ಟು ಮನವಿ ಪತ್ರವನ್ನು ಜಿಲ್ಲಾ, ತಾಲೂಕು ಪಂಚಾಯಿತಿ, ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದ್ದರೂಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು.

    ಹಾರಂಗಿ ಹಿನ್ನೀರು ವ್ಯಾಪ್ತಿಯಲ್ಲಿ ಈ ಗ್ರಾಮ ಇರುವುದರಿಂದ ಇದೊಂದು ಪ್ರೇಕ್ಷಣೀಯ ಸ್ಥಳವಾಗಿದೆ. ಪ್ರವಾಸಿಗಾರ ಮನತಣಿಸುವ ಪ್ರದೇಶ ಇದಾಗಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ಪೂರಕವಾದ ಸೌಲಭ್ಯ ಒದಗಿಸಿಲ್ಲ. ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದು, ಈಗಲಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿದರೆ ಸರ್ಕಾರಕ್ಕೆ ಆದಾಯ ಬರುವುದರ ಜತೆಗೆ ಗ್ರಾಮವೂ ಅಭಿವೃದ್ಧಿಗೊಳ್ಳಲಿದೆ ಎಂಬುದು ಸ್ಥಳೀಯರ ಅನಿಸಿಕೆ.

    ನಮ್ಮ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸ್ಥಳೀಯ ಶಾಲೆಗಳಲ್ಲಿ ಮುಗಿಸಿ ಪದವಿ ಶಿಕ್ಷಣ ಹಾಗೂ ಇತರ ಕೆಲಸ ಕಾರ್ಯಗಳಿಗಾಗಿ ನಿತ್ಯ ನೂರಾರು ರೂ.ವ್ಯಯಿಸಿ ಸುಂಟಿಕೊಪ್ಪ, ಕುಶಾಲನಗರ, ಮಾದಾಪುರಕ್ಕೆ ತೆರಳುತ್ತಾರೆ. ಈ ರಸ್ತೆಯ ಅವ್ಯವಸ್ಥೆಯಿಂದಾಗಿ ಬಾಡಿಗೆ ವಾಹನಗಳಿಗೆ ದುಪ್ಪಟ್ಟು ಹಣ ತೆರುವಂತಾಗಿದೆ. ಸಂಬಂಧಿಸಿದ ಇಲಾಖೆಯವರು ಇತ್ತ ಗಮನಹರಿಸಿ ಸಂಪೂರ್ಣ ಹದಗೆಟ್ಟಿರುವ ರಸ್ತೆಯನ್ನು ಮರು ಡಾಂಬರೀಕರಣಗೊಳಿಸಲಿ.
    ಚೆನ್ನಮ್ಮ ಗ್ರಾಪಂ ಮಾಜಿ ಸದಸ್ಯೆ

    ಈ ಗ್ರಾಮದಲ್ಲಿ ಹೆಚ್ಚು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ಕಾಫಿ, ಕರಿಮೆಣಸು, ಭತ್ತ, ಶುಂಠಿ, ಕೆಸ, ಕೆನ್ನೆ, ಆಲೂಗಡ್ಡೆ, ಗೆಣಸು ಸೇರಿದಂತೆ ಇತರ ಕೃಷಿ ಮಾಡಲಾಗುತ್ತದೆ. ಕೃಷಿ ಚಟುವಟಿಕೆಗಳಿಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಲು ಸುಂಟಿಕೊಪ್ಪ ಹೋಬಳಿ ಕೇಂದ್ರವನ್ನೇ ಅವಲಂಬಿಸಬೇಕಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ಕಷ್ಟಸಾಧ್ಯ. ಆದಷ್ಟು ಬೇಗ ರಸ್ತೆಯನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯವರು ಕ್ರಮ ವಹಿಸಲಿ.
    ನಂಜೇಗೌಡ ಕೃಷಿಕ, ಹೆರೂರು ಗ್ರಾಮ

    ಈ ಗ್ರಾಮದವರು ಕೃಷಿಯನ್ನೇ ಅವಲಂಬಿಸಿದ್ದು, ಕೃಷಿಗೆ ಪೂರಕವಾದ ಸಾಮಕ್ರಗಳನ್ನು ಕೊಳ್ಳಲು ಸುಂಟಿಕೊಪ್ಪದಲ್ಲಿರುವ ವಿವಿದೋದ್ಧೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘಕ್ಕೆ ಬರಬೇಕಿದೆ. ಕೃಷಿಕರು ಪ್ರಾಯಾಸ ಪಟ್ಟು ಬರಬೇಕಿದ್ದು, ಎಲ್ಲರ ಹಿತದೃಷ್ಟಿಯಿಂದ ಈ ರಸ್ತೆಯನ್ನು ಡಾಂಬರೀಕರಣ ಮಾಡಬೇಕು.
    ಕೆ.ಆರ್.ಮಂಜುನಾಥ್ ನಿರ್ದೇಶಕ, ವಿವಿದೋದ್ಧೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ.

    ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಕೋರಿ ಈ ಹಿಂದಿನ ಆಡಳಿತ ಮಂಡಳಿ ಹಾಗೂ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಆಡಳಿತ ಮಂಡಳಿ ಹಲವು ಬಾರಿ ಸಂಬಂಧಿಸಿದ ಇಲಾಖೆಯೊಂದಿಗೆ ಹತ್ತಾರು ಬಾರಿ ಪತ್ರ ವ್ಯವಹಾರ ಮಾಡಲಾಗಿದೆ. ಅಲ್ಲದೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸಭಾ ನಿರ್ಣಯವನ್ನು ಸಂಬಂಧಪಟ್ಟವರ ಗಮನಕ್ಕೂ ತರಲಾಗಿದೆ.
    ಗೂಳಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts