More

    ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗದ ಭೀತಿ

    ಅವಿನಾಶ್ ಜೈನಹಳ್ಳಿ ಮೈಸೂರು
    ಮುಂಗಾರು ಮಳೆ ಆರಂಭಕ್ಕೆ ಮುನ್ನವೇ ಜಿಲ್ಲೆಯಲ್ಲಿ ಐದು ದಿನಗಳಿಂದ ಮಳೆಯಾಗಿದ್ದು, ಸಾಂಕ್ರಾಮಿಕ ರೋಗಗಳು ಉಲ್ಬಣಿಸುವ ಭಯ ಕಾಡುತ್ತಿದೆ. ಸೊಳ್ಳೆ ಹೆಚ್ಚಾಗಿ, ಜನರು ಕಾಯಿಲೆ ಬೀಳುವ ಸಂಭವ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಮತ್ತು ಆರೋಗ್ಯ ಇಲಾಖೆ ಎಚ್ಚರ ವಹಿಸಬೇಕಿದೆ.

    ಎಲ್ಲೆಡೆ ಸೊಳ್ಳೆ ಕಾಟ ಮಿತಿ ಮೀರಿದೆ. ಈಗಾಗಲೇ ನಗರದ ರಾಜೀವ್‌ನಗರ, ಗಾಯತ್ರಿಪುರಂ ಸೇರಿದಂತೆ ನಾನಾ ಭಾಗದಲ್ಲಿ ಜ್ವರ ಪ್ರಕರಣ ಹೆಚ್ಚಾಗಿ ಕಂಡುಬಂದಿರುವುದು ವರದಿಯಾಗಿದೆ.

    ಮಳೆಯಿಂದ ಕೆಮ್ಮು, ಶೀತ, ನೆಗಡಿ ಮುಂತಾದ ಸೋಂಕಿನ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ರೋಗಗಳ ಮುಖ್ಯ ಲಕ್ಷಣವೇ ಜ್ವರ. ಮಳೆ ಬಿದ್ದಾಗ ಸೊಳ್ಳೆ ಹೆಚ್ಚಾಗುವುದರಿಂದ ಡೆಂೆ, ಇಲಿಜ್ವರ, ಟೈಫಾಯ್ಡ, ವೈರಾಣು ಜ್ವರ, ಕಾಲರ ಇನ್ನಿತರ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಈ ಎಲ್ಲ ಕಾಯಿಲೆಗಳ ಆರಂಭದಲ್ಲಿ ಜ್ವರವಷ್ಟೇ ಕಾಣಿಸಿಕೊಂಡರೂ, ಜತೆಯಲ್ಲೇ ಇತರ ನಿರ್ದಿಷ್ಟ ಗುಣಲಕ್ಷಣ ಇರುತ್ತವೆ. ಇನ್ನೂ ಐದು ದಿನಗಳ ಕಾಲ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜೂನ್ ಮೊದಲ ವಾರದಿಂದ ಮುಂಗಾರು ಮಳೆ ಆರಂಭವಾಗಲಿದ್ದು, ಸಾರ್ವಜನಿಕರು ಮನೆಯ ಸುತ್ತಮುತ್ತ ಮಳೆ ನೀರು ನಿಲ್ಲದಂತೆ, ಸೊಳ್ಳೆಗಳ ಸಂತತಿ ಹೆಚ್ಚದಂತೆ ನೋಡಿಕೊಳ್ಳಬೇಕು. ನೀರು ಮತ್ತು ಆಹಾರ ವ್ಯತ್ಯಾಸದಿಂದ ಈ ರೋಗಗಳು ಬರುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ.

    ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ಅಗತ್ಯ

    ಮಳೆಗಾಲದಲ್ಲಿ ಜ್ವರ, ಮಲೇರಿಯಾ, ಡೆಂೆ ಇನ್ನಿತರ ಸಾಂಕ್ರಾಮಿಕ ರೋಗಗಳು ಸೊಳ್ಳೆಗಳಿಂದ ಹೆಚ್ಚಾಗುತ್ತವೆ. ಆದ್ದರಿಂದ ಸಾರ್ವಜನಿಕರು ಮತ್ತು ಸ್ಥಳೀಯ ಸಂಸ್ಥೆ ಅಧಿಕಾರಿಗಳು ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಕಸದ ರಾಶಿಗಳನ್ನು ತೆರವುಗೊಳಿಸಬೇಕು, ಎಲ್ಲೆಡೆ ತ್ಯಾಜ್ಯ ಸುರಿಯುವುದನ್ನು ಕಡಿಮೆ ಮಾಡಬೇಕು. ಎಲ್ಲಿಯೂ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆಗ ಸೊಳ್ಳೆಗಳ ಸಂತಾನೋತ್ಪತ್ತಿ ತಪ್ಪಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು.

    ಕುದಿಸಿ ಆರಿಸಿದ ನೀರು ಸೇವಿಸಬೇಕು. ಬಿಸಿಯಾದ ಊಟ, ಶುದ್ಧ ಆಹಾರ ಸೇವಿಸಬೇಕು. ಬಯಲಲ್ಲಿ ಮಲ ವಿಸರ್ಜನೆ ಮಾಡದೆ ಕಡ್ಡಾಯವಾಗಿ ಶೌಚಗೃಹ ಬಳಸಬೇಕು. ಹೋಟೆಲ್ಗಳಲ್ಲಿ ಶುದ್ಧ ಆಹಾರ ಮತ್ತು ಕುಡಿಯಲು ಬಿಸಿನೀರು ನೀಡಬೇಕು. ತ್ಯಾಜ್ಯ ವಸ್ತುಗಳನ್ನು ಜನವಸತಿ ಪ್ರದೇಶದ ಹೊರಗಡೆ, ನಿಗದಿತ ಸ್ಥಳದಲ್ಲಿ ಹಾಕಬೇಕು. ಗ್ರಾಮ/ಬಡಾವಣೆ, ಮನೆಗಳ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ತೆರೆದಿಟ್ಟ ತಿಂಡಿ ತಿನಿಸುಗಳು ಮತ್ತು ಕತ್ತರಿಸಿ ಇಟ್ಟಿರುವ ಹಣ್ಣುಗಳನ್ನು ತಿನ್ನಬಾರದು. ಊಟಕ್ಕೆ ಮುಂಚೆ ಹಾಗೂ ಮಲ ವಿಸರ್ಜನೆ ನಂತರ ಕೈಗಳನ್ನು ಸ್ವಚ್ಛ ನೀರಿನಿಂದ ತೊಳೆದುಕೊಳ್ಳಬೇಕು. ಬೆಚ್ಚಗಿನ ಹತ್ತಿ ಬಟ್ಟೆಗಳನ್ನು ತೊಡಬೇಕು.

    ರೋಗದ ಲಕ್ಷಣಗಳು

    ಚಿಕೂನ್‌ಗೂನ್ಯ ರೋಗಿ ಜ್ವರದೊಂದಿಗೆ, ಕಾಲು ಮತ್ತು ಕೈಗಳ ಕೀಲುಗಳಲ್ಲಿ ಊತ ಹಾಗೂ ನೋವು ಅನುಭವಿಸುತ್ತಾನೆ. ವೈರಾಣು ಜ್ವರ ಪೀಡಿತ ವ್ಯಕ್ತಿ ಇಡೀ ದೇಹದಲ್ಲಿ ನೋವು ಮತ್ತು ಆಯಾಸ ಅನುಭವಿಸುತ್ತಾನೆ. ಒಮ್ಮೊಮ್ಮೆ ಗಂಟಲು ನೋವು, ಶೀತ ಮತ್ತು ಕೆಮ್ಮು ಬರಬಹುದು. ಮಲೇರಿಯಾ ಕಾಯಿಲೆಯ ಮುಖ್ಯ ಗುಣಲಕ್ಷಣ ಚಳಿ-ಜ್ವರ. ಆದರೆ, ನಮ್ಮ ಜಿಲ್ಲೆಯಲ್ಲಿ ಐದು ವರ್ಷದಿಂದ ಒಂದೇ ಒಂದು ಮಲೇರಿಯಾ ಪ್ರಕರಣ ದಾಖಲಾಗಿಲ್ಲ ಎನ್ನುವುದು ಖುಷಿಯ ಸಂಗತಿ.

    ಸೊಳ್ಳೆಗಳಿಂದ ಹರಡುವ ಅನಾರೋಗ್ಯದಿಂದ ಜ್ವರದ ಜತೆಗೆ ತಲೆನೋವು, ಆಯಾಸ, ವಾಂತಿ ಮುಂತಾದ ಸಮಸ್ಯೆಗಳಿಂದ ಬಳಲಬಹುದು. ಡೆಂೆ ಜ್ವರದಲ್ಲಿ ದೇಹದ ಉಷ್ಣತೆ ಸಾಮಾನ್ಯಕ್ಕಿಂತಲೂ ಹೆಚ್ಚಾಗುವುದರ ಜತೆಗೆ, ಕೀಲು ಹಾಗೂ ಮಾಂಸಖಂಡಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳಬಹುದು. ಚರ್ಮದ ಮೇಲೆ ಕೆಂಪು-ಕಪ್ಪು ಮಚ್ಚೆಗಳು ಮತ್ತು ಒಮ್ಮೊಮ್ಮೆ ಮೂಗು-ಬಾಯಿಯಲ್ಲಿ ರಕ್ತ ಸ್ರಾವವೂ ಕಂಡುಬರಬಹುದು. ಟೈಫಾಯ್ಡ ರೋಗಿ ಜ್ವರದ ಜತೆ ತಲೆನೋವು, ಹೊಟ್ಟೆನೋವು, ವಾಂತಿ, ಕೆಲವೊಮ್ಮೆ ಅತಿಸಾರದಂತಹ ಸಮಸ್ಯೆಗಳಿಂದಲೂ ಬಳಲಬಹುದು. ಇಲಿಜ್ವರದ ರೋಗಿ ನಿತ್ರಾಣನಾಗಿ, ರಕ್ತದೊತ್ತಡ ಕಡಿಮೆಯಾಗಬಹುದು. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ವಿಪರೀತ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡರೂ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು. ಇಲ್ಲವಾದರೆ, ಬಡಾವಣೆ/ಗ್ರಾಮದಲ್ಲಿ ಒಬ್ಬರಿಗೆ ಈ ಸಾಂಕ್ರಾಮಿಕ ರೋಗ ತಗುಲಿದರೂ ಮುಂದೆ ಹೆಚ್ಚು ಜನರಿಗೆ ಹರಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಎಲ್ಲರೂ ಎಚ್ಚರ ವಹಿಸಬೇಕಾಗಿದೆ.

    ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ಸದ್ಯ ಮಳೆಯಾಗುತ್ತಿರುವುದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಈ ಬಗ್ಗೆ ನಮ್ಮ ಇಲಾಖೆ ವರ್ಷ ಪೂರ್ತಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.
    ಎಸ್.ಚಿದಂಬರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts