More

    ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಸಿಎಂ ಗದ್ದುಗೆ?

    ಬಾಬುರಾವ ಯಡ್ರಾಮಿ ಕಲಬುರಗಿ
    ರಾಜಕೀಯದಲ್ಲಿ ತನ್ನದೇ ಆದ ಹಿಡಿತ ಹೊಂದಿರುವ ಕಲಬುರಗಿ ಜಿಲ್ಲೆಗೆ ಮತ್ತೊಮ್ಮೆ ರಾಜ್ಯದ ಉನ್ನತ ಸ್ಥಾನವಾಗಿರುವ ಮುಖ್ಯಮಂತ್ರಿ ಹುದ್ದೆ ಲಭಿಸಲಿದೆಯೇ? ಕರುನಾಡಿನ ನೂತನ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಇಬ್ಬರ ನಡುವಿನ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಹೈಕಮಾಂಡ್, ಆ ಇಬ್ಬರನ್ನು ಬಿಟ್ಟು ತನ್ನ ಅಭ್ಯರ್ಥಿಯನ್ನು ಸಿಎಂ ಪಟ್ಟಕ್ಕೇರಿಸಲು ಮನಸ್ಸು ಮಾಡಿದ್ದಲ್ಲಿ ತೊಗರಿ ನಾಡಿನ ಪುತ್ರ, ರಾಷ್ಟçದ ಹಿರಿಯ ಮುತ್ಸದ್ಧಿ ಮಲ್ಲಿಕಾರ್ಜುನ ಖರ್ಗೆ ನಾಡದೊರೆ ಆಗುವ ಚರ್ಚೆಗೆ ರೆಕ್ಕೆಪುಕ್ಕ ಬಂದಿವೆ.
    ಕಲಬುರಗಿಯವರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜಕೀಯ ಅದೃಷ್ಟವಿದೆ. ಅವರು ಬೇಡವೆಂದು ದೂರ ಸರಿದರೂ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಾನಾಗಿಯೇ ಅರಸಿ ಬಂದಿದೆ. ಅದಕ್ಕೂ ಮೊದಲು ರಾಜ್ಯಸಭೆ ಪ್ರತಿಪಕ್ಷ ಸ್ಥಾನವೂ ಅವರ ಹೆಗಲೇರಿತ್ತು. ಪಕ್ಷನಿಷ್ಠೆ ಜತೆಗೆ ರಾಷ್ಟ್ರ ಕಾರಣದಲ್ಲಿ ಘಟಿಸಿದ ಕೆಲ ಬೆಳಗವಣಿಗೆಗಳಿಂದ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್‌ಗೆ ಆಪ್ತರಾಗಿದ್ದಾರೆ. ಅವರ ಮೇಲಿನ ವಿಶ್ವಾಸ ಇಮ್ಮಡಿಸಿದ್ದರ ಪರಿಣಾಮ ಆ ಎರಡು ಸ್ಥಾನ ಬೇಡವೆಂದರೂ ಅರಸಿಕೊಂಡು ಬಂದವು.
    ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲೂ ಹೀಗಾದರೂ ಆಗಬಹುದು ಎನ್ನುತ್ತಿವೆ ದೆಹಲಿಯಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್ ಉನ್ನತ ಮೂಲಗಳು. ಮತ್ತೊಮ್ಮೆ ಲಕ್ಕಿ ಗೇಮ್ ಓಪನ್ ಆದರೆ ಖರ್ಗೆ ಸಿಎಂ ಆಗಬಹುದು.
    ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಬಹುಮತ ಬಂದಿದ್ದರೂ ಮುಖ್ಯಮಂತ್ರಿ ಆಯ್ಕೆ ಕ್ಷಣ ಕ್ಷಣಕ್ಕೂ ಕಗ್ಗಂಟಾಗಿ ಹಗ್ಗ-ಜಗ್ಗಾಟ ನಡೆದಿದೆ. ಹೀಗಾಗಿ ಹೈಕಮಾಂಡ್ ಹೊಸ ವರಸೆ ಆರಂಭಿಸಿದರೂ ಅಚ್ಚರಿಪಡಬೇಕಿಲ್ಲ.
    ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಬ್ಬರ ಜತೆ ಮಾತುಕತೆ ನಡೆಸುತ್ತಿರುವ ಹೈಕಮಾಂಡ್, ರಾಜಿ ಸಂಧಾನ ಸೂತ್ರಕ್ಕೆ ಒಪ್ಪಿಕೊಂಡು ಅಧಿಕಾರ ಅವಧಿ ಹಂಚಿಕೊಂಡು ಆಡಳಿತ ನಡೆಸಲು ಇಬ್ಬರು ಸಹಮತ ವ್ಯಕ್ತಪಡಿಸದಿದ್ದರೆ ಕೊನೆಗೆ ತನ್ನ ವರಸೆ ಆರಂಭಿಸಲಿದೆ.
    ಮಲ್ಲಿಕಾರ್ಜುನ ಖರ್ಗೆ ಹೆಸರು ಸಿಎಂ ಹುದ್ದೆಗೆ ಘೋಷಣೆಯೂ ಮಾಡಬಹುದು. ಇದರಿಂದಾಗಿ ಸಿಎಂ ಆಗಲು ಕಾತರದಿಂದ ಕಾದು ಕುಳಿತಿರುವ ಡಿಕೆಶಿ ಮತ್ತು ಸಿದ್ದರಾಮಯ್ಯ ಅನಿವಾರ್ಯವಾಗಿ ಗಪ್‌ಚುಪ್ ಆಗಬೇಕಾಗತ್ತದೆ. ಅಂತಹ ಪರಿಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯತೆಯನ್ನು ಈಗಿನ ದೆಹಲಿಯ ಬೆಳವಣಿಗೆಗಳು ಪುಷ್ಟೀಕರಿಸುತ್ತಿವೆ.
    ಐದು ದಶಕದ ರಾಜಕೀಯ ಜೀವನದಲ್ಲಿ ಮಲ್ಲಿಕಾರ್ಜುನ ಖರ್ಗೆ ತಮಗೆ ದೊರೆತ ಎಲ್ಲ ಅವಕಾಶ ಮತ್ತು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾಗೆ ನೋಡಿದರೆ ಅವರು ಯಾವತ್ತೋ ಕರ್ನಾಟಕ ಸಿಎಂ ಆಗಬೇಕಿತ್ತು ಎಂದು ಮಾಜಿ ಪ್ರಧಾನಿ, ಮಾಜಿ ಸಿಎಂಗಳು ಸೇರಿ ಅನೇಕ ಹಿರಿಯ ಮುಖಂಡರು ಅನೇಕ ಸಲ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ದಲಿತ ಸಿಎಂ ಚರ್ಚೆ ಮುನ್ನೆಲೆಗೆ ಬಂದರೂ ಖುದ್ದು ಖರ್ಗೆ ಅವರು ನನಗೆ ಆ ಹುದ್ದೆ ನೀಡುವುದು ಬೇಡ. ನನ್ನ ಸಾಮರ್ಥ್ಯ ಮತ್ತು ಕಾರ್ಯವೈಖರಿ ನೋಡಿ ಕೊಡುವುದಾದರೆ ಕೊಡಲಿ. ಅದೃಷ್ಟ ಇದ್ದರೆ ಎಲ್ಲವೂ ಬರುತ್ತದೆ ಎಂದು ಹೇಳಿಕೊಂಡಿದ್ದರು.
    ರಾಜ್ಯ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವುದಾದರೆ ನಾನು ಬೆಂಬಲಿಸಿ ಹಿಂದೆ ಸರಿಯುವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಆರಂಭದಲ್ಲೇ ಕಟ್ಟಿ ಹಾಕುವ ಪ್ರಯತ್ನ ಮಾಡಿದ್ದರು. ಈಗಲೂ ಡಿಕೆಶಿ ಈ ಬೇಡಿಕೆಯನ್ನು ವರಿಷ್ಠರ ಮುಂದೆ ಮಂಡಿಸಿದರೂ ಅಚ್ಚರಿಪಡಬೇಕಿಲ್ಲ. ಹಾಗೇನಾದರೂ ಆದರೆ ಕಲಬುರಗಿ ಧರತಿ ಪುತ್ರ ಮಲ್ಲಿಕಾರ್ಜುನ ಖರ್ಗೆ ಸಿಎಂ ಹುದ್ದೆಯತ್ತ ಹೆಜ್ಜೆ ಹಾಕಬಹುದು. ಆದರೆ ರಾಜಕೀಯದಲ್ಲಿ ಯಾವಾಗ ಏನು ಬೆಳವಣಿಗೆಗಳು ನಡೆಯುತ್ತವೆಯೋ ಎಂಬುದನ್ನು ಕಾದು ನೋಡಬೇಕಷ್ಟೆ.

    ಇಬ್ಬರ ಗುದ್ದಾಟದಲ್ಲಿ ಖುಲಾಯಿಸುತ್ತಾ ಅದೃಷ್ಟ?
    ಚುನಾವಣೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವತಃ ಮಲ್ಲಿಕಾಜರ್ಜುನ ಖರ್ಗೆ ಹೆಸರನ್ನು ಸಿಎಂ ರೇಸ್‌ಗೆ ಎಳೆತಂದಿದ್ದರು. `ಖರ್ಗೆ ನಮ್ಮ ಹಿರಿಯರು. ಅವರ ಕೈಕೆಳಗೆ ಕೆಲಸ ಮಾಡಲು ಖುಷಿಯಾಗುತ್ತದೆ. ಅವರು ೧೯೭೨ರಲ್ಲಿ ಶಾಸಕರಾದವರು. ನಾನು ೧೯೮೫ರಲ್ಲಿ ಶಾಸಕನಾದೆ. ಪಾಪ ಅವರು ರಾಜ್ಯದ ಮುಖ್ಯಮಂತ್ರಿ ಆಗಲಿಲ್ಲ. ಅನ್ಯಾಯ ಆಗಿದೆ’ ಎಂದು ಸಿಡಿಸಿರುವ ಬಾಂಬ್ ಕೈ ಪಾಳಯ ಮಾತ್ರವಲ್ಲ, ರಾಜ್ಯ ರಾಜಕೀಯದಲ್ಲಿ ನಾನಾ ತರಹದ ಚರ್ಚೆ, ವ್ಯಾಖ್ಯಾನಗಳಿಗೆ ಕಾರಣವಾಗಿತ್ತು. ಇದೀಗ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರುವ ಹೊತ್ತಿನಲ್ಲಿ ಸಿಎಂ ಗದ್ದುಗೆಗೇರಲು ಡಿಕೆಶಿ ಮತ್ತು ಸಿದ್ದರಾಮಯ್ಯ ಮಧ್ಯೆ ನಡೆದಿರುವ ಹಗ್ಗ-ಜಗ್ಗಾಟ, ಇವರಿಬ್ಬರಲ್ಲಿ ಯಾರನ್ನು ಆ ಸ್ಥಾನದಲ್ಲಿ ಕುಳ್ಳಿರಿಸಿದರೂ ಪಕ್ಷಕ್ಕೆ ಆಗುವ ಲಾಭ-ನಷ್ಟದ ಲೆಕ್ಕಾಚಾರ ಹಾಕುತ್ತಿರುವ ಹೈಕಮಾಂಡ್, ಇಬ್ಬರ ಮಧ್ಯೆ ಈ ಚುನಾವಣೆಯಲ್ಲಿ ಪಕ್ಷ ಬಹುಮತ ಸಾಧಿಸಲು ಕಾರಣೀಕರ್ತರಾದ ಖರ್ಗೆ ಅವರನ್ನೇಕೆ ಸಿಎಂ ಮಾಡಬಾರದು ಎಂಬ ನಿಲುವು ತಳೆದರೆ ಕಲಬುರಗಿ ಜಿಲ್ಲೆಗೆ ಖರ್ಗೆ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಗದ್ದುಗೆ ದೊರೆಯುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

    ಮೂರು ಬಾರಿ ಕೈತಪ್ಪಿದ ಮುಖ್ಯಮಂತ್ರಿ ಸ್ಥಾನ
    ೮೦ರ ಹರೆಯದ ಖರ್ಗೆ ರಾಜಕೀಯ ಹಾದಿ ಬಲು ರೋಚಕ. ಇವರಿಗೆ ಜನ್ಮ ಭೂಮಿ ಬೀದರ್(ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮ) ಆದರೆ ಕರ್ಮಭೂಮಿ ಕಲಬುರಗಿ. ತಮ್ಮ ಆರು ದಶಕದ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತ ಕಂಡಿದ್ದಾರೆ. ಆದರೆ ಯಾವತ್ತೂ ಪಕ್ಷ ನಿಷ್ಠೇ ಬಿಟ್ಟಿಲ್ಲ. ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಂಡವರಲ್ಲ. ಇದೇ ಇವರನ್ನು ಹಳ್ಳಿ ಟು ದಿಲ್ಲಿಗೆ ಒಯ್ದು ರಾಷ್ಟ್ರ ಮಟ್ಟದ ನಾಯಕರನ್ನಾಗಿ ನಿಲ್ಲಿಸಿದೆ. ಹಾಗೆ ನೋಡಿದರೆ ಸಿಎಂ ಕುರ್ಚಿ ಎಂದೋ ಸಿಗಬೇಕಿತ್ತು. ಆದರೆ ರಾಜಕೀಯ ಚದುರಂಗದಾಟದಲ್ಲಿ ಈ ಭಾಗ್ಯ ಒಲಿಯಲೇ ಇಲ್ಲ. ೧೯೯೯, ೨೦೦೪ ಹಾಗೂ ೨೦೧೩ರಲ್ಲಿ ಖರ್ಗೆಗೆ ಸಿಎಂ ಹುದ್ದೆ ಕೈತಪ್ಪಿದವು. ಕ್ರಮವಾಗಿ ಎಸ್.ಎಂ. ಕೃಷ್ಣ, ಧರ್ಮಸಿಂಗ್, ಸಿದ್ದರಾಮಯ್ಯ ಈ ಸ್ಥಾನ ಅಲಂಕರಿಸಿದರು. ಸಿಎಂ ಗಾದಿಗೇರದ ನೋವು ಖರ್ಗೆಗೆ ಇರಬಹುದು. ಆದರೆ ಯಾವತ್ತೂ ಬಹಿರಂಗವಾಗಿ ಹೇಳಿಲ್ಲ. ಇದೀಗ ಸಿಎಂ ರೇಸ್‌ಲ್ಲಿ ಇವರ ಹೆಸರು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಖರ್ಗೆ ತಲೆಕೆಡಿಸಿಕೊಂಡAತಿಲ್ಲ. ಹಿಂದಿನ ಕೆಟ್ಟ ಅನುಭವವೇ ಇದಕ್ಕೆ ಕಾರಣ ಇರಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts