More

    ಮಹಿಳಾ ದಿನಾಚರಣೆಗಳಲ್ಲಿ ಪುರುಷರು ಹೆಚ್ಚಿರಲಿ

    ಕೊಳ್ಳೇಗಾಲ: ಮಹಿಳಾ ದಿನಾಚರಣೆಗಳಲ್ಲಿ ಹೆಣ್ಣು ಮಕ್ಕಳಿಗಿಂತ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು ಎಂದು ಮೈಸೂರಿನ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ ಅಭಿಪ್ರಾಯಪಟ್ಟರು.


    ಪಟ್ಟಣದ ಗುರುಭವನದಲ್ಲಿ ಮಂಗಳವಾರ ಚಾಮರಾಜನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಭಾರತ ಸರ್ಕಾರದ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಆರೋಗ್ಯ ಕುರಿತ ವಿಶೇಷ ಕಾರ್ಯಕ್ರಮ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


    ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಾ.8ರಂದು ಆಚರಿಸಲಿದ್ದು, ಅದಕ್ಕೆ ಪೂರ್ವಭಾವಿಯಾಗಿ 7 ದಿನಗಳ ಕಾರ್ಯಕ್ರಮವನ್ನು ಸೋಮವಾರದಿಂದ ಕೇಂದ್ರ ಸರ್ಕಾರ ಕೈಗೊಂಡಿದೆ. ವ್ಯಕ್ತಿ ವ್ಯಕ್ತಿಗಳ ನಡುವಿನ ಅಂತರ್ ಸಂವಹನ ವೃದ್ಧಿಸುವಲ್ಲಿ ಕ್ಷೇತ್ರ ಜನ ಸಂಪರ್ಕ ಇಲಾಖೆ ಕಾರ್ಯಕ್ರಮ ರೂಪಿಸುವಲ್ಲಿ ಶ್ರಮಿಸುತ್ತಿದೆ. ಈ ನಡುವೆ 7 ದಿನಗಳ ಕಾರ್ಯಕ್ರಮದಲ್ಲೊಂದು ದಿನವನ್ನು ಹಬ್ಬದ ಉಪ ಹಾದಿಯಲ್ಲಿ ಕೊಂಡೊಯ್ಯಲು ನಿರ್ಧರಿಸಿದ್ದು, ಮಹಿಳೆಯರ ಆರೋಗ್ಯ ಶಿಬಿರ ಮತ್ತು ಗರ್ಭಿಣಿಯರಿಗೆ ಸೀಮಂತ ಮಾಡಿಸಲಾಗುತ್ತಿದೆ ಎಂದರು.


    ಪ್ರಕೃತಿದತ್ತವಾಗಿ ಮತ್ತು ಸಾಂವಿಧಾನಿಕವಾಗಿ ಹೆಣ್ಣು ಪುರುಷರಷ್ಟೇ ಸಮಾನರು ಎಂಬುದು ಸಾಬಿತಾಗಿದೆ. ಜ್ಞಾನ ಮತ್ತು ಶಕ್ತಿಯಲ್ಲಿ ಹೆಣ್ಣು ಮುಂದಿದ್ದಾಳೆ. ಅಗ್ನಿಶಾಮಕ, ಸಾರಿಗೆ, ಪೊಲೀಸ್, ರಕ್ಷಣೆ ಇಲಾಖೆ ಸೇರಿ ಎಲ್ಲ ಕ್ಷೇತ್ರದಲ್ಲಿಯೂ ಸಮರ್ಥಳಾಗಿರುವ ಮಹಿಳೆಗೆ ಸಮಾಜದಲ್ಲಿ ಗೌರವ ಧಕ್ಕಬೇಕಿದೆ.


    ಕೃಷಿ ಮತ್ತು ರೈತ ದೇಶದ ಬೆನ್ನೆಲುಬು ಎಂಬುದೆಲ್ಲ ಹಳೆಯ ಮಾತಾಗಿದ್ದು, ಈಗೇನಿದ್ದರೂ ಹೆಣ್ಣು ಮಕ್ಕಳು ದೇಶದ ಬೆನ್ನೆಲುಬು. ಹೆಣ್ಣು ಕಲಿತರೇ ವಿಶ್ವ ವಿದ್ಯಾನಿಲಯವೊಂದು ತೆರೆದಂತೆ ಎಂಬ ಹೊಸ ಗಾದೆ ಹುಟ್ಟಿಕೊಂಡಿವೆ. ಮಹಿಳಾ ದಿನಾಚರಣೆಗಳಲ್ಲಿ ಪುರುಷರು ಭಾಗವಹಿಸಬೇಕು. ಆಗ ಅವರಿಗೆ ಅರ್ಥವಾಗುತ್ತದೆ. ತನ್ನ ಹೆಂಡತಿ, ಮಗಳು ಸಮರ್ಥಳು, ತಾಯಿ ಅಗತ್ಯ, ಜ್ಞಾನವಂತಳಾದ ಹೆಣ್ಣಿಗೆ ಪೂಜ್ಯ ಸ್ಥಾನ ನೀಡಬೇಕು ಎನಿಸುತ್ತದೆ ಎಂದು ಹೇಳಿದರು.


    ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್ ಮಾತನಾಡಿ, ಎಲ್ಲ ಕ್ಷೇತ್ರವನ್ನೂಪ್ರತಿನಿಧಿಸುವ ಮಹಿಳೆಯರು ನಾವೇನೂ ಕಡಿಮೆ ಇಲ್ಲ ಎಂದು ತಿಳಿಸಿಕೊಟ್ಟಿದ್ದು, ಆತ್ಮ ಸ್ಥೈರ್ಯದೊಂದಿಗೆ ದೇಶದ ಪ್ರಗತಿಗೆ ಮುನ್ನುಗ್ಗುತ್ತಿದ್ದಾರೆ ಎಂದರು.


    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಡಿಪಿಒ ನಾಗೇಶ್ ಮಾತನಾಡಿ, ಪ್ರಧಾನಮಂತ್ರಿ ಮಾತೃವಂದನಾ, ಮಾತೃಶ್ರೀ ಯೋಜನೆ ಸೇರಿದಂತೆ ಇತರ ಕಾರ್ಯಕ್ರಮದಡಿ ಮಹಿಳೆಯರ ಸಬಲೀಕರಣ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳು ಸ್ವಯಂ ಉದ್ಯೋಗದ ಕಡೆಗೂ ಹೆಚ್ಚು ಒಲವು ತೋರಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು ಹೇಳಿದರು.


    ತಾಲೂಕಿನ 20 ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ಮಾಡಲಾಯಿತು. 38ಕ್ಕೂ ಹೆಚ್ಚು ಮಹಿಳೆಯರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.
    ಎಸಿಡಿಪಿಒ ದೀಪಾ, ಮೇಲ್ವಿಚಾರಕರಾದ ಶಿವಲೀಲಾ, ಪ್ರೇಮಲತಾ, ಪೂರ್ಣಿಮಾ, ತಾಲೂಕು ಆರೋಗ್ಯ ಇಲಾಖೆ ಎಲ್‌ಎಚ್‌ಒ ಚಂದ್ರಮ್ಮ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts