More

    ಮಲ್ಲಿಕಟ್ಟೆ ಪಾರ್ಕ್ ಪ್ರಗತಿಗೆ ಹಿನ್ನಡೆ: ಮೊದಲ ಹಂತದ ಕೆಲಸ ಬಹುತೇಕ ಪೂರ್ಣ

    ಮಂಗಳೂರು: ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ಮಲ್ಲಿಕಟ್ಟೆಯ ಲೈಬ್ರರಿ ಪಾರ್ಕ್‌ಗೆ ಕೊನೆಗೂ ಅಭಿವೃದ್ಧಿ ಭಾಗ್ಯ ಲಭಿಸಿದ್ದು, ಮೊದಲ ಹಂತದಲ್ಲಿ ಆವರಣ ಗೋಡೆ, ಗೇಟ್, ಕಬ್ಬಿಣದ ಗ್ರಿಲ್ಸ್ ಅಳವಡಿಕೆ ಬಹುತೇಕ ಪೂರ್ಣಗೊಂಡಿದೆ. ಆದರೆ ಆರಂಭದಲ್ಲಿ ವೇಗವಾಗಿದ್ದ ಕಾಮಗಾರಿ ಸದ್ಯ ಸ್ಥಗಿತಗೊಂಡಿದ್ದು, ಒಂದು ತಿಂಗಳಿನಿಂದ ಕೆಲಸ ನಡೆದಿಲ್ಲ.

    ಪಾರ್ಕ್‌ನ ಸೌಂದರ್ಯ ಹೆಚ್ಚಿಸಲು ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಅದಕ್ಕೆ ಸಂಬಂಧಿಸಿದ ಪತ್ರ ವ್ಯವಹಾರ ನಡೆಯುತ್ತಿರುವುದರಿಂದ ಕೆಲವು ದಿನಗಳಿಂದ ಕೆಲಸ ಸ್ಥಗಿತಗೊಂಡಿದೆ ಎನ್ನುತ್ತಾರೆ ಸ್ಥಳೀಯ ಕಾರ್ಪೊರೇಟರ್ ಮನೋಹರ್ ಕದ್ರಿ. ಈ ನಡುವೆ ಪಾರ್ಕ್ ಹಿಂದಿಗಿಂತ ಸ್ವಲ್ಪ ಭಿನ್ನವಾಗಿ ಕಾಣಿಸುತ್ತಿದ್ದು, ಆ ಭಾಗದಲ್ಲಿ ಕಂಡು ಬರುತ್ತಿದ್ದ ಅಲೆಮಾರಿಗಳು ಸದ್ಯ ಇಲ್ಲವಾಗಿದ್ದಾರೆ ಅಥವಾ ಹಿಂದಿಗಿಂತ ಕಡಿಮೆಯಾಗಿದ್ದಾರೆ.

    ಪಾರ್ಕ್ ಅಭಿವೃದ್ಧಿ ಕುರಿತಂತೆ ಸ್ಥಳೀಯರು, ಸಾಮಾಜಿಕ ಕಾರ್ಯಕರ್ತರು ಹಲವಾರು ವರ್ಷಗಳಿಂದ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಆದರೆ ಅಭಿವೃದ್ಧಿ ಮರೀಚಿಕೆಯಾಗಿತ್ತು. 15ನೇ ಹಣಕಾಸು ಯೋಜನೆಯಲ್ಲಿ 14 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಆವರಣ ಗೋಡೆ ನಿರ್ಮಾಣ, ಎರಡನೇ ಹಂತದಲ್ಲಿ ಪಾರ್ಕ್ ಅನ್ನು ಸಂಪೂರ್ಣ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

    ಗ್ರಂಥಾಲಯ ದುರಸ್ತಿ: ಪಾರ್ಕ್‌ನಲ್ಲಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದ ನಗರ ಕೇಂದ್ರ ಗ್ರಂಥಾಲಯದ ಕದ್ರಿ ಶಾಖೆಯ ಕಟ್ಟಡ ನಿರ್ಮಾಣವಾಗಿ ಹಲವು ವರ್ಷಗಳೇ ಸಂದಿವೆ. ಪ್ರಸ್ತುತ ಕಟ್ಟಡ ಸಂಪೂರ್ಣ ಹಾಳಾಗಿದೆ. ಗೋಡೆಯಲ್ಲಿ ನೀರು ಲೀಕ್ ಆಗುತ್ತಿದೆ. ಯೋಗೀಶ್ ಭಟ್ ಶಾಸಕರಾಗಿದ್ದಾಗ ಮೇಲಂತಸ್ತು ನಿರ್ಮಿಸಲಾಗಿದ್ದು, ಅಲ್ಲಿಗೆ ಅಳವಡಿಸಲಾಗಿರುವ ಶೀಟ್‌ನಲ್ಲೂ ಮಳೆಗೆ ನೀರು ಸೋರಿಕೆಯಾಗುತ್ತಿದೆ. ಇದರಿಂದ ಕಟ್ಟದಲ್ಲಿರುವ ಬೆಲೆಬಾಳುವ ಪುಸ್ತಕಗಳು, ಕಂಪ್ಯೂಟರ್ ಸಹಿತ ವಿವಿಧ ಉಪಕರಣಗಳು ಹಾನಿಗೀಡಾಗುವ ಭೀತಿ ಇದೆ. ಆದ್ದರಿಂದ ಪಾರ್ಕ್ ಅಭಿವೃದ್ಧಿ ಜತೆಗೆ ಗ್ರಂಥಾಲಯವನ್ನೂ ದುರಸ್ತಿ ಮಾಡಲು ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಿಸುವ ಉದ್ದೇಶವನ್ನೂ ಹೊಂದಲಾಗಿದೆ.

    ಪಾರ್ಕ್ ಅಭಿವೃದ್ಧಿಗೆ ಸಂಬಂಧಿಸಿ ಈಗಾಗಲೇ ಮೊದಲ ಹಂತದ ಕಾಮಗಾರಿ ಬಹುತೇಕ ಮುಗಿದಿದೆ. ಎರಡನೇ ಹಂತದ ಕೆಲಸಕ್ಕೆ ಸುಮಾರು 50-60 ಲಕ್ಷ ರೂ. ಮೊತ್ತದ ಅವಶ್ಯಕತೆಯಿದೆ. ಮುಡಾದಿಂದ ಕೆಲಸ ಮಾಡಿಸಲು ಮನವಿ ಮಾಡಲಾಗಿತ್ತು. ಕರ್ಣಾಟಕ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಅಭಿವೃದ್ಧಿ ಮಾಡಿಸುವ ಚಿಂತನೆಯೂ ಇದೆ. ಶೀಘ್ರ ಈ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗುವುದು.
    ಮನೋಹರ್ ಕದ್ರಿ ಕಾರ್ಪೊರೇಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts